ಸುದ್ದಿಗಳು

ಬೆಂಗಳೂರು ಗಲಭೆ: ಮಾಜಿ ಮೇಯರ್ ಸಂಪತ್ ರಾಜ್ ಪತ್ತೆ ಹಚ್ಚಿ, ಬಂಧಿಸುವಂತೆ ಕರ್ನಾಟಕ ಹೈಕೋರ್ಟ್ ನಿರ್ದೇಶನ

ಸಂಪತ್ ರಾಜ್ ಬಂಧನಕ್ಕೆ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದ್ದು ಅವರು ಪರಾರಿಯಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ವಕೀಲರು ತಿಳಿಸಿದ ನಂತರ ಪೀಠ ಈ ನಿರ್ದೇಶನ ನೀಡಿದೆ.

Bar & Bench

ಆಗಸ್ಟ್ 11 ರಂದು ನಡೆದ ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಪತ್ತೆ ಹಚ್ಚಿ ಬಂಧಿಸಲು ಸಾಧ್ಯವಿರುವ ಎಲ್ಲಾ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್ ನವೆಂಬರ್ 13 ರಂದು ಪೊಲೀಸರಿಗೆ ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ. ವಿಚಾರಣೆಯ ಮುಂದಿನ ದಿನಾಂಕದೊಳಗಾಗಿ ಆರೋಪಿಯನ್ನು ಪತ್ತೆ ಹಚ್ಚಲು ಕೈಗೊಂಡ ಕ್ರಮಗಳ ಕುರಿತ ವಿವರವನ್ನು ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸುವಂತೆ ನ್ಯಾಯಾಲಯ ತನಿಖಾ ಅಧಿಕಾರಿಗಳಿಗೆ ತಾಕೀತು ಮಾಡಿದೆ.

ಘಟನೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಅಥವಾ ಇನ್ನಾವುದೇ ಕೇಂದ್ರ ತನಿಖಾ ಸಂಸ್ಥೆಗೆ ವರ್ಗಾಯಿಸಬೇಕೆಂದು ಕೋರಿ ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಹಿಂದಿನ ವಿಚಾರಣೆ ವೇಳೆ, ಗಲಭೆಗೆ ಸಂಬಂಧಿಸಿದ ಎರಡು ವಿಷಯಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವರ್ಗಾಯಿಸಲಾಗಿತ್ತು.

ಆಗಸ್ಟ್ 11 ರಂದು ಪೂರ್ವ ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸ್ ಠಾಣೆ ಬಳಿ ಸುಮಾರು 300 ಜನರ ಗುಂಪೊಂದು ಜಮಾಯಿಸಿತ್ತು, ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಫೇಸ್‌ಬುಕ್‌ನಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಸೋದರಳಿಯ ಪಿ.ನವೀನ್ ಪೋಸ್ಟ್ ಮಾಡಿದ್ದರು. ಇದನ್ನು ಪ್ರತಿಭಟಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಮೂವರು ಸಾವನ್ನಪ್ಪಿ ಪೊಲೀಸರು ಪತ್ರಕರ್ತರು ಸೇರಿದಂತೆ ಅನೇಕರು ಗಾಯಗೊಂಡಿದ್ದರು. ಜನಸಮೂಹವನ್ನು ಪ್ರಚೋದಿಸಿದ್ದರು ಎಂಬ ಆರೋಪ ಕಾಂಗ್ರೆಸ್‌ ಕಾರ್ಪೊರೇಟರ್‌ ಆಗಿರುವ ಸಂಪತ್‌ರಾಜ್‌ ಅವರ ಮೇಲಿದೆ.

ಶುಕ್ರವಾರ ನಡೆದ ವಿಚಾರಣೆ ವೇಳೆ ಕ್ಲೇಮ್‌ ಕಮಿಷನರ್‌ ನ್ಯಾ ಎಚ್ ಎಸ್‌ ಕೆಂಪಣ್ಣ ಅವರಿಗೆ ನೀಡಿರುವ ಸವಲತ್ತುಗಳ ಬಗ್ಗೆ ಸರ್ಕಾರಿ ವಕೀಲರು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. ಅವರ ಓಡಾಟಕ್ಕೆ ಅನುಕೂಲವಾಗುವಂತೆ ವಾಹನ ಸೌಲಭ್ಯ ಮತ್ತು ಬೆರಳಚ್ಚುಗಾರರನ್ನು ಒದಗಿಸುವಂತೆ ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿತು. ಪ್ರಕರಣ ಮುಂದಿನ ವಿಚಾರಣೆ ನವೆಂಬರ್ 23ರಂದು ನಡೆಯಲಿದೆ.