Karnataka High Court
Karnataka High Court 
ಸುದ್ದಿಗಳು

ಬಾರ್ ಮತ್ತು ರೆಸ್ಟೋರೆಂಟ್ ಸ್ಥಳಾಂತರ: ಅಬಕಾರಿ ಉಪ ಆಯುಕ್ತರ ಆದೇಶ ರದ್ದುಪಡಿಸಿದ ಹೈಕೋರ್ಟ್‌

Bar & Bench

ಬೆಂಗಳೂರಿನ ಕಮ್ಮನಹಳ್ಳಿಯಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್ ಒಂದನ್ನು ಕೋರಮಂಗಲದ ಕೆ ಸಿ ಮಲ್ಲಪ್ಪ ರೆಡ್ಡಿ ಬಡಾವಣೆಗೆ ಸ್ಥಳಾಂತರಿಸಲು ಬೆಂಗಳೂರು ಅಬಕಾರಿ ಉಪ ಆಯುಕ್ತರು ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ರದ್ದುಪಡಿಸಿದೆ.

ಬಾರ್ ಅಂಡ್‌ ರೆಸ್ಟೋರೆಂಟ್ ಸ್ಥಳಾಂತರಕ್ಕೆ ಅಬಕಾರಿ ಉಪ ಆಯುಕ್ತರು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿ ವಿಚಾರಣೆಯನ್ನು ನಾಯಮೂರ್ತಿಗಳಾದ ಬಿ ಎಂ ಶ್ಯಾಮ್ ಪ್ರಸಾದ್ ಹಾಗೂ ಎಂಜಿಎಸ್ ಕಮಲ್ ಅವರಿದ್ದ ರಜಾಕಾಲೀನ ವಿಭಾಗೀಯ ಪೀಠವು ನಡೆಸಿತು.

ಸರ್ಕಾರದ ಪರ ವಕೀಲರು, ಬಾರ್ ಸ್ಥಳಾಂತರಕ್ಕೆ ಬೆಂಗಳೂರು ಅಬಕಾರಿ ಉಪ ಆಯುಕ್ತರು ಹೊರಡಿಸಿರುವ ಆದೇಶ ಕರ್ನಾಟಕ ಅಬಕಾರಿ ಅಧಿನಿಯಮ 5ರ ಉಲ್ಲಂಘನೆಯಾಗಿದೆ ಎಂದು ಮನವರಿಕೆಯಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಈ ಹೇಳಿಕೆಯನ್ನು ಪರಿಗಣಿಸಿದ ನ್ಯಾಯಾಲಯವು ಬಾರ್ ಮತ್ತು ರೆಸ್ಟೋರೆಂಟ್ ಸ್ಥಳಾಂತರಕ್ಕೆ ಹೊರಡಿಸಲಾಗಿದ್ದ ಆದೇಶ ನಿಯಮಬಾಹಿರವಾಗಿದೆ ಎಂದು ಸರ್ಕಾರವೇ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಆ ಆದೇಶವನ್ನು ರದ್ದುಪಡಿಸಲಾಗುವುದು ಎಂದು ತಿಳಿಸಿ, ಅಬಕಾರಿ ಉಪ ಆಯುಕ್ತರು ಕಳೆದ ಏಪ್ರಿಲ್‌ 4ರಂದು ಹೊರಡಿಸಿದ್ದ ಆದೇಶ ರದ್ದುಪಡಿಸಿತು.

ಪ್ರಕರಣ ಹಿನ್ನೆಲೆ: ಬೇಗೂರು ಹೋಬಳಿಯ ಕಮ್ಮನಹಳ್ಳಿ ಗ್ರಾಮದಲ್ಲಿ ಜಿ ಪ್ರಸಾದ್ ರೆಡ್ಡಿ ಎಂಬುವರಿಗೆ ಸೇರಿದ ಸಿಎಲ್-9 ಪರವಾನಗಿ ಹೊಂದಿರುವ ಬಾರ್ ಅಂಡ್‌ ರೆಸ್ಟೋರೆಂಟ್ ಅನ್ನು ಕೋರಮಂಗಲದ ಕೆ ಸಿ ಮಲ್ಲಪ್ಪ ರೆಡ್ಡಿ ಬಡಾವಣೆಗೆ ಸ್ಥಳಾಂತರಿಸಲು ಅಬಕಾರಿ ಉಪ ಆಯುಕ್ತರು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಬಾರ್ ಸ್ಥಳಾಂತರಿಸಲು ಉದ್ದೇಶಿಸಿರುವ ಬಡಾವಣೆಯ 50 ಮೀಟರ್ ವ್ಯಾಪ್ತಿಯಲ್ಲಿ 2 ಚರ್ಚ್ ಹಾಗೂ ಮುತ್ತುಮಾರಿಯಮ್ಮನ್ ದೇವಸ್ಥಾನವಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ವಾಸಿಸುವ ರಾಜೇಂದ್ರ ನಗರ ಇದೆ. ಕರ್ನಾಟಕ ಅಬಕಾರಿ (ಪರವಾನಗಿ ಸಾಮಾನ್ಯ ಷರತ್ತುಗಳು) ಅಧಿನಿಯಮ-1967ರ ನಿಯಮ 5ರ ಪ್ರಕಾರ, ಧಾರ್ಮಿಕ ಕೇಂದ್ರ, ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆ ಮತ್ತು ವಸತಿ ಪ್ರದೇಶದಿಂದ 100 ಮೀಟರ್ ಒಳಗೆ ಮದ್ಯದಂಗಡಿ ತೆರೆಯಲು ಪರವಾನಗಿ ನೀಡುವಂತಿಲ್ಲ. ಆದ್ದರಿಂದ, ನಿಯಮಬಾಹಿರವಾಗಿ ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು.