Bangalore Riots 2020
Bangalore Riots 2020 
ಸುದ್ದಿಗಳು

ಬೆಂಗಳೂರು ಗಲಭೆ ಪ್ರಚೋದನೆ ಆರೋಪಿಗೆ ಜಾಮೀನು ನೀಡುವಾಗ ಹೈಕೋರ್ಟ್ ಹೇಳಿದ ಅಂಶಗಳೇನು?

Bar & Bench

“ಜಾಮೀನಿನ ಮೇಲೆ ಬಿಡುಗಡೆಯಾದರೆ ಅರ್ಜಿದಾರರ ಜೀವಕ್ಕೆ ಅಪಾಯವಿದೆ ಮತ್ತು ಅದು ಸಮಾಜದಲ್ಲಿ ಅಶಾಂತಿ ಉಂಟುಮಾಡಬಹುದು ಎಂಬ ವಿಶೇಷ ಸರ್ಕಾರಿ ಅಭಿಯೋಜಕರ ಆತಂಕವನ್ನು ಕೆಲವು ಕಠಿಣ ಷರತ್ತುಗಳನ್ನು ಹೇರುವ ಮೂಲಕ ನಿವಾರಿಸಬಹುದು ಎಂದು ಪರಿಗಣಿಸಿದ್ದೇನೆ” ಎಂದು ಬೆಂಗಳೂರು ಗಲಭೆ ಪ್ರಕರಣದ ಆರೋಪಿ, ಹಾಲಿ ಶಾಸಕರ ಸಂಬಂಧಿಗೆ ಹೈಕೋರ್ಟ್‌ ಗುರುವಾರ ಜಾಮೀನು ಮಂಜೂರು ಮಾಡಿತು (ನವೀನ್‌ ಪಿ ವರ್ಸಸ್‌ ಕರ್ನಾಟಕ ರಾಜ್ಯ).

ಫೇಸ್‌ಬುಕ್‌ನಲ್ಲಿ ಪ್ರವಾದಿ ಮೊಹಮ್ಮದ್‌ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಹಾಕಿದ ಆರೋಪದಲ್ಲಿ ಆಗಸ್ಟ್‌ನಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿ ನವೀನ್‌ಗೆ ಹೈಕೋರ್ಟ್‌ ನ್ಯಾಯಮೂರ್ತಿ ಬಿ ಎ ಪಾಟೀಲ್‌ ನೇತೃತ್ವದ ಏಕಸದಸ್ಯ ಪೀಠವು ಜಾಮೀನು ಮಂಜೂರು ಮಾಡಿತು. ಆರೋಪಿಗೆ ಜಾಮೀನು ನಿರಾಕರಿಸಬೇಕು ಎನ್ನುವ ಪ್ರಾಸಿಕ್ಯೂಷನ್‌ ವಾದವನ್ನು ತಳ್ಳಿ ಹಾಕಿದ ನ್ಯಾಯಾಲಯವು ಜೀವಕ್ಕೆ ಅಪಾಯವಿರುವ ಕಾರಣವನ್ನು ಮುಂದು ಮಾಡಿ ಅರ್ಜಿದಾರರ ಮೂಲಭೂತ ಹಕ್ಕನ್ನು ನಿರಾಕರಿಸಲಾಗದು ಎನ್ನುವ ಅಂಶವನ್ನು ಸ್ಪಷ್ಟಪಡಿಸಿತು.

“ಆರೋಪಿ ಜೀವಕ್ಕೆ ಅಪಾಯವಿದೆ ಎಂದು ಜಾಮೀನು ಅರ್ಜಿ ತಿರಸ್ಕರಿಸಿದರೆ ಪರೋಕ್ಷವಾಗಿ ಅರ್ಜಿದಾರರ ಮೂಲಭೂತ ಹಕ್ಕಿಗೆ ಧಕ್ಕೆಯಾಗುತ್ತದೆ. ಆರೋಪಿಯ ವಿರುದ್ಧದ ಏಕಮಾತ್ರ ಆರೋಪ ಆತ ಪ್ರವಾದಿ ಮೊಹಮ್ಮದ್‌ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಹಾಕಿದ್ದು. ಅವರು ಬಳಿಕ ಅದನ್ನು ಹಿಂಪಡೆದಿದ್ದಾರೆ. ಇಂಥ ಸಂದರ್ಭದಲ್ಲಿ ಕಠಿಣ ಷರತ್ತುಗಳನ್ನು ವಿಧಿಸಿ ಆರೋಪಿ ಅರ್ಜಿದಾರರಿಗೆ ಜಾಮೀನು ನೀಡಿ ಬಿಡುಗಡೆ ಮಾಡುವುದರಿಂದ ನ್ಯಾಯದಾನ ಪಾಲಿಸಿದಂತಾಗುತ್ತದೆ.”
ಕರ್ನಾಟಕ ಹೈಕೋರ್ಟ್‌

ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಫಾರ್ವರ್ಡ್‌ ಮಾಡಿದ್ದು, ಬಳಿಕ ಅದನ್ನು ಹಿಂಪಡೆಯಲಾಗಿದೆ. ರಾಜಕೀಯ ದುರುದ್ದೇಶದಿಂದ ತಪ್ಪಾಗಿ ದೂರು ದಾಖಲಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

ಇದಕ್ಕೆ ತಗಾದೆ ಎತ್ತಿದ್ದ ಪ್ರಾಸಿಕ್ಯೂಷನ್‌ ಪರ ವಕೀಲರು ಅರ್ಜಿದಾರರು ಹಂಚಿಕೊಂಡಿರುವ ಪೋಸ್ಟ್‌ ಉಲ್ಲೇಖಿಸಿದ ಪ್ರದೇಶದಲ್ಲಿ ಗಲಭೆ ಸೃಷ್ಟಿಸಿದೆ. ಇದರಿಂದ ಎರಡು ಪೊಲೀಸ್‌ ಠಾಣೆಗಳು ಮತ್ತು 57 ಪೊಲೀಸ್‌ ವಾಹನಗಳನ್ನು ಉದ್ರಿಕ್ತರ ಗುಂಪು ಸುಟ್ಟು ಹಾಕಿದೆ. ಅರ್ಜಿದಾರರಿಗೆ ಜಾಮೀನು ನೀಡುವುದರಿಂದ ಅವರ ಜೀವಕ್ಕೆ ಅಪಾಯವಿದೆ. ಅರ್ಜಿದಾರರಿಗೆ ತಪ್ಪೆಸಗುವುದು ಚಾಳಿಯಾಗಿದ್ದು, ಅವರ ವಿರುದ್ಧ ಏಳು ಪ್ರಕರಣಗಳು ದಾಖಲಾಗಿವೆ ಎಂದು ವಾದಿಸಿದ್ದರು.

ವಾದ, ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಆರೋಪಿಯ ವಿರುದ್ಧದ ಆರೋಪಕ್ಕೆ ಗರಿಷ್ಠ ಏಳು ವರ್ಷಗಳ ಶಿಕ್ಷೆ ವಿಧಿಸಬಹುದಾಗಿದ್ದು, ತನಿಖೆಯ ಬಳಿಕ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಜಾಮೀನಿನ ಮೇಲೆ ಆರೋಪಿ ಬಿಡುಗಡೆ ಮಾಡುವುದರಿಂದ ಅವರ ಜೀವಕ್ಕೆ ಅಪಾಯವಿದೆ ಎಂಬ ವಾದದಲ್ಲಿ ಹುರುಳಿಲ್ಲ ಎಂದಿತು.

2 ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಇಬ್ಬರ ಭದ್ರತೆ, ಪ್ರಾಸಿಕ್ಯೂಷನ್‌ ಸಾಕ್ಷಿ ತಿರುಚುವುದರಿಂದ ದೂರ ಇರುವುದು ಮತ್ತು ಪ್ರತಿ ತಿಂಗಳು ಸಮೀಪದ ಪೊಲೀಸ್‌ ಠಾಣೆಯಲ್ಲಿ ಹಾಜರಾತಿ ಹಾಕುವುದು ಮತ್ತು ನ್ಯಾಯಾಲಯದ ಅನುಮತಿ ಪಡೆಯದೇ ನ್ಯಾಯಾಲಯದ ವ್ಯಾಪ್ತಿಯ ಹೊರಗೆ ಹೋಗಬಾರದು ಎಂಬ ಷರತ್ತುಗಳನ್ನು ವಿಧಿಸಿ ಆರೋಪಿಗೆ ನ್ಯಾಯಾಲಯವು ಜಾಮೀನು ನೀಡಿದೆ.

ಪುಲಿಕೇಶಿ ನಗರದ ಶಾಸಕ ಆರ್‌ ಅಖಂಡ ಶ್ರೀನಿವಾಸ ಮೂರ್ತಿ ಅವರ ಸೋದರ ಸಂಬಂಧಿ ನವೀನ್‌ ಪಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 153A ಮತ್ತು 295A ರ ಅಡಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ 67 ರ ಅಡಿ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ್ದಕ್ಕೆ ದೂರು ದಾಖಲಿಸಲಾಗಿತ್ತು.