Karnataka High Court 
ಸುದ್ದಿಗಳು

ಬ್ಯಾಂಕಿಂಗ್‌ ನಿಯಂತ್ರಣ ಕಾಯಿದೆಯ ಸಿಂಧುತ್ವ ಪ್ರಶ್ನೆ: ಆರ್‌ಬಿಐ, ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌ ಜಾರಿ

ಸಹಕಾರಿ ಬ್ಯಾಂಕ್‌ಗಳು ಪ್ರಮುಖವಾಗಿ ಸಹಕಾರಿ ಸೊಸೈಟಿಗಳಾಗಿದ್ದು, ಕರ್ನಾಟಕ ಸಹಕಾರ ಸೊಸೈಟಿ ಕಾಯಿದೆ ಅಡಿ ಕಾರ್ಯನಿರ್ವಹಿಸುತ್ತವೆ ಎಂದಿರುವ ಅರ್ಜಿದಾರರು.

Bar & Bench

ಬ್ಯಾಂಕಿಂಗ್‌ ನಿಯಂತ್ರಣ (ತಿದ್ದುಪಡಿ) ಕಾಯಿದೆ 2020ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಮನವಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ನೋಟಿಸ್‌ ಜಾರಿ ಮಾಡಿದೆ.

ಕರ್ನಾಟಕ ರಾಜ್ಯ ಅಪೆಕ್ಸ್‌ ಸಹಕಾರಿ ಬ್ಯಾಂಕ್‌ ಲಿಮಿಟೆಡ್‌ ಅಧ್ಯಕ್ಷರು, ನಿರ್ದೇಶಕರು ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಅಶೋಕ್‌ ಹಾರನಹಳ್ಳಿ ಮತ್ತು ರಾಘವೇಂದ್ರ ಶ್ರೀವಾಸ್ತವ ಅವರು “ಸಹಕಾರಿ ಬ್ಯಾಂಕ್‌ಗಳು ಪ್ರಮುಖವಾಗಿ ಸಹಕಾರಿ ಸೊಸೈಟಿಗಳಾಗಿದ್ದು, ಕರ್ನಾಟಕ ಸಹಕಾರ ಸೊಸೈಟಿ ಕಾಯಿದೆ ಅಡಿ ಕಾರ್ಯನಿರ್ವಹಿಸುತ್ತವೆ. ಸಂವಿಧಾನದ ಏಳನೇ ಷೆಡ್ಯೂಲ್‌ನ ಎರಡನೇ ಪಟ್ಟಿಯ ಎಂಟ್ರಿ 32ರ ಅಡಿ ವಿಶೇಷ ಶಾಸನ ವಲಯಕ್ಕೆ ಸೇರಿವೆ” ಎಂದು ವಾದಿಸಿದರು.

ಬ್ಯಾಂಕಿಂಗ್‌ ನಿಯಂತ್ರಣ (ತಿದ್ದುಪಡಿ) ಕಾಯಿದೆ 2020ರ ಸೆಕ್ಷನ್‌ಗಳಾದ 4(ಎ), 4(ಎಫ್‌), 4(ಜಿ), 4(ಎಚ್‌), 4(ಜೆ), 4(ಎಲ್‌), 4(ಎಂ) ಮತ್ತು 4(ಕ್ಯು) ಅನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು. ಮೇಲೆ ಹೇಳಲಾದ ಸೆಕ್ಷನ್‌ಗಳನ್ನು ಜಾರಿಗೊಳಿಸದಂತೆ ಪ್ರತಿವಾದಿಗಳಿಗೆ ಆದೇಶಿಸಬೇಕು ಎಂದು ಕೋರಲಾಗಿದೆ.

ಕರ್ನಾಟಕ ರಾಜ್ಯ ಅಪೆಕ್ಸ್‌ ಸಹಕಾರಿ ಬ್ಯಾಂಕ್‌ ಲಿಮಿಟೆಡ್‌ಗಳ ಮಂಡಳಿ ರಚನೆ ಮತ್ತು ಷೇರು ಹೊಂದುವ ವಿಚಾರದಲ್ಲಿ ಪ್ರತಿವಾದಿಗಳು ಮಧ್ಯಪ್ರವೇಶ ಮಾಡದಂತೆ ಆದೇಶ ಮಾಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.