ಸುದ್ದಿಗಳು

ಬದ್ಲಾಪುರ್‌ ಎನ್‌ಕೌಂಟರ್: ಎಸ್‌ಐಟಿ ತನಿಖೆ ಕೋರಿ ಸುಪ್ರೀಂನಲ್ಲಿ ಪಿಐಎಲ್‌

ಮತ್ತೊಂದು ಬೆಳವಣಿಗೆಯಲ್ಲಿ, ನಕಲಿ ಎನ್‌ಕೌಂಟರ್‌ ಎನ್ನಲಾದ ಘಟನೆಯಲ್ಲಿ ಕೊಲ್ಲಲ್ಪಟ್ಟ ಬದ್ಲಾಪುರ್ ಲೈಂಗಿಕ ದೌರ್ಜನ್ಯ ಆರೋಪಿಯ ಸಮಾಧಿಗೆ ಸೂಕ್ತ ಸ್ಥಳವನ್ನು ಗುರುತಿಸುತ್ತಿರುವುದಾಗಿ ಮಹಾರಾಷ್ಟ್ರ ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

Bar & Bench

ಮುಂಬೈನ್‌ ಬದ್ಲಾಪುರ್‌ನಲ್ಲಿ ಎಳೆಯ ಮಕ್ಕಳ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯದ ಪ್ರಮುಖ ಆರೋಪಿ ಅಕ್ಷಯ್ ಅಣ್ಣಾ ಶಿಂಧೆಯ 'ಎನ್‌ಕೌಂಟರ್' ಹತ್ಯೆಯ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ

ಪ್ರಕರಣದ ಆರೋಪಿಯಾಗಿದ್ದ ಶಿಂಧೆಯನ್ನು ಸೆಪ್ಟೆಂಬರ್ 23 ರಂದು ತಲೋಜಾ ಜೈಲಿಗೆ ಕರೆದೊಯ್ಯುತ್ತಿದ್ದಾಗ ಶಿಂಧೆ ಕಾನ್‌ಸ್ಟೇಬಲ್‌ ಬಂದೂಕನ್ನು ಕಿತ್ತುಕೊಂಡು ಹಲ್ಲೆ ನಡೆಸಲು ಮುಂದಾಗಿದ್ದ ಈ ವೇಳೆ ಥಾಣೆ ಪೊಲೀಸರು ಆತನನ್ನು ಗುಂಡಿಕ್ಕಿ ಕೊಂದಿದ್ದರು.

ಘಟನೆಯ ಬಗ್ಗೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ಪೊಲೀಸರ ಹೇಳಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. ಪೊಲೀಸರು ಹೇಳಿಕೊಂಡಂತೆ ಹತ್ಯೆಯು ನಿಜಕ್ಕೂ ಒಂದು ಎನ್‌ಕೌಂಟರ್ ಆಗಿದೆಯೇ ಎಂದು ಅದು ಪ್ರಶ್ನಿಸಿತ್ತು.

ಮುಂಬೈ ವಕೀಲ ಘನಶ್ಯಾಮ್ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿದ್ದು, ಘಟನೆಯ ಕುರಿತು ಎಸ್‌ಐಟಿಯಿಂದ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆಯಾಗಬೇಕು ಎಂದು ಕೋರಲಾಗಿದೆ.

ಉಪಾಧ್ಯಾಯ ತಮ್ಮ ಅರ್ಜಿಯಲ್ಲಿ ಮಾಡಿರುವ ಇತರ ಮನವಿಗಳು ಹೀಗಿವೆ:

- ಶಿಂಧೆ ಹತ್ಯೆಯ ಕುರಿತು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಬೇಕು;

- ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಬೇಕು, ಅದರಲ್ಲಿ ನಿವೃತ್ತ ಅಧಿಕಾರಿಗಳು ಮತ್ತು ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳ ಅಧಿಕಾರಿಗಳಿರಬೇಕು;

- ಎಸ್‌ಐಟಿ ಪ್ರಕರಣದ ತನಿಖೆ ನಡೆಸುತ್ತಿರುವಾಗ ಎನ್‌ಕೌಂಟರ್ ಹತ್ಯೆಯಲ್ಲಿ ಭಾಗಿಯಾಗಿರುವ ಶಂಕಿತ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು;

- ಕರ್ತವ್ಯ ನಿರ್ವಹಣೆಯ ಸಮಯದಲ್ಲಿ ಬಾಡಿ ಕ್ಯಾಮ್‌ಗಳ ಬಳಕೆಯ ಮೂಲಕ ಪೊಲೀಸ್ ಅಧಿಕಾರಿಗಳ ಸಂಯಮದ ವರ್ತನೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಆದೇಶಿಸಬೇಕು.

ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ಬೆಳವಣಿಗೆಯಲ್ಲಿ, ನಕಲಿ ಎನ್‌ಕೌಂಟರ್‌ ಎಂದು ಆರೋಪಿಸಲಾದ ಘಟನೆಯಲ್ಲಿ ಕೊಲ್ಲಲ್ಪಟ್ಟ ಬದ್ಲಾಪುರ ಲೈಂಗಿಕ ದೌರ್ಜನ್ಯ ಆರೋಪಿಯ ಸಮಾಧಿಗೆ ಸೂಕ್ತವಾದ, ಏಕಾಂತ ಸ್ಥಳವನ್ನು ಗುರುತಿಸುತ್ತಿರುವುದಾಗಿ ಮಹಾರಾಷ್ಟ್ರ ಪೊಲೀಸರು ಶುಕ್ರವಾರ ಬಾಂಬೆ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

ಆರೋಪಿಯ ತಂದೆ ತನ್ನ ಮಗನ ಅಂತ್ಯಕ್ರಿಯೆಗೆ ಭೂಮಿ ಮಂಜೂರು ಮಾಡುವಂತೆ ಕೋರಿ ಸಲ್ಲಿಸಿದ ಅರ್ಜಿಯ ಕುರಿತು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಎಂ ಎಂ ಸತಾಯೆ ಅವರ ಪೀಠವು ತುರ್ತು ವಿಚಾರಣೆಯನ್ನು ನಡೆಸಿತು.