Subramanian Swamya and RBI
Subramanian Swamya and RBI 
ಸುದ್ದಿಗಳು

ಬ್ಯಾಂಕ್‌ ಹಗರಣಗಳು ಭಾರತದ ಬ್ಯಾಂಕಿಂಗ್‌ ವ್ಯವಸ್ಥೆಯ ನಂಬಿಕೆ ಕುಸಿಯುವಂತೆ ಮಾಡಿವೆ: ಸುಪ್ರೀಂ ಮೆಟ್ಟಿಲೇರಿದ ಸ್ವಾಮಿ

Bar & Bench

ಭಾರತೀಯ ರಿಸರ್ವ್‌ ಬ್ಯಾಂಕ್‌ ಅಧಿಕಾರಿಗಳ ಕಾನೂನುಬಾಹಿರ ಕ್ರಮಗಳಿಂದಾಗಿ ಹಲವು ಬ್ಯಾಂಕಿಂಗ್/ಆರ್ಥಿಕ ಹಗರಣಗಳು ಭಾರತದಲ್ಲಿ ಸಂಭವಿಸಿದ್ದು, ಅಧಿಕಾರಿಗಳ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆಯಿಂದ (ಸಿಬಿಐ) ತನಿಖೆ ನಡೆಸಲು ಅನುಮತಿಸುವಂತೆ ಕೋರಿ ಬಿಜೆಪಿ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಭಾರತದ ಆರ್ಥಿಕತೆಗೆ ಹಗರಣಗಳು ಸಮಸ್ಯೆ ಉಂಟು ಮಾಡಿವೆ. ಇದರಲ್ಲಿ ಆರ್‌ಬಿಐ ಅಧಿಕಾರಿಗಳು ಸಕ್ರಿಯವಾಗಿ ಕೈಜೋಡಿಸಿದ್ದು, ತಮ್ಮ ಶಾಸನಬದ್ಧ ಕರ್ತವ್ಯಗಳಿಗೆ ಲೋಪ ಎಸಗಿದ್ದಾರೆ. ಇದರಿಂದ ಹಗರಣಗಳನ್ನು ತಡೆಯಲಾಗಿಲ್ಲ ಎಂದು ಸ್ವಾಮಿ ಹಾಗೂ ವಕೀಲ ಸತ್ಯ ಸಬರ್‌ವಾಲ್‌ ಆರೋಪಿಸಿದ್ದಾರೆ.

“ಕಳೆದ ಕೆಲವು ವರ್ಷಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಒಂದರ ಹಿಂದೊಂದರಂತೆ ಹಗರಣಗಳು ವರದಿಯಾಗಿದ್ದು, ಇದರಲ್ಲಿ ಬ್ಯಾಂಕ್‌ ಅಧಿಕಾರಿಗಳ ಪಾತ್ರ ಸ್ಪಷ್ಟವಾಗಿದೆ. ವಿಪರ್ಯಾಸವೆಂದರೆ, ಆರ್‌ಬಿಐ ಬಳಿ ನಿಗಾ, ನಿಯಂತ್ರಣ, ಮೇಲ್ವಿಚಾರಣೆ, ಆಡಿಟ್‌ ಮತ್ತು ಭಾರತದಲ್ಲಿನ ಎಲ್ಲಾ ಬ್ಯಾಂಕಿಂಗ್‌ ಕಂಪೆನಿಗಳ ಕಾರ್ಯಾಚರಣೆಗೆ ನಿರ್ದೇಶನ ನೀಡುವ ಅಧಿಕಾರ ಇದ್ದರೂ ಒಬ್ಬೇ ಒಬ್ಬ ಅಧಿಕಾರಿಯನ್ನೂ ಈವರೆಗೆ ಶಿಕ್ಷೆಗೆ ಗುರಿ ಮಾಡಲಾಗಿಲ್ಲ” ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಠೇವಣಿದಾರರು, ಹೂಡಿಕೆಗಾರರು ಮತ್ತು ಷೇರುದಾರರ ಹಿತಾಸಕ್ತಿ ಕಾಯಲು ಆರ್‌ಬಿಐ ವಿಫಲವಾಗಿದ್ದು, ಇದು ಭಾರತೀಯ ಬ್ಯಾಂಕಿಂಗ್‌ ವ್ಯವಸ್ಥೆಯ ಮೇಲೆ ಅಪನಂಬಿಕೆಗೆ ಕಾರಣವಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

“ಷೇರುದಾರರ ಹಿತಾಸಕ್ತಿ ಕಾಯಲು ವಿಫಲವಾದ ಹಿನ್ನೆಲೆಯಲ್ಲಿ ಭಾರತದ ಇಡೀ ಬ್ಯಾಂಕಿಂಗ್‌ ವ್ಯವಸ್ಥೆಯ ಮೇಲೆ ಅಪನಂಬಿಕೆ ಸೃಷ್ಟಿಯಾಗಿದೆ. ನಿಯಂತ್ರಣಾ ಸಂಸ್ಥೆಯು ಬ್ಯಾಂಕ್‌ ವಂಚನೆಗಳ ಬಗ್ಗೆ ಕ್ರಮಕೈಗೊಳ್ಳದೇ ಇರುವುದು ಪ್ರಶ್ನೆಗಳು ಏಳಲು ಕಾರಣವಾಗಿದೆ” ಎಂದು ಹೇಳಲಾಗಿದೆ.

ಬ್ಯಾಂಕಿಂಗ್‌ ನಿಯಂತ್ರಣ ಕಾಯಿದೆಯು ಬ್ಯಾಂಕ್‌ಗಳ ನಿರ್ವಹಣೆಗೆ ಆರ್‌ಬಿಐಯನ್ನು ಹೊಣೆಯನ್ನಾಗಿಸುತ್ತದೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಈ ಜವಾಬ್ದಾರಿ ಇನ್ನೂ ಹೆಚ್ಚೇ ಇರುತ್ತದೆ. ಇಷ್ಟಾಗಿಯೂ ಹಲವು ಮಹತ್ವದ ಬ್ಯಾಂಕಿಂಗ್‌ ಹಗರಣಗಳಲ್ಲಿ ಆರ್‌ಬಿಐ ಅಧಿಕಾರಿಗಳ ಪಾತ್ರದ ಕುರಿತು ತನಿಖೆ ಮಾಡಲು ಸಿಬಿಐ ಕೋರಿಲ್ಲ ಎಂದು ಹೇಳಲಾಗಿದೆ.

“ಈವರೆಗೆ ಬ್ಯಾಂಕ್‌ಗಳಲ್ಲಿನ ವಂಚನೆಗೆ ಸಂಬಂಧಿಸಿದಂತೆ ಕರ್ತವ್ಯಲೋಪಕ್ಕೆ ಯಾವುದೇ ಅಧಿಕಾರಿಯನ್ನು ಹೊಣೆಯಾಗಿಸಲಾಗಿಲ್ಲ ಎನ್ನುವುದು ಮಾಹಿತಿ ಹಕ್ಕು ಕಾಯಿದೆ - 2005ರ ಅಡಿ ಅರ್ಜಿದಾರರು ಮಾಹಿತಿ ಪಡೆದುಕೊಂಡಿರುವುದರಿಂದ ತಿಳಿದು ಬಂದಿದೆ. ಇದು ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ರೂ. 3 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತದ ವಂಚನೆಗಳು ಸಂಭವಿಸಿರುವುದಕ್ಕೆ ತದ್ವಿರುದ್ಧವಾಗಿದೆ” ಎಂದು ಹೇಳಲಾಗಿದೆ.

ಮನವಿಯಲ್ಲಿ ಕಿಂಗ್‌ಫಿಷರ್‌, ಮಹಾರಾಷ್ಟ್ರ ಬ್ಯಾಂಕ್‌, ಉತ್ತರ ಪ್ರದೇಶ ಮೂಲದ ಖಾಸಗಿ ಸಕ್ಕರೆ ಸಂಸ್ಥೆ, ನೀರವ್‌ ಮೋದಿ/ಪಂಜಾಬ್‌ ನ್ಯಾಷನ್‌ ಬ್ಯಾಂಕ್‌, ರೋಟೊಮ್ಯಾಕ್‌ ಗ್ಲೋಬಲ್‌ ಪ್ರೈವೇಟ್‌ ಲಿಮಿಟೆಡ್‌, ಲಕ್ಷ್ಮಿ ವಿಲಾಸ್‌ ಬ್ಯಾಂಕ್‌, ಐಎಲ್‌&ಎಫ್‌ಎಸ್‌, ಪಿಎಂಸಿ ಬ್ಯಾಂಕ್‌, ಯೆಸ್‌ ಬ್ಯಾಂಕ್‌ ಲಿಮಿಟೆಡ್‌, ಫಸ್ಟ್‌ ಲೀಸಿಂಗ್‌ ಕಂಪೆನಿ ಇಂಡಿಯಾ ಲಿಮಿಟೆಡ್‌ ಹಗರಣಗಳನ್ನು ಉಲ್ಲೇಖಿಸಲಾಗಿದ್ದು, ಮೇಲಿನ ಹಗರಣಗಳಲ್ಲಿ ಆರ್‌ಬಿಐ ಅಧಿಕಾರಿಗಳ ಪಾತ್ರದ ಕುರಿತು ನ್ಯಾಯಾಲಯದ ನಿಗಾದಲ್ಲಿ ತನಿಖೆ ನಡೆಸುವಂತೆ ಮನವಿದಾರರು ಕೋರಿದ್ದಾರೆ.