Justice Suraj Govindraj 
ಸುದ್ದಿಗಳು

ಕಾನೂನು ಕಾಲೇಜುಗಳ ಮಾನ್ಯತೆ ಮಾಹಿತಿ: ಬಿಸಿಐ ವೆಬ್‌ಸೈಟ್‌ನಲ್ಲಿ ಹೆಚ್ಚುವರಿ ಮಾಹಿತಿ ಸೇರಿಸಲು ಹೈಕೋರ್ಟ್‌ ಸೂಚನೆ

Bar & Bench

ಮಾನ್ಯತೆ ಪಡೆದಿರುವ ಕಾಲೇಜುಗಳು/ವಿಶ್ವವಿದ್ಯಾಲಯಗಳ ಮುಂದೆ ಅವರು ಮಾನ್ಯತೆ ವಿಸ್ತರಣೆ ಕೋರಿ ಸಲ್ಲಿಸಿರುವ ಅರ್ಜಿಯ ದಿನಾಂಕ, ಶುಲ್ಕ ಪಾವತಿ, ಆರಂಭಿಕ ಮಾನ್ಯತಾ ಪತ್ರ ಮತ್ತು ಕಾಲೇಜಿಗೆ ಮಂಜೂರಾಗಿರುವ ಸೀಟುಗಳ ವಿವರಗಳ ಕಲಂ ಅನ್ನು ತನ್ನ ವೆಬ್‌ಸೈಟ್‌ನಲ್ಲಿ ಸೇರ್ಪಡೆ ಮಾಡುವಂತೆ ಭಾರತೀಯ ವಕೀಲ ಪರಿಷತ್‌ಗೆ (ಬಿಸಿಐ) ಈಚೆಗೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಮಾನ್ಯತೆ ನೀಡಿರುವ ಕಾನೂನು ಕಾಲೇಜು/ವಿಶ್ವವಿದ್ಯಾಲಯಗಳ ಪಟ್ಟಿಯನ್ನು ನವೀಕರಿಸಲು ಬಿಸಿಐಗೆ ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ಬಿಎಂಎಸ್‌ ಕಾನೂನು ಕಾಲೇಜು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

“ಅರ್ಜಿದಾರ ಕಾಲೇಜು ಮಾನ್ಯತಾ ಶುಲ್ಕವನ್ನು ಪಾವತಿಸಿದ್ದರೂ ಅದು ಬಿಸಿಐ ವೆಬ್‌ಸೈಟ್‌ನಲ್ಲಿ ಪ್ರತಿಫಲನವಾಗುತ್ತಿಲ್ಲ. ಹೀಗಾಗಿ, ಸದ್ಯದ ಸ್ಥಿತಿಗತಿ ಬಿಂಬಿಸುವ ನಿಟ್ಟಿನಲ್ಲಿ ಬಿಸಿಐ ಮತ್ತಷ್ಟು ಕಲಂಗಳನ್ನು ತನ್ನ ವೆಬ್‌ಸೈಟ್‌ಗೆ ಸೇರ್ಪಡೆ ಮಾಡುವ ಅಗತ್ಯವಿದೆ” ಎಂದು ನ್ಯಾಯಾಲಯ ಹೇಳಿದೆ.

ಕಾನೂನು ಕಾಲೇಜಿಗಳಿಗೆ ಬಿಸಿಐ ಮಾನ್ಯತೆ ನೀಡುವ ಸಂಸ್ಥೆಯಾಗಿದ್ದು, ಕಾನೂನು ಪದವಿ ಪಡೆಯಲು ಬಯಸುವ ಯಾವುದೇ ವಿದ್ಯಾರ್ಥಿ ಈ ಮಾಹಿತಿಯನ್ನು ಪರಿಶೀಲಿಸಬಹುದಾಗಿದೆ. ಸದ್ಯದ ಮಾನ್ಯತೆ ಮಾಹಿತಿಯನ್ನು ಬಿಸಿಐ ವೆಬ್‌ಸೈಟ್‌ನಲ್ಲಿ ಪ್ರಕಟಿಸದಿದ್ದರೆ ಅರ್ಜಿದಾರ ಕಾಲೇಜಿಗೆ ತೊಂದರೆಯಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಹೀಗಾಗಿ, “ಮಾನ್ಯತೆ ವಿಸ್ತರಣೆಗೆ ಯಾವಾಗ ಅರ್ಜಿ ಸಲ್ಲಿಸಲಾಗಿದೆ. ಯಾವಾಗ ಶುಲ್ಕ ಪಾವತಿಸಲಾಗಿದೆ. ಆರಂಭದಲ್ಲಿ ಬಿಸಿಐ ನಿರ್ದಿಷ್ಟ ಕಾಲೇಜಿಗೆ ನೀಡಿರುವ ಮಾನ್ಯತಾ ಪತ್ರದ ಪಿಡಿಎಫ್‌ ಸೇರ್ಪಡೆ ಮಾಡಬೇಕು. ಕಾಲೇಜು/ವಿಶ್ವವಿದ್ಯಾಲಯದಲ್ಲಿ ಎಷ್ಟು ಮಂದಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂಬುದು ಸೇರಿ ಬಿಸಿಐ ಇಂದಿನ ಸ್ಥಿತಿಗತಿ ಅನುಗುಣವಾಗಿ ಏನೆಲ್ಲಾ ಮಾಹಿತಿ ಅಗತ್ಯವಾಗಿದೆಯೋ ಅದೆಲ್ಲವನ್ನೂ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ಬಿಎಂಎಸ್‌ ಕಾನೂನು ಕಾಲೇಜು ಮೂರು ಮತ್ತು ಐದು ವರ್ಷಗಳ ಕಾನೂನು ಪದವಿ ಕೋರ್ಸ್‌ ನಡೆಸುತ್ತಿದೆ. ಸಂಸ್ಥೆಯು ನಿರಂತರವಾಗಿ ಬಿಸಿಐನಲ್ಲಿ ಮಾನ್ಯತೆ ನವೀಕರಿಸುತ್ತಿದ್ದು, 2027-28ರವರೆಗೆ ಮಾನ್ಯತೆ ವಿಸ್ತರಣೆ ಪಡೆಯಲು ಶುಲ್ಕ ಪಾವತಿಸಿದರೂ ಬಿಸಿಐ ವೆಬ್‌ಸೈಟ್‌ನಲ್ಲಿ ಬಿಎಂಎಸ್‌ ಕಾನೂನು ಕಾಲೇಜಿನ ಮಾನ್ಯತೆಯು 2017-18ಕ್ಕೆ ಸೀಮಿತವಾಗಿದೆ ಎಂದು ತಪ್ಪಾಗಿ ತೋರಿಸುತ್ತಿದೆ ಎಂದು ಆಕ್ಷೇಪಿಸಿತ್ತು. ಈ ಸಂಬಂಧ ಮನವಿಯನ್ನೂ ಬಿಸಿಐಗೆ ಸಲ್ಲಿಸಲಾಗಿತ್ತು. ಅದಕ್ಕೆ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಬಿಎಂಎಸ್‌ ಕಾನೂನು ಕಾಲೇಜು ಹೈಕೋರ್ಟ್‌ ಮೆಟ್ಟಿಲೇರಿತ್ತು. 

BMS College of Law Vs BCI.pdf
Preview