Karnataka HC and Justice B M Shyam Prasad 
ಸುದ್ದಿಗಳು

ಉದ್ಯೋಗಿಗಳಿಗೆ ಗ್ರಾಚ್ಯುಟಿ ವಿಮಾ ಪ್ರೀಮಿಯಂ ಪಾವತಿಸದ ಬಿಎಚ್‌ಎ: ಬಲವಂತ ಕ್ರಮಕೈಗೊಳ್ಳದಂತೆ ಹೈಕೋರ್ಟ್‌ ಆದೇಶ

ನಿಲುವು ತಿಳಿಸುವಂತೆ ಮತ್ತು ದಾಖಲೆ ಸಲ್ಲಿಸುವಂತೆ ಹಿಂದೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯವು ಸೂಚನೆ ನೀಡಿತ್ತು. ಇದನ್ನು ಸರ್ಕಾರ ಅನುಪಾಲಿಸದ ಹಿನ್ನೆಲೆಯಲ್ಲಿ ಬಲವಂತದ ಕ್ರಮ ಕೈಗೊಳ್ಳದಂತೆ ಮಧ್ಯಂತರ ಆದೇಶ ಮಾಡಿದೆ.

Bar & Bench

ಐದು ವರ್ಷಕ್ಕಿಂತ ಹೆಚ್ಚಿನ ಸೇವಾವಧಿ ಪೂರೈಸಿರುವ ತನ್ನ ಸಿಬ್ಬಂದಿಗೆ ಗ್ರಾಚ್ಯುಟಿ ವಿಮಾ ಪ್ರೀಮಿಯಂ ಮೊತ್ತವನ್ನು ಪಾವತಿಸದಿರುವ ಸಂಬಂಧ ಬೃಹತ್‌ ಬೆಂಗಳೂರು ಹೋಟೆಲ್‌ ಅಸೋಸಿಯೇಷನ್‌ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ಬೆಂಗಳೂರು ಹೋಟೆಲ್‌ ಅಸೋಸಿಯೇಷನ್‌ ಮತ್ತಿತರ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಬಿ ಎಂಶ್ಯಾಮ್‌ ಪ್ರಸಾದ್‌ ಅವರ ಏಕಸದಸ್ಯ ಪೀಠ ನಡೆಸಿತು.

ಅರ್ಜಿದಾರರ ವಿರುದ್ಧ ಬಲವಂತ ಕೈಗೊಳ್ಳಬಾರದು ಎಂದು ಮಧ್ಯಂತರ ಆದೇಶ ಮಾಡಿರುವ ಪೀಠವು ವಿಚಾರಣೆಯನ್ನು ಜೂನ್‌ 3ಕ್ಕೆ ಮುಂದೂಡಿದೆ. ಅರ್ಜಿಯಲ್ಲಿ ತಿದ್ದುಪಡಿ ಮಾಡಿ ಅಖಿಲ ಭಾರತ ಸೆಂಟ್ರಲ್‌ ಕೌನ್ಸಿಲ್‌ ಆಫ್‌ ಟ್ರೇಡ್‌ ಯೂನಿಯನ್‌(ಎಐಸಿಸಿಟಿಯು) ಮತ್ತು ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌(ಸಿಐಟಿಯು) ಸಂಘಟನೆಗಳನ್ನು ಪ್ರತಿವಾದಿಗಳನ್ನಾಗಿ ಮಾಡುವಂತೆ ಅರ್ಜಿದಾರರಿಗೆ ನ್ಯಾಯಾಲಯ ಸೂಚಿಸಿದೆ.

ನಿಲುವು ತಿಳಿಸುವಂತೆ ಮತ್ತು ದಾಖಲೆ ಸಲ್ಲಿಸುವಂತೆ ಹಿಂದೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯವು ಸೂಚನೆ ನೀಡಿತ್ತು. ಇದನ್ನು ಸರ್ಕಾರ ಅನುಪಾಲಿಸದ ಹಿನ್ನೆಲೆಯಲ್ಲಿ ಬಲವಂತದ ಕ್ರಮ ಕೈಗೊಳ್ಳದಂತೆ ಮಧ್ಯಂತರ ಆದೇಶ ಮಾಡಿದೆ.

“ಈ ಹಂತದ ಅರ್ಜಿಯ ವಿಚಾರಣೆ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳಬೇಕಿದೆ. ವಿಮಾ ನಿಯಮಗಳ ಕಾರ್ಯಾಚರಣೆಗೆ ತಡೆ ನೀಡುವುದರಿಂದ ಉದ್ದೇಶಿತ ವಿಮಾ ಪ್ರೀಮಿಯಂ ಅನ್ನು ಪಾವತಿಸಬಹುದಾದ ಉದ್ಯೋಗದಾತರು ಸಹ ಪಾವತಿಸಲು ಸಾಧ್ಯವಾಗದಿರಬಹುದು ಮತ್ತು ಅದನ್ನು ತಪ್ಪಿಸಬೇಕು. ಬಲವಂತದ ಕ್ರಮ ಕೈಗೊಳ್ಳುವುದನ್ನು ನ್ಯಾಯಯುತ ನಿಯಮಗಳ ಮೇಲೆ ತಡೆಹಿಡಿದರೆ, ಸಂಬಂಧಪಟ್ಟ ಎಲ್ಲರ ಹಿತಾಸಕ್ತಿ ರಕ್ಷಿಸಿದಂತಾಗಲಿದೆ. ಆದ್ದರಿಂದ, ಐದು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಉದ್ಯೋಗಿಗಳಿಗೆ ಪಾವತಿಸಬೇಕಾದ ವಿಮೆಯನ್ನು ವಿಮಾ ನಿಯಮಗಳ ಅಡಿಯಲ್ಲಿ ಗ್ರಾಚ್ಯುಟಿ ವಿಮಾ ಪ್ರೀಮಿಯಂ ಪಾವತಿಸುವಲ್ಲಿ ವಿಫಲರಾಗಿರುವುದಕ್ಕೆ ಅರ್ಜಿದಾರರ ವಿರುದ್ಧ ಮುಂದಿನ ವಿಚಾರಣೆಯ ದಿನಾಂಕದವರೆಗೆ ಬಲವಂತದ ಕ್ರಮ ತೆಗೆದುಕೊಳ್ಳಬಾರದು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರ ಪರ ವಕೀಲರು “ಕರ್ನಾಟಕ ಕಡ್ಡಾಯ ಗ್ರಾಚ್ಯುಟಿ ವಿಮಾ ನಿಯಮಗಳು ಉದ್ಯೋಗದಾತರು ಗ್ರಾಚ್ಯುಟಿ ಪಾವತಿ ಕಾಯಿದೆ 1972 ರ ಪ್ರಕಾರ ಅರ್ಹ ಉದ್ಯೋಗಿಗಳಿಗೆ ಗ್ರಾಚ್ಯುಟಿ ಪಾವತಿಯ ಹೊಣೆಗಾರಿಕೆಗೆ ವಿಮಾ ಪಾಲಿಸಿಯನ್ನು ಪಡೆಯುವುದು ಕಡ್ಡಾಯಗೊಳಿಸುತ್ತದೆ. ಸರ್ಕಾರವು 2024ರ ಜನವರಿ 10ರಂದು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ಇದು ಸಂವಿಧಾನದ 14ನೇ ವಿಧಿಗೆ ವಿರುದ್ಧ ಎಂದು ಘೋಷಿಸಬೇಕು” ಎಂದು ಕೋರಿದ್ದಾರೆ.