ಬಂಟ್ವಾಳದ ಬಸ್ ನಿಲ್ದಾಣದಲ್ಲಿ ನಡೆದ ಯುವತಿ ಹತ್ಯೆ ವಿಚಾರವಾಗಿ ನ್ಯೂಸ್ ಫೋರ್ಟ್‌ಲ್‌ವೊಂದರಲ್ಲಿ ಪ್ರಕಟವಾದ ವ್ಯಂಗ್ಯ ಚಿತ್ರವನ್ನು ಟೀಕಿಸಿದ ವ್ಯಕ್ತಿ ವಿರುದ್ಧ ಎಫ್ಐಆರ್ ದಾಖಲಿಸಿದ ಪೊಲೀಸರ ಕ್ರಮಕ್ಕೆ ಕಿಡಿಕಾರಿರುವ ಕರ್ನಾಟಕ ಹೈಕೋರ್ಟ್, ಸರ್ಕಾರ ಕೊಲೆಗಾರರನ್ನು ಹಿಡಿಯದೆ, ಅವರ ಬಗ್ಗೆ ಬರೆದವರ ಮೇಲೆ ಪ್ರಕರಣ ದಾಖಲಿಸುವುದೇ ಆಯ್ತು ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ತಮ್ಮ ವಿರುದ್ಧ ಪಣಂಬೂರು ಠಾಣಾ ಪೊಲೀಸರು ದಾಖಲಿಸಿದ ಎಫ್ಐಆರ್ ರದ್ದು ಕೋರಿ ಮಂಗಳೂರಿನ ಕದ್ರಿ ನಿವಾಸಿ ಪ್ರದೀಪ ಸರಿಪಳ್ಳ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಬುಧವಾರ ವಿಚಾರಣೆ ನಡೆಸಿತು.
ಅರ್ಜಿದಾರರ ವಿರುದ್ಧದ ಎಫ್ಐಆರ್ಗೆ ತಡೆ ನೀಡಿದ ಪೀಠವು ಪಣಂಬೂರು ಠಾಣಾ ಪೊಲೀಸರು ಹಾಗೂ ಪ್ರಕರಣದ ದೂರುದಾರನಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ, ಅರ್ಜಿದಾರ ಪರ ವಕೀಲ ಗಿರೀಶ್ ಭಾರದ್ವಾಜ್ ಅವರು “ಬಂಟ್ವಾಳ ಬಸ್ ನಿಲ್ದಾಣದಲ್ಲಿ ನಡೆದ ಯುವತಿ ಕೊಲೆಪ್ರಕರಣ ಸಂಬಂಧ ನ್ಯೂಸ್ ಪೋರ್ಟಲ್ ವೊಂದು ಪ್ರಕಟಿಸಿದ್ದ ವ್ಯಂಗ್ಯಚಿತ್ರವನ್ನು ಟೀಕೆ ಮಾಡಿ ಫೇಸ್ಬುಕ್‌ಗೆ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 353(2) ಎಫ್ಐಆರ್ ದಾಖಲಿಸಲಾಗಿದೆ. ಆದರೆ, ನ್ಯೂಸ್ ಪೋರ್ಟಲ್ ಅನ್ನು ಕೈಬಿಡಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಪೀಠವು “ನೀವು ಯಾರು” ಎಂದು ಕೇಳಿತು.
ಅದಕ್ಕೆ ಗಿರೀಶ್ ಅವರು “ಅರ್ಜಿದಾರರು ಸಾರ್ವಜನಿಕರಾಗಿದ್ದಾರೆ” ಎಂದು ಉತ್ತರಿಸಿದರು.
ಆಗ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ಪೀಠವು ಅರ್ಜಿದಾರರ ಮೇಲೆ ಕೇಸ್ ದಾಖಲಿಸಿ, ನ್ಯೂಸ್ ಪೋರ್ಟಲ್ ಅನ್ನು ಕೈ ಬಿಡಲಾಗಿದೆಯೇ? ನೀವೇನು (ಸರ್ಕಾರ / ಪೊಲೀಸರು) ಕೊಲೆಗಾರರನ್ನು ಹಿಡಿಯದೇ ಅವರ ಬಗ್ಗೆ ಬರೆದವರ ಹಾಗೂ ನ್ಯೂಸ್ ಮಾಡಿದವರ ಮೇಲೆ ಪ್ರಕರಣ ದಾಖಲಿಸುವುದೇ ಆಯ್ತು ಎಂದು ಕಿಡಿಕಾರಿತಲ್ಲದೆ, ಅರ್ಜಿದಾರರ ವಿರುದ್ಧದ ಎಫ್ಐಆರ್ಗೆ ತಡೆ ನೀಡಿ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ದೂರುದಾರ ಮೊಹಮ್ಮದ್ ಮುನೀಮ್ ಜುಲೈ 19ರಂದು ಪಣಂಬೂರು ಠಾಣೆಗೆ ದೂರು ನೀಡಿ, ತಮ್ಮ ಫೇಸ್ಟುಕ್ ಖಾತೆ ವೀಕ್ಷಿಸುತ್ತಿದ್ದಾಗ "ಪ್ರದೀಪ ಸರಿಪಳ್ಳ" ಎಂಬ ಖಾತೆಯಲ್ಲಿ ಪತ್ರಿಕೆಯೊಂದರಲ್ಲಿ ಪ್ರಕಟವಾದ ವ್ಯಂಗ್ಯಚಿತ್ರದೊಂದಿಗೆ 'ಹುಬ್ಬಳ್ಳಿಯಲ್ಲಿ ಹತ್ಯೆಯಾದ ನೇಹಾಳನ್ನು ಕೊಂದವನ ಮತ ಯಾವುದು? ಕೇರಳದ ಸವರಿಯಾ ವಸಂತಳನ್ನು ಕೊಂದವನ ಮತ ಯಾವುದು? ಮುಂಬೈನಲ್ಲಿ ಶ್ರದ್ಧಾಳನ್ನು ಭೀಕರವಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಟ್ಟವನ ಮತ ಯಾವುದು?" ಎಂಬ ಬರಹವಿರುವ ಪೋಸ್ಟ್ ಪ್ರಕಟಿಸಲಾಗಿದೆ. ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು, ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ದ್ವೇಷ, ವೈಮನಸ್ಸು ಹಾಗೂ ಕೋಮು ಉದ್ವಿಗ್ನತೆ ಉಂಟುಮಾಡಿ ಸಾರ್ವಜನಿಕ ಶಾಂತಿ ಭಂಗಗೊಳಿಸುವ ಉದ್ದೇಶದಿಂದ ಈ ಪೋಸ್ಟ್ ಪ್ರಕಟಿಸಲಾಗಿದೆ ಎಂದು ದೂರಲಾಗಿತ್ತು. ಇದನ್ನು ಆಧರಿಸಿ ಪೊಲೀಸರು, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 353(2) ಅಡಿಯಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಸಾರ್ವಜನಿಕವಾಗಿ ಆತಂಕ, ಭಯ ಅಥವಾ ದ್ವೇಷವನ್ನು ಹರಡುವ ಸುಳ್ಳು ಮಾಹಿತಿ, ವದಂತಿಗಳು ಅಥವಾ ಹೇಳಿಕೆ ನೀಡಿದ, ಧರ್ಮ, ಜಾತಿ, ಭಾಷೆ ಅಥವಾ ಸಮುದಾಯಗಳ ನಡುವೆ ಉದ್ವಿಗ್ನತೆ ಉಂಟುಮಾಡಿದ ಅಪರಾಧದ ಸಂಬಂಧ ಎಫ್ಐಆರ್ ದಾಖಲಿಸಿದ್ದರು.