Supreme Court 
ಸುದ್ದಿಗಳು

ಹೈಕೋರ್ಟ್‌ಗಳಲ್ಲಿಯೇ ಜಾಮೀನು ಪ್ರಕರಣಗಳು ಮುಕ್ತಾಯವಾಗಬೇಕು; ನಾವು ಮಧ್ಯಪ್ರವೇಶಿಸಬಾರದು: ಸುಪ್ರೀಂ ಕೋರ್ಟ್‌

ಹೈಕೋರ್ಟ್‌ ಜಾಮೀನು ನೀಡಲು ನಿರಾಕರಿಸಿದರೂ ಅರ್ಜಿದಾರರು ಹೊಸ ಅರ್ಜಿ ಅಥವಾ ಮೇಲ್ಮನವಿ ಸಲ್ಲಿಸುವ ಮೂಲಕ ಅಲ್ಲಿಯೇ ಮುಂದುವರಿಯಬಹುದು ಎಂದು ನ್ಯಾಯಮೂರ್ತಿ ಮಿತ್ತಲ್‌ ಅಭಿಪ್ರಾಯಪಟ್ಟರು.

Bar & Bench

ಜಾಮೀನು ಪ್ರಕರಣಗಳಲ್ಲಿ ಮಧ್ಯಪ್ರವೇಶಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸದೇ ಹೈಕೋರ್ಟ್‌ಗಳಲ್ಲೇ ಜಾಮೀನು ಪ್ರಕರಣಗಳು ಇತ್ಯರ್ಥವಾಗಬೇಕು ಎಂದು ನ್ಯಾಯಮೂರ್ತಿಗಳಾದ ಬೆಲಾ ಎಂ. ತ್ರಿವೇದಿ ಮತ್ತು ಪಂಕಜ್‌ ಮಿತ್ತಲ್‌ ಅವರ ರಜಾಕಾಲೀನ ವಿಭಾಗೀಯ ಪೀಠ ಹೇಳಿದೆ.

“ಜಾಮೀನಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಬಾರದು. ಅದು ನಮ್ಮ ಅಭಿಪ್ರಾಯ. ಇವುಗಳು ಹೈಕೋರ್ಟ್‌ಗಳಲ್ಲೇ ಮುಗಿಯಬೇಕು… ಸುಪ್ರೀಂ ಕೋರ್ಟ್‌ ಜಾಮೀನು ನಿರ್ಧರಿಸುವ ನ್ಯಾಯಾಲಯವಾಗಿದೆ” ಎಂದು ನ್ಯಾ. ತ್ರಿವೇದಿ ಹೇಳಿದರು.

ಇದಕ್ಕೆ ದನಿಗೂಡಿಸಿದ ನ್ಯಾ. ಮಿತ್ತಲ್‌ ಅವರು ಹೈಕೋರ್ಟ್‌ ಜಾಮೀನು ನಿರಾಕರಿಸಿದರೂ ಅರ್ಜಿದಾರರು ಹೊಸ ಅರ್ಜಿ ಅಥವಾ ಮೇಲ್ಮನವಿಯನ್ನು ಅಲ್ಲಿಯೇ ಸಲ್ಲಿಸಬಹುದು ಎಂದರು.

ಜಾಮೀನು ಅರ್ಜಿಗಳ ವಿಚಾರಣೆಯಲ್ಲಿ ಹಿರಿಯ ವಕೀಲರು ಭಾಗವಹಿಸುವುದನ್ನು ಪ್ರಶ್ನಿಸಿದ ಪೀಠವು ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಾಗಿದ್ದ ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ ಅವರ ಉಪಸ್ಥಿತಿಯನ್ನು ಹಾಸ್ಯದ ದಾಟಿಯಲ್ಲಿ ಖಾತರಿಪಡಿಸಿತು.

“ನೀವು ಎಷ್ಟು ಹಣ ಮಾಡಬೇಕು? ನಿಮ್ಮ ರಜೆಯನ್ನು ಅನುಭವಿಸಿ. ಮಿಸ್ಟರ್‌ ಸಿದ್ಧಾರ್ಥ್‌ (ಲೂಥ್ರಾ) ಎಲ್ಲಿಂದ ವಿಚಾರಣೆಯಲ್ಲಿ ಭಾಗಿಯಾಗುತ್ತಿದ್ದೀರಿ, ಯಾವ ರೆಸಾರ್ಟ್‌ನಿಂದ?” ಎಂದು ಪೀಠ ಕೇಳಿತು.

ಅರ್ಜಿದಾರರ ಪರವಾಗಿ ಜಾಮೀನು ಕೋರಿದ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಅವರ ಬೇಡಿಕೆ ನಿರಾಕರಿಸಿದ ಪೀಠವು ಮಧ್ಯಪ್ರವೇಶಿಸಲು ನಿರಾಕರಿಸಿತು.

“ಜೂನಿಯರ್‌ ವಕೀಲರು ಹಾಜರಾಗಿದ್ದರೆ ನಾವು ನೋಟಿಸ್‌ ಜಾರಿ ಮಾಡುತ್ತಿದ್ದೆವು” ಎಂದು ಲಘು ದಾಟಿಯಲ್ಲಿ ಹೇಳಿದ ಪೀಠವು ಮೂರು ವಾರಗಳಲ್ಲಿ ಶರಣಾಗುವಂತೆ ಅರ್ಜಿದಾರರಿಗೆ ನಿರ್ದೇಶಿಸಿತು.