Lawyers, Supreme Court
Lawyers, Supreme Court 
ಸುದ್ದಿಗಳು

ವಕೀಲರು ಮತ್ತು ವಕೀಲರ ಒಕ್ಕೂಟಗಳ ಪ್ರತಿಭಟನೆಯನ್ನು ಕಾನೂನುಬಾಹಿರ ಮಾಡುವ ನಿಯಮಾವಳಿ ರಚನೆಗೆ ಮುಂದಾದ ಬಿಸಿಐ

Bar & Bench

ವಕೀಲರು ನಡೆಸುವ ಪ್ರತಿಭಟನೆಗಳನ್ನು ತಡೆಯುವ ಹಾಗೂ ಅಂತಹ ಪ್ರತಿಭಟನೆಗಳನ್ನು ನಡೆಸಲು ಕರೆ ನೀಡುವ ವಕೀಲರ ಒಕ್ಕೂಟಗಳ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ನಿಯಮಾವಳಿಗಳನ್ನು ರೂಪಿಸಲು ಮುಂದಾಗಿರುವುದಾಗಿ ಭಾರತೀಯ ವಕೀಲರ ಪರಿಷತ್ (ಬಿಸಿಐ)‌ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಈ ಸಂಬಂಧ ಬಿಸಿಐ ಅದ್ಯಕ್ಷ ಮನನ್‌ ಕುಮಾರ್ ಮಿಶ್ರಾ ಅವರು ನ್ಯಾ. ಚಂದ್ರಚೂಡ್‌ ಅವರ ನೇತೃತ್ವದ ಪೀಠಕ್ಕೆ ಮಾಹಿತಿ ನೀಡಿದರು. ವಕೀಲರ ಪ್ರತಿಭಟನೆಗಳು, ನ್ಯಾಯಾಲಯದ ಕಲಾಪಗಳಿಗೆ ಹಾಕುವ ಬಹಿಷ್ಕಾರದಂತಹ ಕ್ರಮಗಳು ಕಾನೂನುಬಾಹಿರವೆಂದು ಉತ್ತರಾಖಂಡ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಡೆಹ್ರಾಡೂನ್‌ನ ಜಿಲ್ಲಾ ವಕೀಲರ ಒಕ್ಕೂಟವು ಸಲ್ಲಿಸಿದ್ದ ಮನವಿ ವಿಚಾರಣೆಯನ್ನು ಪೀಠ ನಡೆಸಿತು.

ಬಿಸಿಐ ಹೇಳಿಕೆಯನ್ನು ಪರಿಗಣಿಸಿದ ನ್ಯಾಯಾಲಯವು, “ಈ ನಿಟ್ಟಿನಲ್ಲಿ ಭಾರತೀಯ ವಕೀಲರ ಪರಿಷತ್ತು ತೆಗೆದುಕೊಂಡಿರುವ ಕ್ರಮಗಳನ್ನು ನಾವು ಶ್ಲಾಘಿಸುತ್ತೇವೆ” ಎಂದಿತು.

ಬಿಸಿಐ ಇತ್ತೀಚೆಗೆ ತನ್ನ ನಿಯಮಾವಳಿಗಳಲ್ಲಿ ಗಣನೀಯ ಬದಲಾವಣೆಗಳನ್ನು ತರಲು ಮುಂದಾಗಿತ್ತು. ಯಾವುದೇ ವಕೀಲರು ನ್ಯಾಯಾಲಯ, ನ್ಯಾಯಾದೀಶರು, ರಾಜ್ಯ ವಕೀಲರ ಸಮಿತಿಗಳು ಹಾಗೂ ಬಿಸಿಐ ವಿರುದ್ಧ ಆಕ್ಷೇಪಾರ್ಹ, ನಿಂದನಾರ್ಹ ಹೇಳಿಕೆಗಳನ್ನು ನೀಡದಂತೆ ತಡೆಯುವ ನಿಟ್ಟಿನಲ್ಲಿ ಹಲವು ನಿರ್ಬಂಧಗಳನ್ನು ವಿಧಿಸಿತ್ತು. ಅಲ್ಲದೆ, ತಿದ್ದುಪಡಿ ಮಾಡಲಾದ ಈ ನಿಯಮಾವಳಿಗಳಡಿಯಲ್ಲಿ, ಮೇಲಿನ ವರ್ತನೆಗಳನ್ನು ಅನುಚಿತವೆಂದು ಪರಿಗಣಿಸಿ ವಕೀಲರನ್ನು ನ್ಯಾಯಿಕ ಸೇವೆ ನೀಡುವುದರಿಂದ ಅಮಾನತುಗೊಳಿಸುವ ಹಾಗೂ ಅವರ ಕಾನೂನು ಸೇವಾ ಪರವಾನಗಿಯನ್ನು ರದ್ದುಪಡಿಸುವ ಕ್ರಮಗಳನ್ನು ಅಡಕಗೊಳಿಸಲಾಗಿತ್ತು.

ಈ ತಿದ್ದುಪಡಿ ಮಾಡಲಾದ ನಿಯಮಾವಳಿಗಳ ಬಗ್ಗೆ ಗಂಭೀರ ಆಕ್ಷೇಪಗಳು ವಕೀಲ ಸಮುದಾಯದಿಂದಲೇ ಎದುರಾಗಿವೆ. ಈ ನಿಯಮಾವಳಿಗಳ ವಿರುದ್ಧ ಸುಪ್ರೀಂ ಕೋರ್ಟ್‌ ಸಹಿತ ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಅರ್ಜಿಗಳು ದಾಖಲಾಗಿವೆ. ಹೀಗಾಗಿ, ಪ್ರಸ್ತುತ ತಿದ್ದುಪಡಿ ನಿಯಮಾವಳಿಗಳನ್ನು ತಡೆ ಹಿಡಿಯಲಾಗಿದೆ.