ಕಾನೂನುಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯಿದೆಯಡಿ (ಯುಎಪಿಎ) ಬಂಧಿತರಾಗಿದ್ದ ವಿದ್ಯಾರ್ಥಿ ಹೋರಾಟಗಾರರಾದ ಆಸೀಫ್ ಇಕ್ಬಾಲ್ ತನ್ಹಾ, ದೇವಾಂಗನಾ ಕಲಿತಾ ಮತ್ತು ನತಾಶಾ ನರ್ವಾಲ್ ಅವರಿಗೆ ದೆಹಲಿ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದೆ. ಇತ್ತೀಚಿನ ದಿನಗಳಲ್ಲಿ ಯುಎಪಿಎ ಅಡಿ ಬಂಧಿತರಾದವರಿಗೆ ನ್ಯಾಯಾಲಯಗಳು ಜಾಮೀನು ನಿರಾಕರಿಸುತ್ತಿದ್ದುದರಿಂದ ಈ ಪ್ರಕರಣ ಮಹತ್ವ ಪಡೆದುಕೊಂಡಿದೆ.
ದೆಹಲಿ ಹೈಕೋರ್ಟ್‌ನ ಪ್ರಗತಿಪರ ಆದೇಶಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ವೇಳೆ ʼಬಾರ್ ಅಂಡ್ ಬೆಂಚ್ʼಗೆ ನೀಡಿದ ಸಂದರ್ಶನದಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ದೀಪಕ್ ಗುಪ್ತ ಅವರು ಆದೇಶದ ಜೊತೆಗೆ ದೆಹಲಿ ಹೈಕೋರ್ಟ್ ಮಹತ್ವದ ಅಂಶಗಳನ್ನು ಉಲ್ಲೇಖಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದೆಹಲಿ ಹೈಕೋರ್ಟ್ ತೀರ್ಪು ಜನರ ಸ್ವಾತಂತ್ರ್ಯ, ವಿಶೇಷವಾಗಿ ನಾಗರಿಕ ಸ್ವಾತಂತ್ರ್ಯದ ಮೇಲೆ ನಂಬಿಕೆ ಇರಿಸಿಕೊಂಡವರಿಗೆ ಭರವಸೆಯ ದಾರಿದೀಪವಾಗಿದೆ. ಯುಎಪಿಎ ಅಡಿ ಒಮ್ಮೆ ಪ್ರಕರಣದ ದಾಖಲಿಸಿದರೆ, ನ್ಯಾಯಮೂರ್ತಿಗಳೇ ಮೇಲ್ನೋಟಕ್ಕೆ ಜಾಮೀನು ನೀಡಬಹುದು ಎಂದು ನಿರ್ಣಯಿಸದ ಹೊರತು ಜಾಮೀನು ಪಡೆಯಲಾಗದು ಎಂಬ ಭಾವನೆಯಿದೆ. ಮೇಲ್ನೋಟಕ್ಕೆ ಜಾಮೀನಿಗೆ ಅರ್ಹ ಪ್ರಕರಣ ಎಂದು ಹೇಳದಿದ್ದರೂ ಯುಎಪಿಎ ಅಡಿ ದಾಖಲಿಸಿದ ಪ್ರಕರಣದಲ್ಲಿ ಜಾಮೀನು ನೀಡಬಹುದು ಎಂದು ದೆಹಲಿ ಹೈಕೋರ್ಟ್ ಹೇಳಿರುವುದು ಪ್ರಮುಖವಾಗಿದೆ ಎಂದು ಅವರು ವಿವರಿಸಿದ್ದಾರೆ.
ದೆಹಲಿ ಹೈಕೋರ್ಟ್ ತೀರ್ಪು ಸ್ವಾತಂತ್ರ್ಯದ ಪರವಾಗಿದ್ದು, ಅದನ್ನು ಅತ್ಯುತ್ತಮವಾಗಿ ವ್ಯಾಖ್ಯಾನಿಸಲಾಗಿದೆ. ಮಂಗಳವಾರ ನೀಡಲಾದ ಮೂರು ತೀರ್ಪುಗಳಲ್ಲಿ ಸಾಮಾನ್ಯ ಅಂಶಗಳಿವೆ. ತೀರ್ಪನ್ನು ಅತ್ಯುತ್ತಮವಾಗಿ ವ್ಯಾಖ್ಯಾನಿಸಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ನ್ಯಾ. ಗುಪ್ತ ಅವರು ಸಂದರ್ಶಕ ದೇಬಯಾನ್ ರಾಯ್ ಅವರಿಗೆ ತಿಳಿಸಿದ್ದಾರೆ.
ಯುಎಪಿಎ ಎಂದರೇನು ಎಂಬುದಕ್ಕೆ ಹೈಕೋರ್ಟ್ ತಾರ್ಕಿಕ ಪ್ರತಿಪಾದನೆಗಳನ್ನು ನೀಡಿದೆ. 1967ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕಾನೂನಿಗೆ ಆನಂತರ ಭಯೋತ್ಪಾದನೆಯ ವಿಚಾರ ಸೇರಿಸಲಾಗಿದೆ. ಕೊಲೆ ನಡೆದರೆ ಅದು ಯುಎಪಿಎ ಅಡಿ ಅಪರಾಧವಲ್ಲ. ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುವ ಗಂಭೀರ ಆರೋಪಗಳ ವಿರುದ್ಧ ಇದನ್ನು ಬಳಕೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರುದ್ಧ ಹೋರಾಟ ಮಾಡಿದ್ದಕ್ಕೆ ಯುಎಪಿಎ ಅಡಿ ಪ್ರಕರಣ ದಾಖಲಿಸಲಾಗದು. ಸಿಎಎ ಬಗ್ಗೆ ಹೇಳುವುದಾದರೆ ಶಾಂತಿಯುತವಾಗಿ ಪ್ರತಿಭಟಿಸಲು ಎಲ್ಲರಿಗೂ ಹಕ್ಕಿದೆ. ಪ್ರತಿಭಟನಾಕಾರರು ಏನು ಹೇಳುತ್ತಿದ್ದಾರೆ ಎಂಬುದನ್ನು ನಾನು ಒಪ್ಪದಿರಬಹುದು. ಪ್ರತಿಭಟನೆ ಶಾಂತಿಯುತವಾಗಿ ನಡೆಯದಿದ್ದರೂ ಸಾಮಾನ್ಯ ಕಾನೂನು, ಕ್ರಮ ಕೈಗೊಳ್ಳುತ್ತದೆ. ಅದು ಭಯೋತ್ಪಾದನೆ ಚಟುವಟಿಕೆಯಾಗದು. ಈ ದೃಷ್ಟಿಯಲ್ಲಿ ದೆಹಲಿ ಹೈಕೋರ್ಟ್ ತೀರ್ಪು ಅತ್ಯಂತ ಮುಖ್ಯವಾಗಿದೆ. ಪ್ರಕರಣ ಯುಎಪಿಎ ವ್ಯಾಪ್ತಿಗೆ ಒಳಪಡುತ್ತದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುವ ಹಕ್ಕು ನ್ಯಾಯಾಲಯಕ್ಕೆ ಇದೆ ಎಂದಿದ್ದಾರೆ.
ಆರೋಪಗಳು ದೇಶದ ಸಾರ್ವಭೌಮತೆಗೆ ಧಕ್ಕೆ ಉಂಟು ಮಾಡುತ್ತವೆ ಎಂದಾಗಿದ್ದರೆ ಖಂಡಿತವಾಗಿಯೂ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡುತ್ತಿರಲಿಲ್ಲ. ಆರೋಪಗಳು ಭಯೋತ್ಪಾದನಾ ಚಟುವಟಿಕೆಗಳ ವ್ಯಾಪ್ತಿಗೆ ಒಳಪಡುವುದಿಲ್ಲ. ಅಲ್ಲದೇ ದೇಶದ ಸಾರ್ವಭೌಮತ್ವಕ್ಕೆ ಬೆದರಿಕೆ ಒಡ್ಡಿಲ್ಲ ಎಂದು ಮೇಲ್ನೋಟಕ್ಕೆ ಅನಿಸಿದ್ದರಿಂದಲೇ ಜಾಮೀನು ಮಂಜೂರು ಮಾಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಯುಎಪಿಎ ಅಡಿ ಆರೋಪಗಳನ್ನು ಸೇರಿಸುವ ಮೂಲಕ ಜಾಮೀನು ನಿರಾಕರಿಸುವ ಈ ಪ್ರವೃತ್ತಿ ಬಹಳ ಗಂಭೀರವಾಗಿದೆ. ಸೂಕ್ಷ್ಮ ವಿಷಯಗಳಲ್ಲಿ ಜಾಮೀನು ನೀಡಲು ನ್ಯಾಯಾಲಯಗಳು ಹಿಂಜರಿಯುತ್ತವೆ. ಕಲಿತಾ ಸೇರಿದಂತೆ ಇಬ್ಬರು ಯುವತಿಯರು ಕಾನೂನುಬಾಹಿರವಾಗಿ ಏನನ್ನಾದರೂ ಮಾಡಿದ್ದರೆ ಅವರನ್ನು ಸಾಮಾನ್ಯ ಕಾನೂನಿನ ಅಡಿ ವಿಚಾರಣೆಗೆ ಒಳಪಡಿಸಬಹುದಿತ್ತು. ಯುಎಪಿಎ ಅಥವಾ ಬೇರಾವುದೋ ಕಾನೂನಿನ ಅಡಿ ದೂರು ದಾಖಲಿಸಿ ಜಾಮೀನು ನಿರಾಕರಿಸುವುದನ್ನು ಪೀಠ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ ಎಂದರು.
ಖಂಡಿತವಾಗಿಯೂ ಹೈಕೋರ್ಟ್ ತೀರ್ಪು ಅಭೂತಪೂರ್ವವಾದುದಾಗಿದೆ. ಅಭಿಪ್ರಾಯ ಭೇದ ದಾಖಲಿಸುವ ಹಕ್ಕನ್ನು ಎತ್ತಿಹಿಡಿದಿರುವುದರಿಂದ ಈ ತೀರ್ಪು ಅತ್ಯಂತ ಮಹತ್ವದ್ದು ಕೂಡ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಈ ತೀರ್ಪಿನಿಂದ ಪಾಠ ಕಲಿಯುವುದಿದೆ. ಈ ಇಬ್ಬರು ಯುವತಿಯರನ್ನು (ನತಾಶಾ ಮತ್ತು ದೇವಾಂಗನಾ) ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿ ಇಡುವ ಮೂಲಕ ಅವು (ಸರ್ಕಾರಿ ಸಂಸ್ಥೆಗಳು) ಸ್ವಲ್ಪ ಯಶಸ್ಸು ಗಳಿಸಿವೆ. ಈ ಘಟನೆಯಿಂದಾಗಿ ಬೀದಿಗಿಳಿದು ಪ್ರತಿಭಟಿಸುವ ಹಲವು ಯುವಕ/ಯುವತಿಯರನ್ನು ಹೆದರಿಸುವಲ್ಲಿ ಅವು ಸಫಲವಾಗಿವೆ ಎಂದು ಹೇಳಿದ್ದಾರೆ.
ʼತೀರ್ಪನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ದೆಹಲಿ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ತೀರ್ಪನ್ನು ತಳ್ಳಿಹಾಕುವಂತಹ ಕಾರಣಗಳು ಏನಿವೆ?ʼ ಎಂದು ಕೇಳಲಾದ ಪ್ರಶ್ನೆಗೆ ಅವರು "ಹೈಕೋರ್ಟ್ ತೀರ್ಪನ್ನು ಪ್ರಶ್ನಿಸುವುದು ದೆಹಲಿ ಪೊಲೀಸರ ಹಕ್ಕು. ಇದರ ಮೇಲ್ಮನವಿ ನನ್ನ ಪೀಠದ ಮುಂದೆ ವಿಚಾರಣೆಗೆ ಒಳಪಟ್ಟಿದ್ದರೆ ತೀರ್ಪನ್ನು ಎತ್ತಿ ಹಿಡಿಯುತ್ತಿದೆ. ಇತರೆ ನ್ಯಾಯಮೂರ್ತಿಗಳು ಭಿನ್ನ ನಿಲುವು ತಳೆಯಬಹುದು. ನನ್ನ ನಿಲುವೇ ಮತ್ತೊಬ್ಬ ನ್ಯಾಯಮೂರ್ತಿಯ ನಿಲುವು ಆಗಬೇಕಿಲ್ಲ. ಪ್ರಕರಣ ಆಲಿಸುವ ನ್ಯಾಯಮೂರ್ತಿಯನ್ನು ಅದು ಅವಲಂಬಿಸಿರುತ್ತದೆ. ದೆಹಲಿ ಹೈಕೋರ್ಟ್‌ನ ಆದೇಶ ಖಂಡಿತವಾಗಿಯೂ ದೆಹಲಿ ಗಲಭೆಗೆ ಸಂಬಂಧಿಸಿದ ಇತರೆ ಪ್ರಕರಣಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ದೆಹಲಿ ಪೊಲೀಸರು ಸಲ್ಲಿಸುವ ಮೇಲ್ಮನವಿಯ ವಿಚಾರಣೆ ನಡೆಸುವ ಅವಕಾಶ ನನಗೆ ದೊರೆತಿದ್ದರೆ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿಯುತ್ತಿದ್ದೆ ಎಂದು ಕೂಡ ಅವರು ಪ್ರತಿಕ್ರಿಯಿಸಿದ್ದಾರೆ.
ಹಲವು ವರ್ಷಗಳ ಕಾಲ ಜನರನ್ನು ಸೆರೆಯಲ್ಲಿಟ್ಟು, 19 ಸಾವಿರ ಪುಟಗಳ ಆರೋಪಪಟ್ಟಿ ಮತ್ತು ಸಾವಿರಾರು ಸಾಕ್ಷಿಗಳ ವಿಚಾರಣೆ ನಡೆಸುವುದರಿಂದ ವಿಚಾರಣೆ ಮುಗಿಯುವುದೇ ಇಲ್ಲ. ಆರೋಪಿಗಳಿಗೆ ಜಾಮೀನು ಸಿಗಲೇ ಬಾರದು ಎಂಬ ರೀತಿಯಲ್ಲಿ ಪೊಲೀಸರು ಬಲೆ ಹೆಣೆದಿರುವುದು ನಿಮ್ಮ ಕಣ್ಣಿಗೆ ರಾಚುತ್ತಿರುವಾಗ ಆರೋಪಿಗಳನ್ನು ಜೈಲಿನಲ್ಲಿ ಮುಂದುವರೆಯುವಂತೆ ಮಾಡಲಾಗದು ಎಂದು ಅವರು ತಿಳಿಸಿದ್ದಾರೆ.