ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಬೆಂಗಳೂರಿನ ಮಾಜಿ ಮೇಯರ್ ಸಂಪತ್ ರಾಜ್ ಮತ್ತು ಮಾಜಿ ಕಾರ್ಪೊರೇಟರ್ ಅಬ್ದುಲ್ ರಕೀಬ್ ಜಾಕೀರ್ ಅವರಿಗೆ ಕರ್ನಾಟಕ ಹೈಕೋರ್ಟ್ ಫೆಬ್ರುವರಿ 12ರಂದು ನೀಡಿದ್ದ ಜಾಮೀನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ್ದು, ಪ್ರತಿಕ್ರಿಯೆ ಬಯಸಿದೆ.
ಬೆಂಗಳೂರಿನ ಪುಲಿಕೇಶಿ ನಗರದ ವಿಧಾನಸಭಾ ಸದಸ್ಯ ಆರ್ ಅಖಂಡ ಶ್ರೀನಿವಾಸಮೂರ್ತಿ ಅವರು ವಕೀಲ ಅಮಿತ್ ಪೈ ಮೂಲಕ ಸಲ್ಲಿಸಿದ್ದ ಮನವಿ ಆಧರಿಸಿ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ವಿಭಾಗೀಯ ಪೀಠವು ಸಂಪತ್ ರಾಜ್ ಮತ್ತು ಜಾಕೀರ್ ಅವರಿಗೆ ನೋಟಿಸ್ ನೀಡಿದ್ದು, ಮೂರು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಸೂಚಿಸಿದೆ.
ದೊಡ್ಡಮಟ್ಟದ ಕೋಮುಗಲಭೆಗೆ ಕಾರಣರಾದ, “ಕೋಟ್ಯಂತರ ರೂಪಾಯಿ ಸಾರ್ವಜನಿಕ ಆಸ್ತಿ ಮತ್ತು ಅರ್ಜಿದಾರರ ಮನೆಗೆ ಬೆಂಕಿ ಹಚ್ಚಿದ” ಪ್ರಧಾನ ಆರೋಪಿ ಮತ್ತು ಸಹ ಆರೋಪಿಗೆ ಜಾಮೀನು ನೀಡಲಾಗಿದೆ ಎಂದು ಮನವಿಯ ಜೊತೆಗಿನ ತುರ್ತು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ನೆರೆಯ ವಿಧಾನಸಭಾ ಕ್ಷೇತ್ರವಾದ ಸಿ ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದ ಸಂಪತ್‌ರಾಜ್ ರಾಜಕೀಯ ಕಾರಣಕ್ಕಾಗಿ ದುರುದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ. ತಮ್ಮ ಸಂಬಂಧಿಯ ಅವಹೇಳನಕಾರಿ ಪೋಸ್ಟ್ ಅನ್ನು ನೆಪವಾಗಿಟ್ಟುಕೊಂಡು ಆರೋಪಿಯು ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಯಾಗುವಂಥ ವಾತಾವರಣ ಸೃಷ್ಟಿಸಿದ್ದಾರೆ.
“ಪ್ರತಿವಾದಿ ಆರೋಪಿಯು ಉದ್ರಿಕ್ತ ಜನರ ಗುಂಪನ್ನು ಪ್ರಚೋದಿಸಿ ದಾಳಿಗೆ ಕುಮ್ಮಕ್ಕು ನೀಡಿದ್ದು, ಹಾನಿ ಮಾಡಿ, ದರೋಡೆ ಮಾಡಿಸುವುದರ ಜೊತೆಗೆ ಅರ್ಜಿದಾರರ ಮನೆಗೂ ಬೆಂಕಿ ಹಚ್ಚಿದ್ದಾರೆ. ಎರಡು ಪೊಲೀಸ್ ಠಾಣೆ ಸೇರಿದಂತೆ ದೊಡ್ಡಮಟ್ಟದಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಹಾಗೂ ಸಮಾಜದ ಹಿತದೃಷ್ಟಿಯಿಂದ ಗೌರವಾನ್ವಿತ ಹೈಕೋರ್ಟ್ ಆರೋಪಿಗೆ ಜಾಮೀನು ನೀಡಬಾರದಿತ್ತು,” ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಸಂಪತ್‌ರಾಜ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ), ಕರ್ನಾಟಕ ಆಸ್ತಿಗಳಿಗೆ ಹಾನಿ ಮತ್ತು ಹಲ್ಲೆ ನಿಯಂತ್ರಣ ಕಾಯಿದೆ-1981 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಕಾಯಿದೆ 1989ರ ವಿವಿಧ ಸೆಕ್ಷನ್‌ಗಳ ಅಡಿ ದೂರು ದಾಖಲಿಸಲಾಗಿದೆ.
ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಂಬಂಧಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪದ ಹಿನ್ನೆಲೆಯಲ್ಲಿ ಶ್ರೀನಿವಾಸಮೂರ್ತಿ ಮತ್ತು ಅವರ ಸಹೋದರಿ ಮನೆಗೆ ಸುಮಾರು 3,000 ರಿಂದ 4,000 ಜನರಿದ್ದ ಗುಂಪು ಕಳೆದ ಆಗಸ್ಟ್‌ನಲ್ಲಿ ಬೆಂಕಿ ಹಚ್ಚಿತ್ತು.
ಸಂಪತ್ ರಾಜ್ ಅವರ ವಿರುದ್ಧ ಗಂಭೀರ ಆರೋಪಗಳಿದ್ದು, ಅವರಿಗೆ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆ ಇದೆ. ಸಮನ್ಸ್ ನೀಡಿದಾಗ ಆರೋಪಿಯು ತನಿಖಾಧಿಕಾರಿಗಳ ಮುಂದೆ ಹಾಜರಾಗಿರಲಿಲ್ಲ. ಕಳೆದ ನವೆಂಬರ್‌ನಲ್ಲಿ ಹೈಕೋರ್ಟ್ ಸಂಪತ್ ರಾಜ್ ಪತ್ತೆ ಹಚ್ಚಿ ಬಂಧಿಸುವಂತೆ ತನಿಖಾಧಿಕಾರಿಗಳಿಗೆ ಆದೇಶಿಸುವವರೆಗೆ ಆತ ತಲೆ ಮರೆಸಿಕೊಂಡಿದ್ದರು ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಹಿರಿಯ ವಕೀಲರಾದ ದೇವದತ್ತ ಕಾಮತ್ ಮತ್ತು ಆರ್ ಬಸಂತ್ ಹಾಗೂ ವಕೀಲ ರಾಜೇಶ್ ಇನಾಂದಾರ್ ಅವರು ಅರ್ಜಿದಾರರನ್ನು ಪ್ರತಿನಿಧಿಸಿದ್ದರು.