City Civil Court and K M Jagadesh Kumar

 
ಸುದ್ದಿಗಳು

ವಕೀಲ ಜಗದೀಶ್‌ ಜಾಮೀನು ಮನವಿ ಆದೇಶವನ್ನು ಮಾ.5ಕ್ಕೆ ಕಾಯ್ದಿರಿಸಿದ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ

ನ್ಯಾಯಾಲಯದ ಆವರಣದಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ನ್ಯಾಯಾಲಯವು ಪರಿಶೀಲಿಸಬಹುದು ಎಂದು ಕೋರಿದ ಜಗದೀಶ್‌ ಪರ ವಕೀಲರು.

Bar & Bench

ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ವಕೀಲ ಕೆ ಎಂ ಜಗದೀಶ್‌ ಕುಮಾರ್‌ ಅಲಿಯಾಸ್‌ ಜಗದೀಶ್‌ ಮಹದೇವ್‌ ಅವರ ಜಾಮೀನು ಮನವಿಗೆ ಸಂಬಂಧಿಸಿದ ಆದೇಶವನ್ನು ಸೋಮವಾರ ಬೆಂಗಳೂರು ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಕಾಯ್ದಿರಿಸಿದೆ.

ಜಗದೀಶ್‌ ಅವರಿಗೆ ಜಾಮೀನು ಹಾಗೂ ಉಳಿದ ಆರೋಪಿಗಳಾದ ಶರತ್‌ ಖದ್ರಿ, ಪ್ರಶಾಂತಿ ಸುಭಾಷ್‌ ಮತ್ತು ಜಗದೀಶ್‌ ಪುತ್ರ ಆರ್ಯಗೌಡ ಅವರಿಗೆ ನಿರೀಕ್ಷಣಾ ಜಾಮೀನು ಕೋರಿ ವಕೀಲ ಹರೀಶ್‌ ಪ್ರಭು ಅವರು ಆರೋಪಿಗಳ ಪರವಾಗಿ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು 68ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಕಾಶಿಂ ಚೂರಿಖಾನ್‌ ಅವರ ನೇತೃತ್ವದ ಪೀಠವು ವಿಚಾರಣೆ ನಡೆಸಿ, ಆದೇಶವನ್ನು ಮಾರ್ಚ್‌ 5ಕ್ಕೆ ಕಾಯ್ದಿರಿಸಿದೆ.

ಜಗದೀಶ್ ಅವರ ಜಾಮೀನು ಮನವಿಯನ್ನು ವಿರೋಧಿಸಿ ವಾದ ಮಂಡಿಸಿದ ಸಾರ್ವಜನಿಕ ಅಭಿಯೋಜಕ ಆರ್‌ ವಿ ಭಟ್‌ ಅವರು ಆರೋಪಿ ಜಗದೀಶ್‌ ಅವರ ವಿರುದ್ಧ ಹಿಂದೆ ನಾನಾ ಆರೋಪದಲ್ಲಿ 18 ಪ್ರಕರಣಗಳು ದಾಖಲಾಗಿದ್ದವು. ಸದ್ಯ ಅವರು ವಿವಿಧ ಸಂದರ್ಭದಲ್ಲಿ ನ್ಯಾಯಾಂಗ ಮತ್ತು ವಕೀಲ ಸಮುದಾಯದ ಬಗ್ಗೆ ಮಾತನಾಡಿರುವ ವಿಡಿಯೊಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಇದನ್ನು ಪರಿಶೀಲಿಸಿದರೆ ಅವರು ಸಾಂವಿಧಾನಿಕ ವ್ಯವಸ್ಥೆಗೆ ಕಿಂಚಿತ್ತೂ ಗೌರವ ನೀಡಿಲ್ಲ ಎಂಬುದು ತಿಳಿಯುತ್ತದೆ. ಭ್ರಷ್ಟಾಚಾರ ವಿರೋಧಿ ಹೋರಾಟದ ಹೆಸರಿನಲ್ಲಿ ವ್ಯವಸ್ಥೆಯ ವಿರುದ್ಧ ಸಾಮಾನ್ಯ ಜನರ ಭಾವನೆ ಕೆರಳಿಸಲು ಪ್ರಯತ್ನ ಮಾಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ಘಟನೆ ನಡೆದ ದಿನ ವಿವಿಧ ಪಕ್ಷಗಳ ಕಾರ್ಯಕರ್ತರನ್ನು ಅರ್ಜಿದಾರ ಜಗದೀಶ್‌ ಕರೆತಂದು ಗಲಾಟೆ ಮಾಡಿಸಿದ್ದಾರೆ. ಹತ್ಯೆ ಬೆದರಿಕೆ ಹಾಕಲಾಗಿದೆ ಎಂದು ದೂರುದಾರರು ಲಿಖಿತ ದೂರು ದಾಖಲಿಸಿದ್ದಾರೆ ಎಂದರು.

ದೂರುದಾರ ನಾರಾಯಣ ಸ್ವಾಮಿ ಅವರಿಗೆ ಜಗದೀಶ್‌ ಅವರು ಕತ್ತು ಹಿಸುಕಿ, ಮರ್ಮಾಂಗಕ್ಕೆ ಒದೆಯುವುದಕ್ಕೆ ಪ್ರಯತ್ನ ಮಾಡಿದ್ದರಿಂದ ನಾರಾಯಣ ಸ್ವಾಮಿ ಅವರ ಕೈಗೆ ಪೆಟ್ಟಾಗಿದೆ. ನೋವಾಗಿದ್ದರಿಂದ ಅವರು ತಡವಾಗಿ ಪ್ರಕರಣ ದಾಖಲಿಸಿದ್ದಾರೆ. ಜಾಮೀನುಸಹಿತ ಪ್ರಕರಣ ಇದ್ದರೂ ಕೆಲವೊಮ್ಮೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂಬ ವಿಚಾರ ಕಂಡುಬಂದಾಗ ನ್ಯಾಯಾಲಯಗಳು ಜಾಮೀನು ಮನವಿ ತಿರಸ್ಕರಿಸಿರುವ ಐತಿಹ್ಯಗಳಿವೆ. ಇಲ್ಲಿ, ಜಗದೀಶ್‌ ಅವರು ವಕೀಲರಾಗಿದ್ದುಕೊಂಡು ನ್ಯಾಯ ವ್ಯವಸ್ಥೆಗೆ ಹೆಚ್ಚಿನ ಗೌರವ ನೀಡಬೇಕಿತ್ತು. ಆದರೆ, ಜಗದೀಶ್‌ ಅವರು ಇದಾವುದನ್ನೂ ಗಮನದಲ್ಲಿಟ್ಟುಕೊಳ್ಳದೇ ನಡೆದುಕೊಂಡಿರುವುದರಿಂದ ಅವರು ಜಾಮೀನಿಗೆ ಅರ್ಹರಲ್ಲ ಎಂದು ತೀವ್ರ ವಿರೋಧ ದಾಖಲಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಗದೀಶ್‌ ಪರ ವಕೀಲ ಹರೀಶ್‌ ಪ್ರಭು ಅವರು, ದೂರುದಾರ ವಕೀಲ ನಾರಾಯಣ ಸ್ವಾಮಿ ಅವರು ಭೂಗತ ಜಗತ್ತಿನ ಜೊತೆ ನಂಟು ಹೊಂದಿದ್ದ ಮುತ್ತಪ್ಪ ರೈ ಅವರ ಜೊತೆ ಸಂಪರ್ಕದಲ್ಲಿದ್ದರು. 2021ರಲ್ಲಿ ವಕೀಲ ಶ್ರೀನಿವಾಸ್‌ ರೆಡ್ಡಿ ಅವರ ಕಾರು ಸುಟ್ಟಿರುವ ಪ್ರಕರಣದಲ್ಲಿ ನಾರಾಯಣ ಸ್ವಾಮಿ ಅವರ ಹೆಸರು ತಳುಕಿ ಹಾಕಿಕೊಂಡಿದೆ. ಇದರಲ್ಲಿ ನಾರಾಯಣ ಸ್ವಾಮಿ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರ ಪರಿಷತ್‌ನಲ್ಲಿ ಅವರ ವಿರುದ್ಧ ದೂರು ದಾಖಲಾಗಿದೆ. ಇದರಿಂದ ದೂರುದಾರರ ಹಿನ್ನೆಲೆ ಏನು ಎಂಬುದು ಸ್ಪಷ್ಟವಾಗುತ್ತದೆ ಎಂದರು.

ಜಗದೀಶ್‌ ಅವರು ತಮ್ಮ ಪುತ್ರ ಆರ್ಯಗೌಡನ ಮೇಲಿನ ಹಲ್ಲೆಯನ್ನು ಸಹಿಸಲಾಗದೆ ಗೂಂಡಾಗಳು ದಾಳಿ ಮಾಡಿದ್ದಾರೆ ಎಂದು ಹೇಳಿದ್ದಾರೆಯೇ ವಿನಾ ಇಡೀ ವಕೀಲ ಸಮುದಾಯವನ್ನು ಗುರಿಯಾಗಿಸಿಕೊಂಡು ಯಾವುದೇ ಮಾತು ಆಡಿಲ್ಲ. ನ್ಯಾಯಾಂಗದ ಯಾವುದೇ ಅಧಿಕಾರಿ ಅಥವಾ ನ್ಯಾಯಮೂರ್ತಿಗಳನ್ನು ನಿಂದಿಸುವ ಕೆಲಸವನ್ನು ಮಾಡಿಲ್ಲ. ನ್ಯಾಯಾಂಗದ ದೃಷ್ಟಿಯಲ್ಲಿ ಜಗದೀಶ್‌ ಅವರನ್ನು ಖಳನಾಯಕರನ್ನಾಗಿ ಬಿಂಬಿಸಲು ಷಡ್ಯಂತ್ರಗಳನ್ನು ನಡೆಸಲಾಗುತ್ತಿದೆ. ಈ ಮೂಲಕ ಜಗದೀಶ್‌ ಅವರು ಕೈಗೊಂಡಿದ್ದ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಹಿನ್ನಡೆ ಉಂಟು ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

ಆರೋಪಿ ಸ್ಥಾನದಲ್ಲಿ ನಿಂತಿರುವ ಜಗದೀಶ್‌ ಅವರು ವಕೀಲರಾಗಿದ್ದು, ಯಾವುದೇ ರೀತಿಯಲ್ಲೂ ವಿಚಾರಣೆ ಅಥವಾ ತನಿಖಾ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವುದಿಲ್ಲ. ಸಿಟಿ ಸಿವಿಲ್‌ ನ್ಯಾಯಾಲಯದ ಆವರಣದಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ನ್ಯಾಯಾಲಯವು ಪರಿಶೀಲಿಸಬಹುದು. ಇದನ್ನು ಮರೆಮಾಚಿ ಫೇಸ್‌ಬುಕ್‌ ವಿಡಿಯೊಗಳತ್ತ ಪ್ರಾಸಿಕ್ಯೂಷನ್‌ ಬೆರಳು ಮಾಡುತ್ತಿದೆ ಎಂದು ವಿವರಿಸಿದರು.

ಬೆಂಗಳೂರು ವಕೀಲರ ಸಂಘವು (ಎಎಬಿ) ಪೊಲೀಸ್‌ ಆಯುಕ್ತರಿಗೆ ನೀಡಿರುವ ದೂರಿನಲ್ಲಿ ಎಎಬಿ ಆಡಳಿತ ಮಂಡಳಿ ಸದಸ್ಯ ನಾರಾಯಣ ಸ್ವಾಮಿ ಅವರ ಮೇಲೆ ಹಲ್ಲೆಯಾಗಿದೆ ಎಂದು ಉಲ್ಲೇಖಿಸಿಲ್ಲ. ಜಗದೀಶ್‌ ಅವರನ್ನು ಬಂಧಿಸುವ ಏಕೈಕ ಉದ್ದೇಶದಿಂದ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 307ರ ಅಡಿ ಪ್ರಕರಣ ದಾಖಲಿಸಿಲಾಗಿದೆ. ನ್ಯಾಯಾಲಯ ವಿಧಿಸುವ ಷರತ್ತುಗಳಿಗೆ ಜಗದೀಶ್‌ ಬದ್ಧರಾಗಿರುತ್ತಾರೆ. ಅವರನ್ನು ಜೈಲಿನಲ್ಲಿ ಇಡುವುದರಿಂದ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗುತ್ತದೆ. ಇದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸಲಿದೆ. ಹೀಗಾಗಿ, ಅವರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಮಾರ್ಚ್‌ 3ಕ್ಕೆ ಮತ್ತೊಂದು ಪ್ರಕರಣದ ವಿಚಾರಣೆ

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ನಿವಾಸಿಯಾದ ಮುತ್ತಯ್ಯ ಎಂಬವರು ಫೆಬ್ರವರಿ 14ರಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯಿದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿ ಕೊಡಿಗೇಹಳ್ಳಿ ಠಾಣೆಯಲ್ಲಿ ಜಗದೀಶ್‌ ಅವರ ವಿರುದ್ದ ದೂರು ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್‌ 3ರಂದು ಜಗದೀಶ್‌ ಅವರನ್ನು ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ. ಈ ಪ್ರಕರಣದಲ್ಲಿ ತನಿಖೆಗಾಗಿ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಪೊಲೀಸರು ಮನವಿ ಸಲ್ಲಿಸುವ ಸಾಧ್ಯತೆ ಇದೆ.