Babri Masjid
Babri Masjid 
ಸುದ್ದಿಗಳು

[ಬಾಬರಿ ಮಸೀದಿ ಧ್ವಂಸ] ಅಡ್ವಾಣಿ, ಇತರರನ್ನು ಖುಲಾಸೆಗೊಳಿಸಿರುವುದರ ಪ್ರಶ್ನಿಸಿ ಮೇಲ್ಮನವಿ, ಆಗಸ್ಟ್‌ 1ಕ್ಕೆ ವಿಚಾರಣೆ

Bar & Bench

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಮಾಜಿ ಉಪ ಪ್ರಧಾನಿ ಎಲ್‌ ಕೆ ಅಡ್ವಾಣಿ ಸೇರಿದಂತೆ ಹಲವು ನಾಯಕರನ್ನು ಖುಲಾಸೆಗೊಳಿಸಿ ಲಖನೌನ ಸಿಬಿಐ ವಿಶೇಷ ನ್ಯಾಯಾಲಯವು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಅಲಾಹಾಬಾದ್‌ ಹೈಕೋರ್ಟ್‌ ಆಗಸ್ಟ್‌ 1ರಂದು ನಡೆಸಲಿದೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್‌, ಬಿಜೆಪಿ ನಾಯಕರಾದ ಮುರುಳಿ ಮನೋಹರ್‌ ಜೋಶಿ, ಉಮಾ ಭಾರತಿ ಮತ್ತು ಇತರ ಹಲವು ನಾಯಕರನ್ನು ವಿಚಾರಣಾಧೀನ ನ್ಯಾಯಾಲಯವು ಖುಲಾಸೆಗೊಳಿಸಿತ್ತು.

ಆಗಸ್ಟ್‌ 1ರಂದು ಮೇಲ್ಮನವಿಯನ್ನು ವಿಚಾರಣೆಗೆ ನಿಗದಿಪಡಿಸುವಂತೆ ನ್ಯಾಯಮೂರ್ತಿ ದಿನೇಶ್‌ ಕುಮಾರ್‌ ಸಿಂಗ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಾರದ ಆರಂಭದಲ್ಲಿ ಆದೇಶ ಮಾಡಿತ್ತು. “ಆಗಸ್ಟ್‌ 1ರಂದು ಈ ಮೇಲ್ಮನವಿಯನ್ನು ಮೊದಲ 10 ಪ್ರಕರಣಗಳಲ್ಲಿ ಒಂದಾಗಿ ಪಟ್ಟಿ ಮಾಡಿ” ಎಂದು ನ್ಯಾಯಾಲಯ ನಿರ್ದೇಶಿಸಿತ್ತು.

ಬಾಬರಿ ಮಸೀದಿಯನ್ನು ಧ್ವಂಸ ಮಾಡಲು ಪಿತೂರಿ ನಡೆಸಲಾಗಿತ್ತು ಎಂದು ತೋರಿಸಲು ಯಾವುದೇ ದಾಖಲೆಗಳು ಇಲ್ಲ ಎಂದು ಸಿಬಿಐ ವಿಶೇಷ ನ್ಯಾಯಾಲಯವು 2020ರಲ್ಲಿ ನೀಡಿದ್ದ ತೀರ್ಪನ್ನು ಅಯೋಧ್ಯೆಯ ನಿವಾಸಿಗಳಾದ ಹಾಜಿ ಮಹಬೂಬ್‌ ಅಹಮದ್‌ ಮತ್ತು ಸಯ್ಯದ್‌ ಅಖ್ಲಾಖ್‌ ಅಹಮದ್‌ ಅವರು ಪ್ರಶ್ನಿಸಿದ್ದಾರೆ.

ತಾವು ಐತಿಹಾಸಿಕ ಧಾರ್ಮಿಕ ಸ್ಥಳವಾದ ಬಾಬರಿ ಮಸೀದಿ ಧ್ವಂಸದ ಸಂತ್ರಸ್ತರಾಗಿದ್ದು, ಆ ಘಟನೆಗೆ ಸಾಕ್ಷಿಗಳಾಗಿದ್ದೇವೆ. ಆ ಸಂದರ್ಭದಲ್ಲಿ ನಡೆದ ದೊಂಬಿ ಗಲಭೆಗಳಿಂದ ಆರ್ಥಿಕವಾಗಿ ಸಾಕಷ್ಟು ನಷ್ಟ ಅನುಭವಿಸಿದ್ದೇವೆ ಎಂದು ಮನವಿಯಲ್ಲಿ ಅರ್ಜಿದಾರರು ಉಲ್ಲೇಖಿಸಿದ್ದಾರೆ.

2021ರಲ್ಲಿ ಪರಿಷ್ಕರಣಾ ಮನವಿ ಸಲ್ಲಿಸಲಾಗಿದೆ ಎಂದು ಸೋಮವಾರ ಅರ್ಜಿದಾರರ ಪರ ಹಿರಿಯ ವಕೀಲ ಸಯ್ಯದ್‌ ಫರ್ಮಾನ್‌ ಅಲಿ ನಖ್ವಿ ಅವರು ಪೀಠಕ್ಕೆ ತಿಳಿಸಿದರು. ಸಿಆರ್‌ಪಿಸಿ ಸೆಕ್ಷನ್‌ 372ಗೆ ತಿದ್ದುಪಡಿಯಾಗಿರುವುದರಿಂದ ಅರ್ಜಿಯನ್ನು ಮೇಲ್ಮನವಿಯಾಗಿ ಪರಿಗಣಿಸುವಂತೆ ಕೋರಿದರು.

ಇದಕ್ಕೆ ಪೀಠವು “ಮೇಲ್ಮನವಿಯನ್ನು ಒಪ್ಪುವುದಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ರಾಜ್ಯ ಸರ್ಕಾರದ ಪರ ವಕೀಲರು ಆಕ್ಷೇಪಣೆ ಸಲ್ಲಿಸಬಹುದು” ಎಂದು ಹೇಳಿತು.