Tis Hazari 
ಸುದ್ದಿಗಳು

ತೀಸ್ ಹಜಾರಿ ನ್ಯಾಯಾಲಯ ಹಿಂಸಾಚಾರ: ಇನ್ನೂ 15 ನ್ಯಾಯವಾದಿಗಳ ಅಮಾನತುಗೊಳಿಸಿದ ದೆಹಲಿ ವಕೀಲರ ಪರಿಷತ್‌

ಇತ್ತೀಚಿಗೆ ತೀಸ್ ಹಜಾರಿ ನ್ಯಾಯಾಲಯದ ಸಂಕೀರ್ಣದಲ್ಲಿ ಗುಂಡು ಹಾರಿಸಿದ, ಕಲ್ಲು ತೂರಾಟ ನಡೆಸಿದ ಹಾಗೂ ನಿಂದನೆಯಲ್ಲಿ ತೊಡಗಿದ್ದ ಆರೋಪದಡಿ ಪರಿಷತ್ತು ಇದುವರೆಗೆ 20 ವಕೀಲರನ್ನು ಅಮಾನತುಗೊಳಿಸಿದೆ.

Bar & Bench

ಈಚೆಗೆ ದೆಹಲಿಯ ತೀಸ್ ಹಜಾರಿ ನ್ಯಾಯಾಲಯದ ಸಂಕೀರ್ಣದಲ್ಲಿ ಹಿಂಸಾತ್ಮಕ ಘರ್ಷಣೆಯಲ್ಲಿ ತೊಡಗಿದ್ದ ಆರೋಪಕ್ಕೆ ಸಂಬಂಧಿಸಿದಂತೆ 15 ವಕೀಲರ ಪರವಾನಗಿ / ನೋಂದಣಿಯನ್ನು ದೆಹಲಿ ವಕೀಲರ ಪರಿಷತ್‌ (ಬಿಸಿಡಿ) ಜುಲೈ 14ರಂದು ಅಮಾನತುಗೊಳಿಸಿದೆ.

ವಕೀಲರಾದ ವಿಭು ತ್ಯಾಗಿ, ವಿಶಾಲ್ ಯಾದವ್, ಆಕಾಶ್ ಖತ್ರಿ, ಅಮೂಲ್ಯ ಶರ್ಮಾ, ದೀಪಕ್ ಅರೋರಾ, ಜಿತೇಶ್ ಖಾರಿ, ಲಲಿತ್, ಮೋಹಿತ್ ಶರ್ಮಾ, ರಾಹುಲ್ ಶರ್ಮಾ, ರಣದೀಪ್ ಸಿಂಗ್, ಸಂದೀಪ್ ಸೂದ್, ಸಂಜಯ್ ಕುಮಾರ್, ಸತೀಶ್ ಕುಮಾರ್, ಶರದ್ ಶರ್ಮಾ ಮತ್ತು ಶಿವರಾಮ್ ಪಾಂಡೆ ಅವರನ್ನು ತಕ್ಷಣದಿಂದ ಜಾರಿಯಾಗುವಂತೆ ಅಮಾನತುಗೊಳಿಸಲಾಗಿದೆ.

ಇತ್ತೀಚೆಗೆ ವೈರಲ್‌ ಆಗಿದ್ದ ಹಿಂಸಾಚಾರ ವೀಡಿಯೊ ಆಧರಿಸಿ ಬಿಸಿಡಿ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಂಡಿದೆ. ದೃಶ್ಯಾವಳಿಗಳಲ್ಲಿ ವಕೀಲರು ಗುಂಡು ಹಾರಿಸಿರುವುದು, ಕಲ್ಲು ತೂರಾಟ ನಡೆಸಿರುವುದು ಹಾಗೂ ನಿಂದನೆಯಲ್ಲಿ ತೊಡಗಿರುವುದು ಕಂಡುಬಂದಿದೆ.

ಘಟನೆಯಲ್ಲಿ ಭಾಗಿಯಾಗಿರುವ ವಕೀಲರನ್ನು ಗುರುತಿಸಲು ವಕೀಲರ ಸಂಸ್ಥೆ ಸತ್ಯಶೋಧನಾ ಸಮಿತಿ ರಚಿಸಿತ್ತು. ತೀಸ್ ಹಜಾರಿ ವಕೀಲರ ಸಂಘದ ಸದಸ್ಯರೊಂದಿಗೆ ಮಾತನಾಡಿ ವೀಡಿಯೊ ಪರಿಶೀಲಿಸಿದ್ದ ಸಮಿತಿ ನಂತರ ಬಿಸಿಡಿಗೆ ಮಧ್ಯಂತರ ವರದಿ ಸಲ್ಲಿಸಿತ್ತು.

ಈ ಮಧ್ಯಂತರ ವರದಿ  ಆಧರಿಸಿ ಬಿಸಿಡಿ ಇದೀಗ 15 ವಕೀಲರ ಪರವಾನಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಅಮಾನತುಗೊಂಡಿರುವ ವಕೀಲರು ತಮ್ಮ ಲಿಖಿತ ವಿವರಣೆ ಸಲ್ಲಿಸುವಂತೆ ಮತ್ತು ಆಗಸ್ಟ್ 25ರಂದು ಸಂಜೆ 4 ಗಂಟೆಗೆ ಬಿಸಿಡಿ ಎದುರು ಹಾಜರಾಗುವಂತೆ ಸೂಚಿಸಲಾಗಿದೆ.

ಇದಕ್ಕೂ ಮೊದಲು ಜುಲೈ 5 ಮತ್ತು ಜುಲೈ 6 ರಂದು ಬಿಸಿಡಿ ಹಿಂಸಾಚಾರದಲ್ಲಿ ಭಾಗಿಯಾದ ಆರೋಪದಡಿ ವಕೀಲರಾದ ಮನೀಶ್ ಶರ್ಮಾ, ಲಲಿತ್ ಶರ್ಮಾ, ಅಮನ್ ಸಿಂಗ್, ಸಚಿನ್ ಸಾಂಗ್ವಾನ್ ಹಾಗೂ ರವಿ ಗುಪ್ತಾ ಅವರನ್ನು ಅಮಾನತುಗೊಳಿಸಿತ್ತು. ಆರೋಪ ಹೊತ್ತಿರುವ ಮೂವರು ವಕೀಲರನ್ನು ಜುಲೈ 6ರಂದು  ದೆಹಲಿ ನ್ಯಾಯಾಲಯ 4 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿತ್ತು.