ನೌಕರನೊಬ್ಬನನ್ನು ಮರಳಿ ಸೇವೆಗೆ ಪಡೆಯಬೇಕು ಎಂದು ನೀಡಲಾದ ಆದೇಶವು ಸೇವೆಗೆ ಮರಳಿದ ಉದ್ಯೋಗಿ ಸ್ವಯಂಚಾಲಿತವಾಗಿ ಹಿಂದಿನ ಅವಧಿಗೆ ವೇತನ ಪರಿಹಾರ (ಬ್ಯಾಕ್ ವೇಜಸ್) ಪಡೆಯಲು ಅರ್ಹನಾಗುತ್ತಾನೆ ಎಂದರ್ಥವಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ಬುಧವಾರ ಪುನರುಚ್ಚರಿಸಿದೆ [ರಮೇಶ್ ಚಂದ್ ಮತ್ತು ದೆಹಲಿ ಸಾರಿಗೆ ನಿಗಮದ ಆಡಳಿತ ನಡುವಣ ಪ್ರಕರಣ].
ಹಾಗೆ ಪರಿಹಾರ ನೀಡುವುದು ಪ್ರತಿ ಪ್ರಕರಣದ ವಾಸ್ತವಾಂಶಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ಪೀಠ ಸ್ಪಷ್ಟಪಡಿಸಿದೆ. ಸೇವೆಗೆ ಮರಳಿದ ಉದ್ಯೋಗಿ ವೇತನ ಮರಳಿ ಪಡೆಯಲು ಸಂಬಂಧಿತ ಅವಧಿಯಲ್ಲಿ ತಾನು ಲಾಭಕರ ರೀತಿಯಲ್ಲಿ ಕೆಲಸ ಮಾಡಿಲ್ಲ ಎಂಬುದನ್ನು ಸಾಬೀತುಪಡಿಸಬೇಕು ಎಂದು ಅದು ವಿವರಿಸಿದೆ.
" (ಈ ವಿಚಾರದಲ್ಲಿ) ಕಾನೂನು ಇದಾಗಲೇ ಉತ್ತಮ ರೀತಿಯಲ್ಲಿ ನಿರ್ಧರಿತವಾಗಿದೆ. ನ್ಯಾಯಾಲಯ ಮರಳಿ ಸೇವೆಗೆ ಸೇರ್ಪಡುವ ಆದೇಶ ನೀಡಿದ್ದರೂ ಕೂಡ, ಹಿಂದಿನ ಅವಧಿಗೆ ವೇತನ ಪರಿಹಾರ ಪಡೆಯುವ ಆದೇಶ ಸ್ವಯಂಚಾಲಿತವಾಗಿ ದಕ್ಕುವುದಿಲ್ಲ. ಇದು (ವೇತನ ಪರಿಹಾರ) ಪ್ರತಿಯೊಂದು ಪ್ರಕರಣದ ಸಂದರ್ಭ ಸನ್ನಿವೇಶಗಳನ್ನು ಅವಲಂಬಿಸಿರುತ್ತದೆ" ಎಂದು ನ್ಯಾಯಾಲಯ ಹೇಳಿದೆ. ನಿವೃತ್ತ ಬಸ್ ಕಂಡಕ್ಟರ್ ಒಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.
ಘಟನೆ 1992ರಲ್ಲಿ ನಡೆದಿತ್ತು. 4 ರೂಪಾಯಿ ಪಡೆದರೂ ಇಬ್ಬರು ಪ್ರಯಾಣಿಕರಿಗೆ ಟಿಕೆಟ್ ನೀಡರಲಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ದೆಹಲಿ ಸಾರಿಗೆ ಸಂಸ್ಥೆ ನಿರ್ವಾಹಕನನ್ನು 1996ರಲ್ಲಿ ಸೇವೆಯಿಂದ ವಜಾಗೊಳಿಸಿತ್ತು.
2009ರಲ್ಲಿ, ಕಾರ್ಮಿಕ ನ್ಯಾಯಾಲಯ ಸೇವೆಗೆ ಮರಳುವಂತೆ ಆದೇಶಿಸಿತ್ತು. ಆದರೂ ದೆಹಲಿ ಸಾರಿಗೆ ನಿಗಮದಲ್ಲಿ ಕೆಲಸ ಮಾಡದ ಅವಧಿಯಲ್ಲಿ ವೇತನ ಪಡೆಯಲು ನಿರ್ವಾಹಕ ಅರ್ಹರಲ್ಲ ಎಂದು ಅದು ತೀರ್ಪು ನೀಡಿತ್ತು. ದೆಹಲಿಯ ನ್ಯಾಯಾಲಯ ಕೂಡ ಕಾರ್ಮಿಕ ನ್ಯಾಯಾಲಯದ ತೀರ್ಪು ಎತ್ತಿ ಹಿಡಿಯಿತು. ಹೀಗಾಗಿ ನಿರ್ವಾಹಕ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಮಧ್ಯೆ ಅವರು 2020ರಲ್ಲಿ ಸೇವೆಯಿಂದ ನಿವೃತ್ತರಾದರು.
ಮೇಲ್ಮನವಿದಾರರು 1996ರಲ್ಲಿ ವಜಾಗೊಂಡ ನಂತರ ಸುಮಾರು ಒಂದು ವರ್ಷದವರೆಗೆ ಅವರಿಗೆ ಪರ್ಯಾಯ ಉದ್ಯೋಗ ಪಡೆಯಲು ಸಾಧ್ಯವಾಗಲಿಲ್ಲ ಎಂಬುದನ್ನು ಗಮನಿಸಿದ ಸುಪ್ರೀಂ ಕೋರ್ಟ್ ಭಾಗಶಃ ಪರಿಹಾಕ್ಕೆ ಆದೇಶಿಸಿದೆ. ಪ್ರಸ್ತುತ ಮತ್ತು ಹಿಂದಿನ ವೇತನ ಆಧರಿಸಿ ಕಾರ್ಮಿಕ ನ್ಯಾಯಾಲಯ ನೀಡಿದ್ದ ವೇತನ ಆದೇಶಕ್ಕೆ ಹೆಚ್ಚುವರಿಯಾಗಿ ₹3 ಲಕ್ಷ ಸೇರಿಸುವಂತೆ ಅದು ಸೂಚಿಸಿದೆ. ಸಾರಿಗೆ ನಿಗಮ ಎರಡು ತಿಂಗಳೊಳಗೆ ಪರಿಹಾರದ ಹಣ ಪಾವತಿಸದಿದ್ದಲ್ಲಿ 2009ರಿಂದ ವಾರ್ಷಿಕ ಶೇ 9ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ ಎಂದು ಕೂಡ ಪೀಠ ಎಚ್ಚರಿಕೆ ನೀಡಿದೆ.