ಸುದ್ದಿಗಳು

ಕಿರಿಯ ವಕೀಲರಿಗೆ ₹ 5,000ದವರೆಗೆ ಸ್ಟೈಪೆಂಡ್: ನಿಯಮಾವಳಿ ರೂಪಿಸಿದ ಕೇರಳ ವಕೀಲರ ಪರಿಷತ್

Bar & Bench

ಮೂರು ವರ್ಷಕ್ಕಿಂತ ಕಡಿಮೆ ಪ್ರಾಕ್ಟೀಸ್‌ ಮಾಡಿರುವ ಮತ್ತು ವಾರ್ಷಿಕ ಆದಾಯ ₹ 1 ಲಕ್ಷಕ್ಕಿಂತ ಹೆಚ್ಚಿಲ್ಲದ ಕಿರಿಯ ವಕೀಲರಿಗೆ ತಿಂಗಳಿಗೆ ₹ 5,000ದವರೆಗೆ ಸ್ಟೈಪೆಂಡ್‌ (ತರಬೇತಿ ಭತ್ಯೆ) ಒದಗಿಸಲು ಕೇರಳ ವಕೀಲರ ಪರಿಷತ್‌ ನಿಯಮಾವಳಿ ರೂಪಿಸಿದೆ.

ಕೇರಳ ವಕೀಲರ ಕಲ್ಯಾಣ ನಿಧಿ ಕಾಯಿದೆ- 1980ರ ಮೂಲಕ ನೀಡಲಾದ ಅಧಿಕಾರ ಬಳಸಿ ಪರಿಷತ್ತು ಡಿಸೆಂಬರ್ 18, 2021ರಂದು ಕೇರಳ ವಕೀಲರ ಸ್ಟೈಪೆಂಡ್‌ ನಿಯಮಗಳು- 2021 ಎಂಬ ಅಧಿಸೂಚನೆ ಹೊರಡಿಸಿದೆ.

ಸ್ಟೈಪೆಂಡ್‌ಗೆ ಅರ್ಹರಾದ ವಕೀಲರ ವಯೋಮಿತಿ 30 ವರ್ಷ ಮೀರಿರಬಾರದು. ವಾರ್ಷಿಕ ಆದಾಯ ಮಿತಿ ರೂ. 1 ಲಕ್ಷ ಮೀರಬಾರದು. ಅಭ್ಯರ್ಥಿಯು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಧರ್ಮದರ್ಶಿಗಳ ಸಮಿತಿಯು ಸರ್ಕಾರದ ಪೂರ್ವಾನುಮೋದನೆಯೊಂದಿಗೆ ರೂ. 5 ಸಾವಿರ ಮೀದಂತೆ ಕಾಲದಿಂದ ಕಾಲಕ್ಕೆ ಎಷ್ಟು ಸ್ಟೈಪೆಂಡ್‌ಅನ್ನು ನೀಡಬಹುದು ಎಂದು ನಿರ್ಧರಿಸಲಿದೆ.

ಕಿರಿಯ ವಕೀಲರಿಗೆ ತಿಂಗಳಿಗೆ ₹ 5 ಸಾವಿರ ಸ್ಟೈಪೆಂಡ್ ಮಂಜೂರು ಮಾಡಿದ ಮಾರ್ಚ್ 2018ರ ಸರ್ಕಾರಿ ಆದೇಶ ಜಾರಿಗೊಳಿಸಲು ವಿಳಂಬ ಮಾಡಿದ್ದಕ್ಕಾಗಿ ಕೇರಳ ಹೈಕೋರ್ಟ್ ಈ ಹಿಂದೆ ಪರಿಷತ್ತನ್ನು ತರಾಟೆಗೆ ತೆಗೆದುಕೊಂಡಿತ್ತು. ಆಗ ಹೆಚ್ಚುವರಿ ಅಡ್ವೊಕೇಟ್ ಜನರಲ್ ʼ ವಾರ್ಷಿಕ ಸುಮಾರು ₹ 36 ಕೋಟಿಗಳಷ್ಟು ದೊಡ್ಡ ಪ್ರಮಾಣದ ಸಂಪನ್ಮೂಲ ಅಗತ್ಯವಿರುವುದರಿಂದ ಆದೇಶ ಜಾರಿಗೆ ವಿಳಂಬವಾಗಬಹುದುʼ ಎಂದಿದ್ದರು. ಇದೇ ವೇಳೆ ಪರಿಷತ್‌ ಪರ ವಕೀಲರು ʼಈಗಾಗಲೇ ನಿಯಮಗಳನ್ನು ರೂಪಿಸಿ ಸರ್ಕಾರದ ಮುಂದೆ ಸಲ್ಲಿಸಲಾಗಿದೆʼ ಎಂದಿದ್ದರು.

ಡಿಸೆಂಬರ್ 20ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಕೇರಳ ಸರ್ಕಾರ ಮತ್ತು ವಕೀಲರ ಪರಿಷತ್ತಿಗೆ ನ್ಯಾಯಾಲಯ ಸೂಚಿಸಿತ್ತು. ಪ್ರಕರಣವನ್ನು ಇಂದು ಕೈಗೆತ್ತಿಕೊಂಡ ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್ ಅವರು ವರದಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿ ರಿಟ್‌ ಅರ್ಜಿಯನ್ನು ಮುಕ್ತಾಯಗೊಳಿಸಿದರು.

ಅಧಿಸೂಚನೆಯಲ್ಲಿ ಇಲ್ಲಿ ಓದಿ:

Bar_Council_of_Kerala___lawyers_stipend.pdf
Preview