A1
ಸುದ್ದಿಗಳು

[ಬಾಬರಿ ಮಸೀದಿ ಧ್ವಂಸ] ಅಡ್ವಾಣಿ ಇತರರ ಖುಲಾಸೆ ಪ್ರಶ್ನಿಸಿದ್ದ ಮನವಿ ವಜಾಗೊಳಿಸಿದ ಅಲಾಹಾಬಾದ್ ಹೈಕೋರ್ಟ್

ಬಾಬರಿ ಮಸೀದಿಯನ್ನು ಧ್ವಂಸಗೊಳಿಸುವ ಪಿತೂರಿಯನ್ನು ಸಾಬೀತುಪಡಿಸುವಂತಹ ಯಾವುದೇ ಸಾಕ್ಷ್ಯಗಳಿಲ್ಲ ಎಂದು 2020ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪನ್ನು ಅರ್ಜಿ ಪ್ರಶ್ನಿಸಿತ್ತು.

Bar & Bench

ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಉಪ ಪ್ರಧಾನಿ ಎಲ್‌ ಕೆ ಅಡ್ವಾಣಿ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಬಿಜೆಪಿ ನಾಯಕರಾದ ಮುರಳಿ ಮನೋಹರ್ ಜೋಷಿ, ಉಮಾಭಾರತಿ ಸೇರಿದಂತೆ ಹಲವರನ್ನು ಖುಲಾಸೆಗೊಳಿಸಿದ ಲಖನೌ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ್ದ ಮೇಲ್ಮನವಿಯೊಂದನ್ನು ಅಲಾಹಾಬಾದ್ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ [ಹಾಜಿ ಮಹಬೂಬ್ ಅಹ್ಮದ್ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಅಯೋಧ್ಯೆಯಲ್ಲಿ ನೆಲೆಸಿರುವ ಹಾಜಿ ಮಹೆಬೂಬ್ ಅಹ್ಮದ್ ಮತ್ತು ಸೈಯದ್ ಅಖ್ಲಾಕ್ ಅಹ್ಮದ್  ಎಂಬುವವರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ರಮೇಶ್ ಸಿನ್ಹಾ ಮತ್ತು ನ್ಯಾಯಮೂರ್ತಿ ಸರೋಜ್ ಯಾದವ್ ಅವರಿದ್ದ ಪೀಠ ವಜಾಗೊಳಿಸಿತು. ಈ ಹಿಂದೆ ವಾದ- ಪ್ರತಿವಾದ ಆಲಿಸಿದ್ದ ನ್ಯಾಯಾಲಯ ಅಕ್ಟೋಬರ್ 31ರಂದು ತೀರ್ಪು ಕಾಯ್ದಿರಿಸಿತ್ತು.

ಬಾಬರಿ ಮಸೀದಿಯನ್ನು ಧ್ವಂಸಗೊಳಿಸುವ ಪಿತೂರಿಯನ್ನು ಸಾಬೀತುಪಡಿಸುವಂತಹ ಯಾವುದೇ ಸಾಕ್ಷ್ಯಗಳಿಲ್ಲ ಎಂದು 2020ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪನ್ನು ಅರ್ಜಿ ಪ್ರಶ್ನಿಸಿತ್ತು.

ತಾವು ಘಟನೆಯ ಸಂತ್ರಸ್ತರು ಮತ್ತು ಐತಿಹಾಸಿಕ ಪ್ರಾರ್ಥನಾ ಸ್ಥಳವಾದ ಬಾಬರಿ ಮಸೀದಿ ಧ್ವಂಸವಾಗಿದ್ದಕ್ಕೆ ಸಾಕ್ಷಿಗಳಾಗಿದ್ದವರು ಎಂದು ಮನವಿಯಲ್ಲಿ ತಿಳಿಸಲಾಗಿತ್ತು. ಅಗ್ನಿಸ್ಪರ್ಶ, ಲೂಟಿ ಮಾಡಿದ ಪರಿಣಾಮ ತಾವು ಮನೆ ಕಳೆದುಕೊಂಡು ಆರ್ಥಿಕ ನಷ್ಟ ಅನುಭವಿಸಿದ್ದಾಗಿ ಅರ್ಜಿದಾರರು ದೂರಿದ್ದರು.