City Civil Court and K M Jagadesh Kumar

 
ಸುದ್ದಿಗಳು

ಗಲಭೆ ಪ್ರಕರಣದಲ್ಲಿ ವಕೀಲ ಜಗದೀಶ್‌ಗೆ ಜಾಮೀನು ಮಂಜೂರು; ಜಾತಿ ನಿಂದನೆ ಪ್ರಕರಣದ ಜಾಮೀನು ಮನವಿ ಆದೇಶ ಮಾರ್ಚ್‌ ಏಳಕ್ಕೆ

ಗಲಭೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಶರತ್‌ ಖದ್ರಿ, ಪ್ರಶಾಂತಿ ಸುಭಾಷ್‌ ಮತ್ತು ಜಗದೀಶ್‌ ಪುತ್ರ ಆರ್ಯಗೌಡ ಅವರಿಗೆ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

Bar & Bench

ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ಈಚೆಗೆ ನಡೆದ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ವಕೀಲ ಕೆ ಎಂ ಜಗದೀಶ್‌ ಕುಮಾರ್‌ ಅಲಿಯಾಸ್‌ ಜಗದೀಶ್‌ ಮಹದೇವ್‌ ಅವರಿಗೆ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ. ಜಾತಿ ನಿಂದನೆ ಮತ್ತು ಪೊಲೀಸ್‌ ಸಿಬ್ಬಂದಿಗೆ ಬೆದರಿಕೆ ಹಾಕಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಜಾಮೀನು ಸಿಕ್ಕಿಲ್ಲವಾದ್ದರಿಂದ ಅವರಿಗೆ ಸದ್ಯಕ್ಕೆ ಜೈಲಿನಿಂದ ಹೊರಬರುವ ಅವಕಾಶವಿಲ್ಲ.

ಜಗದೀಶ್‌ ಅವರ ಜಾಮೀನು ಮನವಿಯ ವಿಚಾರಣೆಯ ಆದೇಶವನ್ನು ಮಾರ್ಚ್‌ 5ರಂದು ಕಾಯ್ದಿರಿಸಿದ್ದ 68ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಕಾಶಿಂ ಚೂರಿಖಾನ್‌ ಅವರು ಜಾಮೀನು ನೀಡಿ ಆದೇಶ ಮಾಡಿದರು.

ಐವತ್ತು ಸಾವಿರ ರೂಪಾಯಿ ಮೊತ್ತದ ಒಂದು ಭದ್ರತೆ, ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದ ಹಾಜರಾಗಬೇಕು. ಪ್ರಾಸಿಕ್ಯೂಷನ್‌ ಸಾಕ್ಷಿಗಳ ಮೇಲೆ ಪ್ರಭಾವ ಬೀರುವಂತಿಲ್ಲ. ಪ್ರಾಸಿಕ್ಯೂಷನ್‌ ಸಾಕ್ಷಿಗಳಿಗೆ ತಮ್ಮ ಫೇಸ್‌ಬುಕ್‌ ಖಾತೆ ಮೂಲಕ ಬೆದರಿಕೆ ಒಡ್ಡಬಾರದು, ಇಂಥದ್ದೇ ಅಪರಾಧಗಳನ್ನು ಮತ್ತೆ ಎಸಗಬಾರದು ಎಂಬ ಐದು ಷರತ್ತುಗಳನ್ನು ವಿಧಿಸಿ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿದೆ.

ಇದೇ ಪ್ರಕರಣದಲ್ಲಿ ಆರೋಪಿಗಳಾಗಿರುವ ಶರತ್‌ ಖದ್ರಿ, ಪ್ರಶಾಂತಿ ಸುಭಾಷ್‌ ಮತ್ತು ಜಗದೀಶ್‌ ಪುತ್ರ ಆರ್ಯಗೌಡ ಅವರಿಗೆ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಜಾತಿ ನಿಂದನೆ ಪ್ರಕರಣದ ಜಾಮೀನು ಆದೇಶ ಮಾ.7ಕ್ಕೆ

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ನಿವಾಸಿಯಾದ ಮುತ್ತಯ್ಯ ಎಂಬವರು ಫೆಬ್ರವರಿ 14ರಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯಿದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿ ಕೊಡಿಗೇಹಳ್ಳಿ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗದೀಶ್‌ ಅವರ ಜಾಮೀನು ಮನವಿಯ ವಿಚಾರಣೆ ನಡೆಸಿದ ಪೀಠವು ಆದೇಶವನ್ನು ಮಾರ್ಚ್‌ 7ಕ್ಕೆ ಕಾಯ್ದಿರಿಸಿದೆ.

ಇದಲ್ಲದೇ, ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಆಯುಕ್ತರ ಸಹಾಯಕ ಸಿಬ್ಬಂದಿ ರಮೇಶ್‌ ಎಂಬವರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬೆದರಿಕೆಯೊಡ್ಡಿದ ಆರೋಪದ ಹಿನ್ನೆಲೆಯಲ್ಲಿ ರಮೇಶ್‌ ಅವರ ಪರವಾಗಿ ಪೊಲೀಸ್‌ ಸಿಬ್ಬಂದಿ ನಾಗರಾಜ್‌ ಕೇನಿಕರ್‌ ಅವರು ನೀಡಿದ ದೂರು ಆಧರಿಸಿ ಫೆಬ್ರವರಿ 13ರಂದು ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಜಗದೀಶ್‌ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 506, 290, 353ರ ಅಡಿ ಪ್ರಕರಣ ದಾಖಲಿಸಲಾಗಿದೆ.

“ಈ ಪ್ರಕರಣದಲ್ಲಿ ಬಾಡಿ ವಾರೆಂಟ್‌ ಹೊರಡಿಸಲಾಗಿಲ್ಲ. ಈ ವಿಚಾರವನ್ನು ಪೀಠದ ಗಮನಕ್ಕೆ ತರಲಾಗಿದೆ. ಇದನ್ನೂ ಮಾರ್ಚ್‌ 7ರಂದು ನ್ಯಾಯಮೂರ್ತಿಗಳು ನಿರ್ಧರಿಸಲಿದ್ದಾರೆ” ಎಂದು ಜಗದೀಶ್‌ ಪರ ವಕೀಲರಾದ ಹರೀಶ್‌ ಪ್ರಭು “ಬಾರ್‌ ಅಂಡ್‌ ಬೆಂಚ್‌”ಗೆ ತಿಳಿಸಿದ್ದಾರೆ.