Karnataka High Court
Karnataka High Court 
ಸುದ್ದಿಗಳು

ಅಪರಾಧ ಎಸಗಲು ಜಾಮೀನು ಪರವಾನಗಿಯಲ್ಲ: ಕರ್ನಾಟಕ ಹೈಕೋರ್ಟ್‌

Bar & Bench

“ಅಪರಾಧ ಪ್ರಕರಣಗಳನ್ನು ಹೆಚ್ಚೆಚ್ಚು ಎಸಗಲು ಜಾಮೀನು ಪರವಾನಗಿಯಲ್ಲ” ಎಂದಿರುವ ಕರ್ನಾಟಕ ಹೈಕೋರ್ಟ್‌, ಆರೋಪಿಗೆ ಅಪರಾಧ ಪ್ರಕರಣದಲ್ಲಿ ಜಾಮೀನು ದೊರೆತು ಹೊರಗಿದ್ದಾಗ ಪದೇಪದೇ ಜಾಮೀನು ದೊರೆಯಬಹುದಾದ ಅಪರಾಧ ಎಸಗುವುದರಿಂದ ಜಾಮೀನು ದೊರೆಯುವ ಸಾಧ್ಯತೆ ಮಿತಿಗೊಳ್ಳುತ್ತದೆ ಎಂದು ಹೇಳಿದೆ (ಅಲುಕ ಸಂದ್ರ ಒರೆವಾ ವರ್ಸಸ್‌ ಕರ್ನಾಟಕ ರಾಜ್ಯ ಮತ್ತು ಇತರರು).

ಜಾಮೀನು ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು, ಸ್ವಾತಂತ್ರ್ಯದ ದುರ್ಬಳಕೆಯನ್ನು ಸಮರ್ಥಿಸಲಾಗದು ಎಂದು ನ್ಯಾಯಮೂರ್ತಿ ಶ್ರೀನಿವಾಸ ಹರೀಶ್‌ ಕುಮಾರ್‌ ಅವರಿದ್ದ ಪೀಠ ಹೇಳಿದೆ.

“ಜಾಮೀನು ಹೆಚ್ಚೆಚ್ಚು ಅಪರಾಧ ನಡೆಸಲು ದೊರೆಯುವ ಪರವಾನಗಿ ಅಲ್ಲ. ಜಾಮೀನು ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದರೂ, ಸ್ವಾತಂತ್ರ್ಯದ ದುರ್ಬಳಕೆಯನ್ನು ಸಮರ್ಥಿಸಲಾಗದು… ಆರೋಪಿಯು ಪದೇಪದೇ ಜಾಮೀನು ದೊರೆಯಬಹುದಾದ ಅಪರಾಧಗಳನ್ನು ಎಸಗುತ್ತಿದ್ದರೆ ಸಿಆರ್‌ಪಿಸಿ ಸೆಕ್ಷನ್‌ 436 ಅಡಿ ಜಾಮೀನು ದೊರೆಯುವ ಸಾಧ್ಯತೆಯು ಮಿತಗೊಳ್ಳುತ್ತದೆ,” ಎಂದು ಪೀಠ ಅಭಿಪ್ರಾಯಪಟ್ಟಿದೆ.

ಹೆಚ್ಚು ಅಪರಾಧ ಎಸಗಲು ಜಾಮೀನು ಪರವಾನಗಿಯಲ್ಲ
ಕರ್ನಾಟಕ ಹೈಕೋರ್ಟ್‌

ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ (ಐಟಿ ಕಾಯಿದೆ) ಅಡಿ ಆರೋಪ ಎದುರಿಸುತ್ತಿರುವ ವಿದೇಶಿ ಪ್ರಜೆ ಅಲುಕಾ ಸಂದ್ರಾ ಅಲಿಯಾಸ್‌ ಬೆನ್ನಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಮೇಲಿನಂತೆ ಹೇಳಿದೆ.

ಪವಿತ್ರ ಡಿ. ಎಂಬವರು ತಮ್ಮ ಖಾತೆಯಿಂದ 10 ಸಾವಿರ ರೂಪಾಯಿಯಂತೆ ಒಂಭತ್ತು ಬಾರಿ ಹಣ ಪಡೆಯಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ದೂರಿನ ಪ್ರಕರಣ ಇದಾಗಿದೆ. ತಮ್ಮ ಅಕೌಂಟ್‌ನಿಂದ 90 ಸಾವಿರ ರೂಪಾಯಿ ಹಣವು ಎಟಿಎಂ ಒಂದರ ಮೂಲಕ ಡ್ರಾ ಆಗಿರುವ ಬಗ್ಗೆ ದೂರುದಾರರು ಬ್ಯಾಂಕ್‌ನಿಂದ ಮಾಹಿತಿ ಪಡೆದಿದ್ದರು.

ಸ್ಕಿಮ್ಮರ್‌ ಸಾಧನವನ್ನು ಎಟಿಎಂಗೆ ಅಳವಡಿಸಿ, ಪವಿತ್ರ ಅವರ ಎಟಿಎಂ ಕಾರ್ಡಿನ ದತ್ತಾಂಶವನ್ನು ಅರ್ಜಿದಾರೆ ಬೆನ್ನಿ ಸಂಗ್ರಹಿಸಿದ್ದಾರೆ. ದತ್ತಾಂಶವನ್ನು ಬಳಸಿ, ನಕಲಿ ಎಟಿಎಂ ಕಾರ್ಡ್‌ ಸೃಷ್ಟಿಸಿ ಮಾಹಿತಿದಾರರ ಖಾತೆಯಿಂದ ಹಣ ಪಡೆಯಲಾಗಿದೆ ಎಂದು ಅರ್ಜಿದಾರರ ವಿರುದ್ಧ ಆರೋಪಿಸಲಾಗಿದೆ. ಇದರಿಂದ ನೊಂದ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಐಟಿ ಕಾಯಿದೆಯಡಿ ಆರೋಪವು ಜಾಮೀನಿಗೆ ಅರ್ಹವಾಗಿದ್ದು, ಈ ಹಿನ್ನೆಲೆಯಲ್ಲಿ ಅರ್ಜಿದಾರರು ಜಾಮೀನು ಪಡೆಯಲು ಅರ್ಹರು, ಅದು ಹಕ್ಕಿನ ವಿಚಾರವಾಗಿದೆ. ಐಪಿಸಿಯ ಸೆಕ್ಷನ್‌ 420ರ ಅಡಿ ಯಾವ ರೀತಿಯ ಅಪರಾಧ ಎಸಗಲಾಗಿದೆ ಎಂಬುದನ್ನು ಬಹಿರಂಗಪಡಿಸಲಾಗಿಲ್ಲ ಎಂದು ಹಿರಿಯ ವಕೀಲ ಹಸ್ಮತ್‌ ಪಾಷಾ ಅರ್ಜಿದಾರರ ಪರ ವಾದಿಸಿದ್ದರು.

ಇದೇ ತೆರನಾದ 60 ಪ್ರಕರಣಗಳಲ್ಲಿ ಅರ್ಜಿದಾರರು ಆರೋಪಿಯಾಗಿರುವುದರಿಂದ ಅವರು ಜಾಮೀನಿಗೆ ಅರ್ಹರಲ್ಲ ಎಂದು ಸರ್ಕಾರಿ ವಕೀಲರು ವಾದಿಸಿದರು. ಆಕೆ ಮತ್ತು ಇತರರ ವಿರುದ್ಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಇದೇ ಅಪರಾಧಕ್ಕಾಗಿ ದೂರು ದಾಖಲಾಗಿದೆ ಎಂದು ಹೇಳಿದ್ದಾರೆ. ಅರ್ಜಿದಾರರು ಹವ್ಯಾಸಿ ತಪ್ಪಿತಸ್ಥರಾಗಿದ್ದು, ಅವರಿಗೆ ಜಾಮೀನು ನೀಡಿದರೆ ಅವರು ಅದನ್ನು ಪುನರಾವರ್ತಿಸುತ್ತಾರೆ ಎಂದು ವಾದಿಸಿದ್ದಾರೆ.

ಆರೋಪಿಯು ಮಹಿಳೆಯಾಗಿದ್ದು, ಆಕೆಯ ಪಾಸ್‌ಪೋರ್ಟ್‌ ಮತ್ತು ವೀಸಾ ವಶಕ್ಕೆ ಪಡೆದಿರುವುದರಿಂದ ಆಕೆ ಜಾಮೀನಿಗೆ ಅರ್ಹವಾಗಿದ್ದಾರೆ. ಅಪರಾಧಕ್ಕಾಗಿ ಆರೋಪಿಯು ಬಳಸಿರುವ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಒಂದು ಲಕ್ಷ ರೂಪಾಯಿಯ ಬಾಂಡ್‌ ಹಾಗೂ ಇಬ್ಬರ ಭದ್ರತೆ ನೀಡುವಂತೆ ಬಿನ್ನಿಗೆ ನ್ಯಾಯಾಲಯ ಸೂಚಿಸಿದೆ.