Bombay High Court 
ಸುದ್ದಿಗಳು

ಬದಲಾಪೂರ್ ಲೈಂಗಿಕ ದೌರ್ಜನ್ಯ: ಲೋಪ ಎಸಗಿದ ಪೊಲೀಸರಿಗೆ ಬಾಂಬೆ ಹೈಕೋರ್ಟ್ ಚಾಟಿ; ಶಾಲೆ ವಿರುದ್ಧ ಕ್ರಮಕ್ಕೆ ತಾಕೀತು

ಬದಲಾಪೂರ್ ಶಾಲೆಯ ಅಟೆಂಡರ್ ಒಬ್ಬ ಶಿಶುವಿಹಾರಕ್ಕೆ ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಘಟನೆಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದ ಹೈಕೋರ್ಟ್ ಇಂದು ವಿಚಾರಣೆ ಆರಂಭಿಸಿತ್ತು.

Bar & Bench

ಮುಂಬೈಗೆ ಅನತಿ ದೂರದಲ್ಲಿರುವ ಥಾಣೆಯ ಬದಲಾಪೂರ್ ಶಿಶುವಿಹಾರಕ್ಕೆ ತೆರಳಿದ್ದ ಇಬ್ಬರು ಎಳೆಯ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ ಪೊಲೀಸರನ್ನು ಬಾಂಬೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ [ಹೈಕೋರ್ಟ್‌ ಸ್ವಯಂ ಪ್ರೇರಿತ ಮೊಕದ್ದಮೆ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಪತ್ರಿಕಾ ವರದಿಗಳನ್ನು ಆಧರಿಸಿ ನ್ಯಾಯಾಲಯ ಘಟನೆಗೆ ಸಂಬಂಧಿಸಿದಂತೆ ಬುಧವಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ  ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಪೃಥ್ವಿರಾಜ್ ಚವಾಣ್ ಅವರಿದ್ದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.

ಪ್ರಕರಣದ ಹುಡುಗಿಯರು ದೂರು ನೀಡಿದ್ದಾರೆ ಆದರೆ ಅನೇಕ ಪ್ರಕರಣಗಳು ವರದಿಯಾಗುವುದೇ ಇಲ್ಲ. ಇಂತಹ ಘಟನೆಗಳ ಬಗ್ಗೆ ಮಾತನಾಡಲು ಧೈರ್ಯಬೇಕು. ಖಂಡಿತಾ ಪೋಲಿಸರು ತಾವು ನಿರ್ವಹಿಸಬೇಕಾದ ಪಾತ್ರ ನಿರ್ವಹಿಸಿಲ್ಲ. ಪೊಲೀಸರು ಸಂವೇದನಾಶೀಲರಾಗಿದ್ದರೆ ಇದು ಸಂಭವಿಸುತ್ತಿರಲಿಲ್ಲ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಸಂತ್ರಸ್ತ ಬಾಲಕಿಯರಲ್ಲಿ ಒಬ್ಬಾಕೆಯ ಹೇಳಿಕೆ ದಾಖಲಿಸಿಕೊಳ್ಳಲು ವಿಳಂಬ ಮಾಡಿದ್ದಕ್ಕಾಗಿ ಕೂಡ ಹೈಕೋರ್ಟ್‌ ಬದಲಾಪೂರ್‌ ಪೊಲೀಸರಿಗೆ ಛೀಮಾರಿ ಹಾಕಿತು. ಪೊಲೀಸರು ಹೇಳಿಕೆ ದಾಖಲಿಸಿಕೊಳ್ಳಲು ಯಾವುದೇ ಪ್ರಯತ್ನ ಮಾಡದಿರುವುದು ತನಗೆ ದಿಗ್ಭ್ರಮೆ ಉಂಟುಮಾಡಿದೆ ಎಂದು ನ್ಯಾಯಾಲಯ ನುಡಿದಿದೆ.

ಪ್ರಕರಣ ದಾಖಲಿಸಿಕೊಳ್ಳಲು ವಿಳಂಬವಾಗಿರುವುದನ್ನು ಪ್ರಶ್ನಿಸಿರುವ ನ್ಯಾಯಾಲಯ ಅಪ್ರಾಪ್ತ ವಯಸ್ಕರಿಗೆ ಸಂಬಂಧಿಸಿದಂತಹ ಇಂತಹ ಪ್ರಕರಣಗಳಲ್ಲಿ ಪೊಲೀಸರು ಮೊದಲಿಗೆ ಎಫ್‌ಐಆರ್‌ ದಾಖಲಿಸಬೇಕು. ಆದರೆ ಸಂತ್ರಸ್ತರ ಪೋಷಕರನ್ನು ಗಂಟೆಗಟ್ಟಲೆ ಕಾಯುವಂತೆ ಅವರು ಮಾಡಿದ್ದಾರೆ. ಇದು ಜನ ಪೊಲೀಸರ ಬಳಿ ಬರದಿರುವಂತೆ ನಿರುತ್ಸಾಹಗೊಳಿಸುತ್ತದೆ ಎಂದಿದೆ.

ಕರ್ತವ್ಯಲೋಪ ಎಸಗಿದ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ವಾದಿಸಿತಾದರೂ ನ್ಯಾಯಾಲಯ ತೃಪ್ತಿಗೊಳ್ಳಲಿಲ್ಲ.

"ಜನರು ಪೊಲೀಸರಲ್ಲಿ ನಂಬಿಕೆ ಕಳೆದುಕೊಳ್ಳಬಾರದು. ಮಹಾರಾಷ್ಟ್ರ ಪೊಲೀಸರ ಧ್ಯೇಯವಾಕ್ಯ ಏನೆಂಬುದು ನಿಮಗೆ ತಿಳಿದಿರಬೇಕು. ಅದು ಶಿಷ್ಟರ ರಕ್ಷೆ ಮತ್ತು ದುಷ್ಟರ ಶಿಕ್ಷೆ. ದಯವಿಟ್ಟು ಇದನ್ನು ನೆನಪಿಟ್ಟುಕೊಳ್ಳಿ ... ಎಫ್‌ಐಆರ್‌ ದಾಖಲಿಸುವಂತೆ ಜನ ಈ ರೀತಿ ಬೀದಿಗಿಳಿಯಬಾರದು” ಎಂದು ಕಿವಿಹಿಂಡಿತು.

ಲೈಂಗಿಕ ಅಪರಾಧಗಳನ್ನು ಒಳಗೊಂಡ ಪ್ರಕರಣಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಪೊಲೀಸ್ ಪಡೆ ಸಂವೇದನಾಶೀಲವಾಗಿರಬೇಕು ಎಂದು ಅದು ಹೇಳಿತು. ಅಲ್ಲದೆ ತಪ್ಪಿತಸ್ಥ ಶಾಲೆಯ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಅದು ತಾಕೀತು ಮಾಡಿತು.

ಪೋಕ್ಸೊ ಅಡಿ ಈ ಕೂಡಲೇ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ವಿಚಾರಣೆಯ ಒಂದು ಹಂತದಲ್ಲಿ ಅಡ್ವೊಕೇಟ್‌ ಜನರಲ್‌ ಬೀರೇಂದ್ರ ಸರಾಫ್‌ ಹೇಳಿದರಾದರೂ ಈ ಮೊದಲೇ ಪೋಕ್ಸೊ ಪ್ರಕರಣ ದಾಖಲಿಸಿಕೊಳ್ಳಬೇಕಿತ್ತು ಎಂದು ನ್ಯಾಯಾಲಯ ಅಸಮಾಧಾನ ಹೊರಹಾಕಿತು.