Vidhana Soudha
Vidhana Soudha 
ಸುದ್ದಿಗಳು

ಪೆರಿಫೆರಲ್ ರಸ್ತೆ: ಇಐಎನ ತಜ್ಞರ ಸಮಿತಿಯ ಕೂಲಂಕಷ ಪರಿಶೀಲನೆಗೆ ಹೈಕೋರ್ಟ್ ತಡೆ, ಆನ್‌ಲೈನ್‌ ಸಭೆ ತಡೆಗೆ ನಿರಾಕರಣೆ

Bar & Bench

ಬೆಂಗಳೂರಿನ ಎಂಟು ಪಥದ ಪೆರಿಫೆರಲ್ ರಸ್ತೆಗೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಅಂತಿಮ ವರದಿ ಸಲ್ಲಿಸಿದರೂ ಪರಿಸರ ಪರಿಣಾಮ ಮೌಲ್ಯಮಾಪನ (ಇಐಎ) ಅಧಿಸೂಚನೆ 2006ರಲ್ಲಿ ಸೂಚಿಸಿರುವಂತೆ ತಜ್ಞರ ಸಮಿತಿಯ ಕೂಲಂಕಷ ಪರಿಶೀಲನೆಗೆ ಯಾವುದೇ ಕ್ರಮಕೈಗೊಳ್ಳಬಾರದು ಎಂದು ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ಪೆರಿಫೆರಲ್ ವರ್ತುಲ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ವರ್ಚುವಲ್ ವ್ಯವಸ್ಥೆಯ ಮೂಲಕ ಕಡ್ಡಾಯವಾಗಿ ಇಐಎ ಸಾರ್ವಜನಿಕ ಸಮಾಲೋಚನೆ ನಡೆಸುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಮಧ್ಯಂತರ ಆದೇಶ ನೀಡಿತು. ಅಕ್ಟೋಬರ್ 15ಕ್ಕೆ ವಿಚಾರಣೆ ಮುಂದೂಡಿತು.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಮತ್ತು ನ್ಯಾ. ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠವು ಹೀಗೆ ಹೇಳಿತು.

“ಎರಡನೇ ಪ್ರತಿವಾದಿಯಾದ ಬಿಡಿಎಯು ಅಂತಿಮ ಪರಿಸರ ಪರಿಣಾಮ ಮೌಲ್ಯಮಾಪನ ವರದಿಯನ್ನು ತಜ್ಞರ ಸಮಿತಿಯ ಕೂಲಂಕಷ ಪರಿಶೀಲನೆಗೆ ಸಲ್ಲಿಸಿದರೂ 2006ರ ಸೆಪ್ಟೆಂಬರ್ 14ರ ನಾಲ್ಕನೇ ಕಲಂ 7ನೇ ಪ್ಯಾರಾಗ್ರಾಫ್‌ನಲ್ಲಿ ಸೂಚಿಸಿರುವಂತೆ ಯಾವುದೇ ಕ್ರಮಕೈಗೊಳ್ಳಬಾರದು.”
ಕರ್ನಾಟಕ ಹೈಕೋರ್ಟ್

“ಜೂಮ್ ಅಪ್ಲಿಕೇಶನ್ ಮೂಲಕ ವರ್ಚುವಲ್ ವಿಚಾರಣೆ ಈಗಾಗಲೇ ಆರಂಭವಾಗಿದೆ. ಆದ್ದರಿಂದ ವರ್ಚುವಲ್ ವಿಚಾರಣೆ ನಡೆಸದಂತೆ ಮಧ್ಯಂತರ ತಡೆಯಾಜ್ಞೆ ನೀಡಲಾಗದು” ಎಂದು ನ್ಯಾಯಾಲಯ ಹೇಳಿತು.

“ಅರ್ಜಿದಾರರು ಕಾನೂನು ವಿದ್ಯಾರ್ಥಿಗಳು ಎಂದು ಅರ್ಜಿದಾರರ ಪರವಾಗಿ ವಿಚಾರಣೆಗೆ ಹಾಜರಾಗಿರುವ ವಕೀಲರು ತಿಳಿಸಿದ್ದಾರೆ. ನ್ಯಾಯಾಲಯದಲ್ಲಿ ವಿಚಾರಣೆಗೆ ಮನವಿಯನ್ನು ನಿಗದಿಗೊಳಿಸುವುದಕ್ಕೂ ಮುನ್ನವೇ ಮಾಧ್ಯಮಗಳಿಗೆ ಅರ್ಜಿ ಸಲ್ಲಿಸುವ ಮೂಲಕ ಪ್ರಚಾರ ನೀಡಲಾಗಿದೆ. ಇಂಥ ಪ್ರಚಾರ ನೀಡಬಾರದು ಎಂದು ತಡೆಯಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ. ಇದಕ್ಕೂ ಮುನ್ನ ಪ್ರಚಾರ ನೀಡಿರುವುದಕ್ಕೆ ಸಂಬಂಧಿಸಿದಂತೆ ನಾವು ತಪ್ಪು ಹುಡುಕಲಾಗದು” ಎಂದು ನ್ಯಾಯಪೀಠ ಹೇಳಿತು.

“ಇಂದು ಕಾನೂನು ವಿದ್ಯಾರ್ಥಿಗಳಾಗಿರುವವರು ಭವಿಷ್ಯದ ವಕೀಲರಾಗಲಿದ್ದಾರೆ. ನ್ಯಾಯಾಲಯದಲ್ಲಿ ಅರ್ಜಿಯ ಅರ್ಹತೆ ನಿರ್ಧಾರವಾಗುವುದಕ್ಕೂ ಮುನ್ನವೇ ಮಾಧ್ಯಮಗಳ ಮುಂದೆ ಹೋಗುವುದು ಸರಿಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸಬೇಕಿದೆ. ಮಾಧ್ಯಮಗಳಲ್ಲಿನ ಪ್ರಚಾರಕ್ಕೆ ಸಂಬಂಧಿಸಿದಂತೆ ತಾವು ಜವಾಬ್ದಾರಲ್ಲ ಎಂದು ಅರ್ಜಿದಾರರು ಹೇಳಿದರೆ, ಕಾನೂನು ವಿದ್ಯಾರ್ಥಿಗಳಾದ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಈ ಪರಿಯ ಪ್ರಚಾರ ನೀಡುವ ಕುರಿತ ಪ್ರಶ್ನೆಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯವನ್ನು ದಾಖಲೆಯಲ್ಲಿ ಸಲ್ಲಿಸಬೇಕು.”
ಕರ್ನಾಟಕ ಹೈಕೋರ್ಟ್

“ಮನವಿಯ ವಿಚಾರಣೆಗೆ ನ್ಯಾಯಾಲಯದಲ್ಲಿ ದಿನಾಂಕ ನಿಗದಿಯಾಗುವ ಮುನ್ನವೇ ಮಾಧ್ಯಮಗಳ ಬಳಿಗೆ ಹೋಗುವುದಕ್ಕೆ ನಮ್ಮ ಸಮ್ಮತಿಯಿಲ್ಲ. ಇದಕ್ಕೆ ಸಂಬಂಧಿಸಿದಂತೆ ಅವರು ಪಾಠ ಕಲಿಯಬೇಕು” ಎಂದು ನ್ಯಾಯಪೀಠ ಖಾರವಾಗಿ ಹೇಳಿತು.

ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು “ಮಾಧ್ಯಮಗಳಿಗೆ ವಿಷಯ ಮಟ್ಟಿಸಿರುವುದಕ್ಕೆ ಸಂಬಂಧಿಸಿದಂತೆ ನನ್ನ ಕಕ್ಷಿದಾರರು ಹೊಣೆ ಎಂಬುದು ನನಗೆ ತಿಳಿದಿರಲಿಲ್ಲ. ಸುಪ್ರೀಂ ಕೋರ್ಟ್‌ನಲ್ಲೂ ವಕೀಲರು ಪರಿಶೀಲಿಸುವ ಮುನ್ನವೇ ಅರ್ಜಿಗಳು ಮಾಧ್ಯಮಗಳನ್ನು ತಲುಪಿರುತ್ತವೆ. ಎಲ್ಲಾ ಸಂದರ್ಭದಲ್ಲೂ ಈ ಕೆಲಸವನ್ನು ವಕೀಲರು ಅಥವಾ ಕಕ್ಷಿದಾರರು ಮಾಡುತ್ತಾರೆ ಎನ್ನಲಾಗದು” ಎಂದರು.