ಭಾರತೀಯ ಅಧಿಕಾರಶಾಹಿಯ 'ಬಾಬು' ಸಂಸ್ಕೃತಿ ವಸಾಹತುಶಾಹಿ ಮನಸ್ಥಿತಿಯ ದ್ಯೋತಕವಾಗಿದ್ದು ಅಭಿವೃದ್ಧಿಯ ಗುರಿ ಸಾಧಿಸುವಲ್ಲಿ ಅದು ಮುಖ್ಯ ಅಡಚಣೆ ಎಂದು ದೆಹಲಿ ಹೈಕೋರ್ಟ್ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ [ಈಶ್ವರ್ ಸಿಂಗ್ ಮತ್ತು ಭೂಮಿ ಮತ್ತು ಕಟ್ಟಡ ಇಲಾಖೆ ಇನ್ನಿತರರ ನಡುವಣ ಪ್ರಕರಣ].
ಕಂದಾಯ ಅಧಿಕಾರಿಗಳೆದುರು 35 ವರ್ಷಗಳಿಂದ ಬಾಕಿ ಉಳಿದಿದ್ದ ರೈತರೊಬ್ಬರ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾ. ಚಂದ್ರಧಾರಿ ಸಿಂಗ್ ಅವರಿದ್ದ ಏಕಸದಸ್ಯ ಪೀಠವು ದೇಶದ ಜನ ಕ್ಯಾನ್ಸರ್ ರೀತಿಯ ಇಂತಹ ಪ್ರವೃತ್ತಿ ಮತ್ತು ವಸಾಹತುಶಾಹಿಯ ಗತಕಾಲದ ಕುರುಹುಗಳಿಂದ ವಿಮೋಚನೆಗೊಳ್ಳಲು ಇದು ಸಕಾಲ ಎಂದು ಹೇಳಿತು.
ಮೈದಾನ್‌ಗಡಿಯಲ್ಲಿನ ತನ್ನ ಭೂಮಿಯನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) 1987ರಲ್ಲಿ ಸ್ವಾಧೀನಪಡಿಸಿಕೊಂಡಿದೆ ಎಂದು ಈಶ್ವರ್ ಸಿಂಗ್ ಎಂಬ ರೈತ ಹೈಕೋರ್ಟ್‌ಗೆ ಅಹವಾಲು ಸಲ್ಲಿಸಿದ್ದರು. ಪರಿಹಾರ ದೊರೆತಿದ್ದರೂ ಪರ್ಯಾಯ ಜಮೀನು ಮಂಜೂರು ಮಾಡುವಂತೆ ತಾನು ಸಲ್ಲಿಸಿದ್ದ ಅರ್ಜಿ ಅಧಿಕಾರಿಗಳೆದುರು ಇದೆ. ಇನ್ನು ಹದಿನೈದು ದಿನಗಳಲ್ಲಿ ಅರ್ಜಿ ವಿಲೇವಾರಿ ಮಾಡುವಂತೆ ತಾನು ಆಗಸ್ಟ್ 2, 2022ರಂದು ನೀಡಿದ್ದ ಆದೇಶವನ್ನು ಅಧಿಕಾರಿಗಳು ಧಿಕ್ಕರಿಸಿದ್ದಾರೆ ಎಂಬುದನ್ನು ಗಮನಿಸಿದ ನ್ಯಾಯಾಲಯ “ಇದು ಅಧಿಕಾರಿಗಳ ತಲೆಪ್ರತಿಷ್ಠೆಯನ್ನು ಸ್ಪಷ್ಟವಾಗಿ ಹೇಳುತ್ತದೆ” ಎಂದಿತು.
ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕರ್ತವ್ಯ ನಿರ್ವಹಿಸದೇ ಇರುವುದರಿಂದ ದೇಶದೆಲ್ಲೆಡೆ ಹೈಕೋರ್ಟ್‌ಗಳಲ್ಲಿ ಅರ್ಜಿಗಳ ಸಂಖ್ಯೆ ಹೆಚ್ಚಾಗಿ ಅವು ಬಾಕಿ ಉಳಿಯುತ್ತಿರುವುದು ಆತಂಕಕಾರಿ. ಪ್ರಜಾಪ್ರಾತಿನಿಧ್ಯವನ್ನು ಕೇವಲ ಕಾಗದದ ತುಂಡುಗಳಾಗಿ ಬದಲಿಸಿರುವುದು ದು:ಖದ ಮತ್ತು ನ್ಯಾಯದ ವಿಡಂಬನೆಯನ್ನು ಹೇಳುತ್ತದೆ. ಬಸವನ ಹುಳುವಿನ ವೇಗದಲ್ಲಿ ವ್ಯವಸ್ಥೆ ಮುಂದುವರೆಯುತ್ತಿದ್ದು ಜನ ಸಾಮಾನ್ಯರ ಕುಂದು ಕೊರತೆಗಳ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದೆ ಅವರ ಅರ್ಜಿಗಳನ್ನು ಕಡತಗಳಲ್ಲಿ ಕೊಳೆಹಾಕಲಾಗುತ್ತಿದೆ ಎಂದು ತಾನು ಈ ಹಿಂದಿನ ವಿಚಾರಣೆ ವೇಳೆ ಕೂಡ ಟೀಕಿಸಿದ್ದನ್ನು ನ್ಯಾಯಾಲಯ ಮೆಲುಕು ಹಾಕಿತು.
ಇದು ಉದ್ದೇಶಪೂರ್ವಕ ನ್ಯಾಯಾಂಗ ನಿಂದನೆ ಎಂದ ಪೀಠ ದೇಶದ ಸಾಂವಿಧಾನಿಕ ನ್ಯಾಯಾಲಯ ನೀಡಿದ ಆದೇಶವನ್ನು ಅಧಿಕಾರಿಗಳು ಉಲ್ಲಂಘಿಸಿರುವುದು ನ್ಯಾಯಿಕ ಆಡಳಿತವನ್ನು ಕಸಿದುಕೊಂಡಂತೆ” ಎಂದು ಕಟುಶಬ್ದಗಳಲ್ಲಿ ನುಡಿಯಿತು.
ಆದೇಶ ಪಾಲಿಸದೇ ಇದ್ದುದಕ್ಕೆ ಕಾರಣ ಏನೆಂದು ತಿಳಿಸುವ ಅಫಿಡವಿಟ್‌ನೊಂದಿಗೆ ಇಂದೇ (ಮಂಗಳವಾರವೇ) ಸಂಬಂಧಪಟ್ಟ ಅಧಿಕಾರಿ ಹಾಜರಾಗಬೇಕು ಎಂದು ನ್ಯಾಯಾಲಯ ತಾಕೀತು ಮಾಡಿತು. ಇದರ ಬೆನ್ನಿಗೇ ನ್ಯಾಯಾಲಯಕ್ಕೆ ಹಾಜರಾದ ಅಧಿಕಾರಿಗಳು ಎಚ್ಚರಿಕೆಯಿಂದ ಅರ್ಜಿಯ ಬಗ್ಗೆ ನಿರ್ಣಯ ಕೈಗೊಳ್ಳುವುದಾಗಿ ಬಿನ್ನವಿಸಿಕೊಂಡರು. ಬಳಿಕ ತಮ್ಮ ಆದೇಶ ಪಾಲಿಸಲು ನ್ಯಾ. ಸಿಂಗ್ ಇನ್ನೂ ಒಂದು ತಿಂಗಳ ಕಾಲಾವಕಾಶ ನೀಡಿದರು.
ಏನಿದು ಬಾಬುಗಿರಿ?ಸರ್ಕಾರಿ ನೌಕರನೊಬ್ಬ ಸೋಮಾರಿತನ ಅಸಮರ್ಥತೆ, ಉದ್ದೇಶಪೂರ್ವಕ ವಿಳಂಬ ಧೋರಣೆಯಿಂದಾಗಿ ಹಾಗೂ ಸಾರ್ವಜನಿಕರ ಹಣದಲ್ಲಿ ಮೋಜು ಮಾಡುವ ಪ್ರವೃತ್ತಿಯನ್ನು ಬಾಬುಗಿರಿ/ ಬಾಬು ಸಂಸ್ಕೃತಿ ಎನ್ನಲಾಗುತ್ತದೆ. ಉತ್ತರ ಭಾರತದಲ್ಲಿ ಹೆಚ್ಚು ಬಳಕೆಯಲ್ಲಿರುವ ಈ ಪದ ವಸಾಹತು ಯುಗಕ್ಕೆ ಸೇರಿದ್ದು ಆಗಿನ ನಾಗರಿಕ ಸೇವಕರು ಮತ್ತು ಸರ್ಕಾರ ಅಧಿಕಾರಿಗಳನ್ನು ಸಂಬೋಧಿಸಲು ಬಾಬು ಪದವನ್ನು ಬಳಸಲಾಗುತ್ತಿತ್ತು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]