Bar & Bench now in Kannada 
ಸುದ್ದಿಗಳು

ಹನ್ನೊಂದು ವರ್ಷಗಳ ವಿಶಿಷ್ಟ ಪಯಣಕ್ಕೀಗ ಹೊಸ ತಿರುವು, ಹೊಸ ಉತ್ಸಾಹ

11 ವರ್ಷಗಳ ಹಿಂದೆ ಬಾರ್ ಅಂಡ್‌ ಬೆಂಚ್ ರೂಪದಲ್ಲಿ ವಿನೂತನ ಕಲ್ಪನೆಯೊಂದು ಆನ್ ಲೈನ್ ಲೋಕ ಪ್ರವೇಶಿಸಿತು! ಸ್ವಾತಂತ್ರ್ಯೋತ್ಸವ ದಿನವಾದ ಇಂದು ಕನ್ನಡ ಮತ್ತು ಹಿಂದಿ ಅವತರಣಿಕೆಯಲ್ಲಿ ಬಾರ್ ಅಂಡ್ ಬೆಂಚ್ ನಿಮ್ಮ ಮುಂದಿದೆ.

Bar & Bench

11 ವರ್ಷಗಳ ಹಿಂದೆ ಬಾರ್ ಅಂಡ್‌ ಬೆಂಚ್ ರೂಪದಲ್ಲಿ ವಿನೂತನ ಕಲ್ಪನೆಯೊಂದು ಆನ್ ಲೈನ್ ಲೋಕ ಪ್ರವೇಶಿಸಿತು!

ಅಭಿಷೇಕ್, ಬಿಪುಲ್ ಮತ್ತು ನಾನು ಸೇರಿದಂತೆ ಮೂವರು ಸ್ನೇಹಿತರ ನಡುವಿನ ಸಂಭಾಷಣೆ ಸಂದರ್ಭದಲ್ಲಿ ಬಾರ್ ಅಂಡ್ ಬೆಂಚ್ ಉದಯಿಸಿತ್ತು. ನಾವು ಮೂರು ಮಂದಿಯೂ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕಲಿಯುತ್ತಿದ್ದಾಗಿನಿಂದಲೂ ಆಪ್ತ ಸ್ನೇಹಿತರು.

ವಕೀಲರ ಸಮುದಾಯಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಲು, ನೋಡಲು ಹಾಗೂ ಅದನ್ನು ಹಂಚಿಕೊಳ್ಳುವ ಉದ್ದೇಶದಿಂದ ನಾವು ಆರಂಭದಲ್ಲಿ ವೆಬ್ ಸೈಟ್ ಅನ್ನು ಪ್ರಾರಂಭಿಸಿದೆವು. ಕಾಲಕ್ರಮೇಣ ನಮಗೆ ಸಾಮಾಜಿಕ ಮಾಧ್ಯಮದ ಅಗಾಧತೆ ಅರ್ಥವಾಗುವುದರೊಂದಿಗೆ ನ್ಯಾಯಾಲಯಗಳಲ್ಲಿ ನಡೆಯುವ ಕಲಾಪದ ನೇರ ಮಾಹಿತಿ ಪಡೆಯಲು ಸಾರ್ವಜನಿಕ ವಲಯದಲ್ಲಿರುವ ದಾಹದ ಬಗ್ಗೆ ನಿಧಾನವಾಗಿ ನಮಗೆ ಅರ್ಥವಾಗಲಾರಂಭಿಸಿತ್ತು. ನ್ಯಾಯಾಲಯದ ಸುದ್ದಿಗಳು ಒಂದು ದಿನ ದಿನಪತ್ರಿಕೆಗಳ ಮುಖಪುಟವನ್ನು ಬಹುತೇಕ ಆವರಿಸಲಿವೆ ಎಂದು ನನಗನ್ನಿಸಿತ್ತು. ಈಗ ಆ ನಂಬಿಕೆ ವಾಸ್ತವವಾಗಿದೆ.

2011ರಲ್ಲಿ ಪಲ್ಲವಿ ಸಲೂಜ ನಮ್ಮ ಜೊತೆಗೂಡಿದರು. ಇದು ಬಾರ್ ಅಂಡ್ ಬೆಂಚ್ ನೈಜರೂಪದಲ್ಲಿ ಮಾಧ್ಯಮ ಸಂಸ್ಥೆಯಾಗಿ ಪರಿವರ್ತನೆಯಾಗುವಲ್ಲಿ ಮಹತ್ತರ ಸಂಗತಿಯಾಯಿತು. ವಾಸ್ತವಿಕ ಸಂಗತಿ, ಬ್ರೇಕಿಂಗ್ ನ್ಯೂಸ್ ಮತ್ತು ನಿಖರತೆಗೆ ಪಲ್ಲವಿ ಅವರು ನೀಡುತ್ತಿದ್ದ ಪ್ರಾಮುಖ್ಯತೆಯು ನಮ್ಮ ಸಂಸ್ಥೆಯ ಧ್ಯೇಯವನ್ನು ರೂಪಿಸುವಲ್ಲಿ ನೆರವಾಗಿದೆ. ನ್ಯಾಯಾಲಯದ ಕಲಾಪಗಳನ್ನು ನೇರವಾಗಿ ಟ್ವೀಟ್ ಮಾಡಿದ ಮೊದಲಿಗರಲ್ಲಿ ನಾವು ಸೇರುತ್ತೇವೆ. ಕೋರ್ಟ್ ನಿಂದ ನೇರವಾಗಿ ಮಾಹಿತಿ ಒದಗಿಸುವ ಮಹತ್ವದ ಬೆಳವಣಿಗೆಗೆ ಶ್ರೀಕಾರ ಹಾಕಿದವರು ಮುರುಳಿ ಕೃಷ್ಣನ್. ಒಂದು ಚಿಕ್ಕ ಸ್ಟಾರ್ಟ್ ಅಪ್ ಆದ ಬಾರ್ ಅಂಡ್ ಬೆಂಚ್ ಅನ್ನು ನೈಜ ಮಾಧ್ಯಮ ಸಂಸ್ಥೆಯಾಗಿ ರೂಪುಗೊಳ್ಳುವ ದಾರಿಯನ್ನು ಕ್ರಮಿಸುವಲ್ಲಿ ಅನುಜ್ ಅಗರವಾಲ್ ಅವರ ಕೊಡುಗೆ ಅವಿಸ್ಮರಣೀಯ. ಅದೇ ರೀತಿ, ನಮ್ಮ ಸಂಸ್ಥೆಯ ಅಂತರ್ಮುಖಿಯಾದ ಆದಿತ್ಯ ಅವರು ಕಸದಲ್ಲಿ ರಸವನ್ನು ಶೋಧಿಸುವ ರೀತಿಯಲ್ಲಿ ಸುದ್ದಿಗಳನ್ನು ಹೆಕ್ಕಿದರು.

ದೆಹಲಿ ಮತ್ತು ಬೆಂಗಳೂರಿನಲ್ಲಿ ಕಚೇರಿ ಆರಂಭವಾಗುತ್ತಿದ್ದಂತೆ ಹಲವರು ನಮ್ಮ ಜೊತೆಯಾದರು. ಮೀರಾ, ಶ್ರುತಿ, ಅದಿತಿ, ರಿಂಟು, ಐಶ್ವರ್ಯಾ, ದೇಬಯಾನ್, ಲಿಡಿಯಾ ಮತ್ತು ಮೊಹ್ಸಿನ್ ಅವರು ನಮ್ಮನ್ನು ಮತ್ತಷ್ಟು ಆವಿಷ್ಕಾರಕವಾಗಿ ಯೋಚಿಸುವಂತೆ ಮಾಡಿದರು.

ರವಿ, ಚಂದೀಪ್ ಮತ್ತು ಪುನೀತ್ ನಮ್ಮ ಬೆನ್ನೆಲುಬಾಗಿದ್ದಾರೆ. ಇಂದು ನಟರಾಜು, ಸಿದ್ದೇಶ್, ಅನೂಪ್ ಮತ್ತು ಕಪಿಲ್ ನಮ್ಮ ತಂಡ ಸೇರಿದ್ದಾರೆ. ಈ ಹಾದಿಯಲ್ಲಿ ಹಲವರು ನಮ್ಮ ಜೊತೆ ಸೇರಿದ್ದು, ಮತ್ತೆ ಕೆಲವರು ಇನ್ನೂ ಉತ್ಕೃಷ್ಟ ಆಯ್ಕೆಗಳನ್ನು ಕಂಡುಕೊಂಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಎಲ್ಲರೂ ನಮ್ಮನ್ನು ಸದೃಢಗೊಳಿಸಿದ್ದಾರೆ. ನನ್ನ ಮಿತ್ರ ನೀಲ್ ಮೈತ್ರಾ ನಾನು ಕೇಳಿದಾಗಲೆಲ್ಲಾ ನಿರ್ಣಾಯಕವಾದ ಒಳನೋಟ ಹಾಗೂ ಸಮಯವನ್ನು ನೀಡಿದ್ದಾರೆ.

ನಮ್ಮದು ಮಹಿಳಾ ನೇತೃತ್ವದ ಹಾಗೂ ಅವರೇ ಹೆಚ್ಚಿನ ಸಂಖ್ಯೆಯಲ್ಲಿರುವ ತಂಡ. ನಮ್ಮ ವಿಶ್ವಾಸ ದುಪ್ಪಟ್ಟಾಗಲು ಇದೂ ಒಂದು ಕಾರಣ.

ಈ ವಿಶ್ವಾಸದ ಹಿನ್ನೆಲೆಯಲ್ಲಿ ನಾವು ಮತ್ತೊಂದು ಹೆಜ್ಜೆ ಮುಂದಿಡುತ್ತಿದ್ದೇವೆ!

ನಮ್ಮ ಹೃದಯ ನಮ್ಮ ಹಳ್ಳಿಗಳಲ್ಲಿದೆ ಎಂದು ನ್ಯಾಯಶಾಸ್ತ್ರಜ್ಞ ಎಚ್ ಎಲ್ ಎ ಹಾರ್ಟ್ ಅವರನ್ನು ಉಲ್ಲೇಖಿಸಿ ನನ್ನ ಸ್ನೇಹಿತ ಶಮ್ನಾದ್‌ ಆಗಾಗ ಹೇಳುತ್ತಿದ್ದರು. ನಮ್ಮ ಹಾರ್ಟ್‌ ನಂಥವರು ನಮ್ಮ ಹಳ್ಳಿಗಳಿಂದ ಸುಪ್ರೀಂಕೋರ್ಟ್ ವರೆಗೆ ಹಾದಿ ಕಂಡುಕೊಳ್ಳಬೇಕೆಂದರೆ ನಮ್ಮ ಸುದ್ದಿಗಳೂ ಆ ಹಳ್ಳಿಗಳಲ್ಲಿ ದೊರೆಯುವಂತಾಗಬೇಕು.

ಸ್ವಾತಂತ್ರ್ಯೋತ್ಸವದ ದಿನವಾದ ಇಂದು ಬಾರ್ ಅಂಡ್ ಬೆಂಚ್ ಕನ್ನಡ ಮತ್ತು ಹಿಂದಿ ಅವತರಣಿಕೆಯಲ್ಲಿ ನಿಮ್ಮ ಮುಂದಿದೆ. ಒಂದೇ ಒಂದು ಭಾಷೆಯಲ್ಲಿ ಬಂಧಿಯಾಗಿದ್ದ ಬಾರ್ ಅಂಡ್ ಬೆಂಚ್ ಸ್ವಾತಂತ್ರ್ಯ ಹಾಗೂ ವೈವಿಧ್ಯತೆಯೆಡೆಗೆ ಚಲಿಸುತ್ತಿರುವುದು ಈ ದಿನವನ್ನು ಮತ್ತಷ್ಟು ವಿಶೇಷವಾಗಿಸಿದೆ.

ನಮಗೆ ಶುಭಕೋರಿ, ನಾವು ತಪ್ಪೆಸಗಿದ್ದಲ್ಲಿ ಗಮನಕ್ಕೆ ತನ್ನಿ, ನಮ್ಮನ್ನು ಹೆಚ್ಚೆಚ್ಚು ಉತ್ತಮಗೊಳಿಸಿ!

ಧನ್ಯವಾದಗಳು

ಶಿಶಿರ

ಸಹ ಸಂಸ್ಥಾಪಕರು