Bangalore Riots 2020 
ಸುದ್ದಿಗಳು

[ಬೆಂಗಳೂರು ಗಲಭೆ ಪ್ರಕರಣ] ತೀರ್ಪು ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್‌

“ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿ, ಆರೋಪಿಗಳನ್ನು ಬಂಧಿಸಲಾಗಿದೆ. ಕ್ಲೇಮ್‌ ಕಮಿಷನರ್‌ ಅವರನ್ನು ನೇಮಕ ಮಾಡಲಾಗಿದೆ. ಹೀಗಿರುವಾಗ ಮನವಿಗಳನ್ನು ಬಾಕಿ ಉಳಿಸಿಕೊಳ್ಳುವ ಅಗತ್ಯವೇನಿದೆ” ಎಂದು ಪ್ರಶ್ನಿಸಿದ ನ್ಯಾಯಾಲಯ.

Bar & Bench

ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಂಬಂಧಿ ನವೀನ್‌ ಎಂಬಾತ ಪ್ರವಾದಿ ಮೊಹಮ್ಮದ್‌ ಅವರ ಕುರಿತು ಅವಹೇಳನಕಾರಿ ಫೇಸ್‌ಬುಕ್‌ ಪೋಸ್ಟ್‌ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆ ಜಿ ಹಳ್ಳಿ ಮತ್ತು ಡಿ ಜೆ ಹಳ್ಳಿಯಲ್ಲಿ ನಡೆದ ಗಲಭೆ ಕುರಿತು ಸಲ್ಲಿಕೆಯಾಗಿರುವ ವಿವಿಧ ಮನವಿಗಳಿಗೆ ಸಂಬಂಧಿಸಿದ ತೀರ್ಪನ್ನು ಸೋಮವಾರ ಕರ್ನಾಟಕ ಹೈಕೋರ್ಟ್‌ ಕಾಯ್ದಿರಿಸಿದೆ.

ಆಲ್‌ ಇಂಡಿಯಾ ಮಿಲ್ಲಿ ಕೌನ್ಸಿಲ್‌, ವಕೀಲ್‌ ಎನ್‌ ಪಿ ಅಮೃತೇಶ್‌, ಗಿರೀಶ್‌ ಭಾರದ್ವಾಜ್‌ ಮತ್ತು ಹೆಚ್ಚುವರಿ ಗೃಹ ಕಾರ್ಯದರ್ಶಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಹಾಯಕ ಸಾಲಿಸಿಟರ್‌ ಜನರಲ್‌ ಎಚ್‌ ಶಾಂತಿಭೂಷಣ್‌ ಅವರು ಗಲಭೆಗೆ ಸಂಬಂಧಿಸಿದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಇದನ್ನು ಕೆಲಕಾಲ ಪರಿಶೀಲಿಸಿದ ಪೀಠವು ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವ ಮೂಲಕ ನಾಲ್ಕೂ ಮನವಿಗಳನ್ನು ವಿಲೇವಾರಿ ಮಾಡಲಾಗುವುದು ಎಂದಿತು.

ಇದಕ್ಕೆ ಅರ್ಜಿದಾರರ ವಕೀಲರು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಪೀಠವು “ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿ, ಆರೋಪಿಗಳನ್ನು ಬಂಧಿಸಲಾಗಿದೆ. ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟ ಉಂಟು ಮಾಡಿದ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ಕೋರಿಕೆಯಂತೆ ಪರಿಹಾರ ಆಯುಕ್ತರನ್ನಾಗಿ (ಕ್ಲೇಮ್‌ ಕಮಿಷನರ್) ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌ ಎಸ್‌ ಕೆಂಪಣ್ಣ ಅವರನ್ನು ನೇಮಕ ಮಾಡಲಾಗಿದೆ. ಪರಿಹಾರ ಆಯುಕ್ತರು ತಮ್ಮ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಮನವಿಗಳನ್ನು ಬಾಕಿ ಉಳಿಸಿಕೊಳ್ಳುವ ಅಗತ್ಯವೇನಿದೆ” ಎಂದು ಪ್ರಶ್ನಿಸಿತು.

“ನ್ಯಾಯಾಲಯವು ಪರಿಹಾರ ಆಯುಕ್ತರನ್ನು‌ ನೇಮಿಸಿದೆ. ಮೂಲಸೌಕರ್ಯ ಕೊರತೆ ಒಳಗೊಂಡಂತೆ ತಮ್ಮ ಕರ್ತವ್ಯ ನಿರ್ವಹಿಸಲು ಸಮಸ್ಯೆಯಾದರೆ ಕ್ಲೇಮ್‌ ಕಮಿಷನರ್‌ ನ್ಯಾಯಾಲಯಕ್ಕೆ ಮನವಿ ಸಲ್ಲಿಸಬಹುದಾಗಿದೆ. ಅವರಿಗೆ ಎಲ್ಲಾ ರೀತಿಯ ಬೆಂಬಲ ಮತ್ತು ಸಹಕಾರ ನೀಡಲಾಗುವುದು. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗುವುದು” ಎಂದು ಪೀಠ ಹೇಳಿದೆ.

“ಪರಿಹಾರ ಆಯುಕ್ತರ ವರದಿಯ ಅನುಸಾರ ರಾಜ್ಯ ಸರ್ಕಾರವು ಬಾಧಿತರಿಗೆ ತುರ್ತಾಗಿ ಪರಿಹಾರ ವಿತರಿಸಬೇಕು. ಈ ವಿಚಾರವನ್ನು ತೀರ್ಪಿನಲ್ಲಿ ಉಲ್ಲೇಖಿಸಲಾಗುವುದು” ಎಂದು ನ್ಯಾಯಾಲಯವು ಮೌಖಿಕವಾಗಿ ಹೇಳಿತು.