ಸುದ್ದಿಗಳು

ಪಿಎಂಎಲ್ಎ ಅಡಿ ಜಾಮೀನಿಗಿರುವ ಅವಳಿ ಪರೀಕ್ಷೆ ಅರೋಪಿಯ ಅನಿರ್ದಿಷ್ಟಾವಧಿಗೆ ಜೈಲಿಗಟ್ಟುವ ಸಾಧನವಲ್ಲ: ದೆಹಲಿ ಹೈಕೋರ್ಟ್

ವಿಚಾರಣೆ ಸೂಕ್ತ ಸಮಯದಲ್ಲಿ ಮುಕ್ತಾಯಗೊಳ್ಳದು ಎಂದು ಸ್ಪಷ್ಟವಾಗಿ ತೋರಿದಾಗ ವಿನಾಕಾರಣ ಆರೋಪಿಗಳ ದೀರ್ಘಾವಧಿ ಬಂಧನಕ್ಕೆ ಕಾರಣವಾಗುವ ಸೆಕ್ಷನ್ 45 ಅನ್ನು ಸಂಕೋಲೆಯಾಗಿಸಲು ಅವಕಾಶ ನೀಡಲಾಗದು ಎಂದಿತು ಪೀಠ.

Bar & Bench

ವಿಚಾರಣೆ ಪೂರ್ಣಗೊಳ್ಳುವುದು ವಿಳಂಬವಾದಾಗ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ- 2002ರ (ಪಿಎಂಎಲ್‌ಎ) ಅಡಿ ಜಾಮೀನು ನೀಡಲು ಈಡೇರಿಸಬೇಕಾದ ಕಠಿಣ ಅವಳಿ ಪರೀಕ್ಷೆಗಳನ್ನು ಆರೋಪಿಯ ಅನಿರ್ದಿಷ್ಠಾವಧಿ ಬಂಧನದ ಸಾಧನವಾಗಿ ಬಳಸಲು ಅನುಮತಿಸಲಾಗದು ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಪಂಕಜ್ ಕುಮಾರ್ ತಿವಾರಿ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].

ಭೂಷಣ್ ಸ್ಟೀಲ್ ಲಿಮಿಟೆಡ್ (ಬಿಎಸ್‌ಎಲ್) ಇಬ್ಬರು ಮಾಜಿ ಅಧಿಕಾರಿಗಳಾದ ಪಂಕಜ್ ಕುಮಾರ್ ತಿವಾರಿ ಮತ್ತು ಪಂಕಜ್ ಕುಮಾರ್ ಅವರಿಗೆ ₹ 46,000 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಷರತುಬದ್ಧ ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಮೂರ್ತಿ ಮನೋಜ್ ಕುಮಾರ್ ಓಹ್ರಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಒಂಬತ್ತು ತಿಂಗಳ ಜೈಲಿನಲ್ಲಿದ್ದ ಈ ಇಬ್ಬರಿಗೆ ಜಾಮೀನು ನೀಡಿದ ಪೀಠವು ಹಲವು ಪ್ರತಿವಾದಿಗಳು, ಲಕ್ಷಗಟ್ಟಲೆ ದಾಖಲೆಗಳು ಹಾಗೂ ಅಸಂಖ್ಯ ಸಾಕ್ಷಿಗಳನ್ನು ಒಳಗೊಂಡಿರುವ ಪ್ರಸ್ತುತ ಪ್ರಕರಣ ಶೀಘ್ರದಲ್ಲೇ ಮುಕ್ತಾಯಗೊಳ್ಳುವ ಸಾಧ್ಯತೆಯಿಲ್ಲ ಎಂದಿತು.

ಅಂತೆಯೇ ಸೆಕ್ಷನ್ 45ಅನ್ನು ಬಳಸಿ ಸ್ವಾತಂತ್ರ್ಯದ ಹರಿವಿನ ಓಘವನ್ನು ತಡೆಯಲಾಗದು. ವಿಚಾರಣೆ ಸೂಕ್ತ ಸಮಯದಲ್ಲಿ ಮುಕ್ತಾಯಗೊಳ್ಳದು ಎಂದು ಸ್ಪಷ್ಟವಾಗಿ ತೋರಿದಾಗ ವಿನಾಕಾರಣ ಆರೋಪಿಗಳ ದೀರ್ಘಾವಧಿ ಬಂಧನಕ್ಕೆ ಕಾರಣವಾಗುವ ಸೆಕ್ಷನ್ 45ನ್ನು ಸಂಕೋಲೆಯಾಗಿ ಬಳಸಲು ಅವಕಾಶ ನೀಡಲಾಗದು ಎಂದು ಅಕ್ಟೋಬರ್ 24ರಂದು ನೀಡಿದ ಆದೇಶದಲ್ಲಿ ತಿಳಿಸಿತು.

ಪಿಎಂಎಲ್‌ಎ ಸೆಕ್ಷನ್‌ 45 ಅನ್ನು ಆರೋಪಿಯನ್ನು ಸೆರೆವಾಸದಲ್ಲಿಡುವ ಸಾಧನವಾಗಿ ಬಳಸಲು ಅನುಮತಿಸಲಾಗದು.
- ದೆಹಲಿ ಹೈಕೋರ್ಟ್‌

ಪಿಎಂಎಲ್‌ಎ ಅಡಿಯಲ್ಲಿ ಜಾಮೀನು ಮಂಜೂರು ಮಾಡಲು ಇರುವ ಕಠಿಣ ನಿಯಮಾವಳಿಗಳನ್ನು ಸಂವಿಧಾನದ 21ನೇ ವಿಧಿಯಲ್ಲಿ ಖಾತರಿ ಪಡಿಸಲಾಗಿರುವ ಸ್ವಾತಂತ್ರ್ಯ ಹಾಗೂ ಶೀಘ್ರ ವಿಚಾರಣೆಯ ಹಕ್ಕನ್ನು ಕಸಿಯಲಾಗದು ಎಂದು ನ್ಯಾಯಾಲಯ ಹೇಳಿತು. ಸಂವಿಧಾನದ 21ನೇ ವಿಧಿಯು ಪರಮಪವಿತ್ರ ಹಕ್ಕಾಗಿದ್ದು ಕಠಿಣ ಷರತ್ತುಗಳುಳ್ಳ ವಿಶೇಷ ಶಾಸನಗಳ ಪ್ರಕರಣಗಳಲ್ಲಿಯೂ ಈ ಹಕ್ಕನ್ನು ರಕ್ಷಿಸಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಕೆಲವು ಪ್ರಕರಣಗಳಲ್ಲಿ 21ನೇ ವಿಧಿಯಡಿ  ಆರೋಪಿಗೆ ನೀಡಲಾಗುವ ಹಕ್ಕುಗಳಿಗೆ ಪಿಎಂಎಲ್‌ಎಯ ಕಟ್ಟುನಿಟ್ಟಿನ ನಿಯಮಾವಳಿಗಳು ದಾರಿ ಬಿಟ್ಟುಕೊಡಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿತು.

ಜಾಮೀನು ನೀಡುವಾಗ 21ನೇ ವಿಧಿ ಪ್ರಕಾರ ಜಾಮೀನಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಜೈಲು ನಂತರದ ಆಯ್ಕೆಯಾಗಬೇಕು ಎಂದಿತು.