ಸುದ್ದಿಗಳು

ಎಸ್‌ಸಿ/ಎಸ್‌ಟಿ ಕಾಯಿದೆ ಅಡಿ ಜಾಮೀನು: ಕಾಲಾನುಕ್ರಮಣಿಕೆ ನಿಗದಿಗೊಳಿಸಿದ ಅಲಾಹಾಬಾದ್‌ ಹೈಕೋರ್ಟ್

Bar & Bench

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ (ದೌರ್ಜನ್ಯ ತಡೆ) ಕಾಯಿದೆ- 1989ರ (ಎಸ್‌ಸಿ/ಎಸ್‌ಟಿ ಕಾಯಿದೆ) ಅಡಿ ಆರೋಪಿಯಾದ ವ್ಯಕ್ತಿಯು ಸಲ್ಲಿಸಿದ ಜಾಮೀನು ಮನವಿಯನ್ನು ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ವಿಚಾರಣೆಗೆ ನಿಗದಿಗೊಳಿಸಬೇಕು ಎಂದು ಅಲಾಹಾಬಾದ್‌ ಹೈಕೋರ್ಟ್‌ ಒತ್ತಿ ಹೇಳಿದ್ದು, ಜಾಮೀನು ಅರ್ಜಿಗಳ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಮೂಲಕ ನಿರ್ದಿಷ್ಟ ಮತ್ತು ನಿಯಮಿತ ಕಾಲಾವಧಿಯ ವಿಚಾರಣೆಗಾಗಿ ನ್ಯಾಯಾಲಯದ ಮುಂದೆ ಇಡಬೇಕು ಎಂದೂ ಒತ್ತಿ ಹೇಳಿದೆ.

ನಿಗದಿತ ಸಮಯದೊಳಗೆ ಸಂತ್ರಸ್ತರಿಗೆ ಜಾಮೀನು ವಿಚಾರಣೆಯ ನೋಟಿಸ್ ನೀಡಲು ರಾಜ್ಯ ಸರ್ಕಾರದಿಂದ ನೇಮಕವಾದವರು, ಸರ್ಕಾರಕ್ಕೆ ನೋಟಿಸ್‌ ನೀಡಿದ ವಾರದೊಳಗೆ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯದ ಮುಂದಿಡಬೇಕು. ಇದರಲ್ಲಿ ಈ-ಮೇಲ್‌ ಮೂಲಕ ಕಳುಹಿಸಲಾದ ನೋಟಿಸ್‌ ಸೇವೆಯೂ ಸೇರಿರುತ್ತದೆ ಎಂದು ಹೇಳಿದೆ.

ಇ-ಮೇಲ್‌ ಮೂಲಕ ನೋಟಿಸ್‌ ಜಾರಿಗೊಳಿಸಲಾಗಿದ್ದರೆ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯದ ಮುಂದೆ ಆರು ದಿನಗಳು,144 ಗಂಟೆಗಳ ಒಳಗೆ ಇಡಬೇಕು. ಮೇ 1, 2021ರಿಂದ ಇ-ನೋಟಿಸ್‌ ನೀಡುವುದನ್ನು ಕಡ್ಡಾಯಗೊಳಿಸಬೇಕು ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.

ಆರೋಪಿ ಸಲ್ಲಿಸಿದ ಯಾವುದೇ ಜಾಮೀನು ಮನವಿಯ ವಿಚಾರಣೆಗೂ ಮುನ್ನ ಅಪರಾಧಕ್ಕೊಳಗಾದ ಸಂತ್ರಸ್ತರಿಗೆ ತಿಳಿಸಬೇಕು ಎಂದು ಎಸ್‌ಸಿ/ಎಸ್‌ಟಿ ಕಾಯಿದೆಯ ನಿಬಂಧನೆಯಲ್ಲಿ ಉಲ್ಲೇಖಿಸಿರುವುದನ್ನು ಆಧರಿಸಿ ನ್ಯಾಯಮೂರ್ತಿ ಅಜಯ್‌ ಭಾನೋಟ್‌ ಅವರು ಆದೇಶ ಹೊರಡಿಸಿದ್ದಾರೆ.

ಇದರ ಜೊತೆಗೆ ಜಾಮೀನು ಅರ್ಜಿಯು ವಿಚಾರಣೆಗೆ ಬರುತ್ತದೆ ಎನ್ನುವುದಕ್ಕೂ ಮುನ್ನ ಅಂದರೆ ಎರಡು ದಿನಗಳು ಮುಂಚಿತವಾಗಿ ಸರ್ಕಾರಿ ವಕೀಲರಿಗೆ ಮಾಹಿತಿ ನೀಡಬೇಕು ಎಂದೂ ನ್ಯಾಯಾಲಯ ಹೇಳಿದೆ. ಸಂತ್ರಸ್ತರಿಗೆ ಜಾಮೀನು ಪ್ರಕ್ರಿಯೆಯ ನೋಟಿಸ್‌ ಜಾರಿಗೊಳಿಸವ ಸಂಬಂಧ ನ್ಯಾಯಾಲಯದಿಂದ ನೀಡಬೇಕೆ ಅಥವಾ ರಾಜ್ಯವು ನೀಡಬೇಕೆ ಎನ್ನುವ ವಿಚಾರಗಳಲ್ಲಿನ ಗೊಂದಲವೂ ಸಹ ಜಾಮೀನು ಮನವಿಯ ಈಡೇರಿಕೆಗೆ ತಡವಾಗುತ್ತದೆ ಎಂದು ನ್ಯಾಯಾಲಯವು ಹೇಳಿತು.

“ಕಾನೂನಿನಡಿಯಲ್ಲಿ ವಿವರಿಸಿದಂತೆ ಸಂತ್ರಸ್ತರ ಹಕ್ಕುಗಳನ್ನು ಎಲ್ಲಾ ಸಮಯದಲ್ಲೂ ಎತ್ತಿಹಿಡಿಯಬೇಕಾದರೂ, ಜಾಮೀನು ಅರ್ಜಿ / ಮೇಲ್ಮನವಿಯ ಸೂಚನೆಯ ಸೇವೆಯನ್ನು ರಾಜ್ಯವು ಅನಗತ್ಯವಾಗಿ ವಿಳಂಬಗೊಳಿಸಲಾಗುವುದಿಲ್ಲ ಅಥವಾ ಜಾಮೀನು ಅರ್ಜಿ ಆಲಿಸುವುದನ್ನು ಸಂತ್ರಸ್ತರು ಅನಿರ್ದಿಷ್ಟವಾಗಿ ಮುಂದೂಡಲಾಗುವುದಿಲ್ಲ,” ಎಂದು ನ್ಯಾಯಾಲಯ ಹೇಳಿದೆ.

"ಸಾಂವಿಧಾನಿಕ ನ್ಯಾಯಾಲಯಗಳು ಜನರ ಸ್ವಾತಂತ್ರ್ಯದ ರಕ್ಷಣೆಗೆ ಸದಾ ಸಿದ್ಧವಾಗಿರಬೇಕು," ಎಂದು ಅರ್ನಾಬ್ ಗೋಸ್ವಾಮಿ ಪ್ರಕರಣದಲ್ಲಿ ಇತ್ತೀಚೆಗೆ ಹೊರಬಿದ್ದ ತೀರ್ಪು ಸೇರಿದಂತೆ ವಿವಿಧ ಸುಪ್ರೀಂ ಕೋರ್ಟ್ ತೀರ್ಪುಗಳ ಪೂರ್ವನಿದರ್ಶನಗಳನ್ನು ನ್ಯಾಯಾಲಯವು ಉಲ್ಲೇಖಿಸಿದೆ.