Justice Suresh Kumar Kait 
ಸುದ್ದಿಗಳು

ಮಧ್ಯಪ್ರದೇಶ ಹೈಕೋರ್ಟ್‌ ಸಿಜೆ ಕೈಟ್‌ ಅವರ ನಿವಾಸದ ಆವರಣದಿಂದ ದೇವಾಲಯ ತೆರವು: ಹೈಕೋರ್ಟ್‌ ವಕೀಲರ ಸಂಘದಿಂದ ಖಂಡನೆ

ಘಟನೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಹೈಕೋರ್ಟ್‌ ವಕೀಲರ ಸಂಘವು ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ಪತ್ರ ಬರೆದಿದೆ.

Bar & Bench

ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಅವರು ತಮ್ಮ ಅಧಿಕೃತ ನಿವಾಸದ ಆವರಣದಲ್ಲಿದ್ದ ಹನುಮಾನ್ ದೇವಾಲಯವನ್ನು ತೆರವುಗೊಳಿಸಿರುವುದಕ್ಕೆ ಮಧ್ಯಪ್ರದೇಶ ಹೈಕೋರ್ಟ್ ವಕೀಲರ ಸಂಘವು ಖಂಡನೆ ವ್ಯಕ್ತಪಡಿಸಿದೆ.

ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ವಕೀಲರ ಸಂಘವು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರಿಗೆ ಪತ್ರ ಬರೆದಿದೆ. ಮುಖ್ಯ ನ್ಯಾಯಾಧೀಶರ ಬಂಗಲೆಯಲ್ಲಿರುವ ದೇವಾಲಯವು ಐತಿಹಾಸಿಕವಾಗಿದ್ದು, ಈ ಹಿಂದೆ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಎಸ್‌ ಎ ಬೋಬ್ಡೆ, ಎ ಎಂ ಖಾನ್ವಿಲ್ಕರ್ ಮತ್ತು ಹೇಮಂತ್ ಗುಪ್ತಾ ಸೇರಿದಂತೆ ಅನೇಕ ಮಾಜಿ ಮುಖ್ಯ ನ್ಯಾಯಮೂರ್ತಿಗಳು ಇಲ್ಲಿ ಪೂಜೆ ಪುನಸ್ಕಾರಗಳನ್ನು ನೆರವೇರಿಸುತ್ತಿದ್ದರು. ಮುಂದೆ ಅವರೆಲ್ಲರೂ ಸುಪ್ರೀಂ ಕೋರ್ಟ್‌ಗೆ ಪದೋನ್ನತಿಗೊಂಡರು ಎಂದು ಸಿಜೆಐ ಅವರಿಗೆ ಬರೆದಿರುವ ಪತ್ರದಲ್ಲಿ ವಿವರಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿಗಳ ನಿವಾಸದಲ್ಲಿ ಕೆಲಸ ಮಾಡುವ ನೌಕರರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಈ ಹಿಂದೆ ಮುಸ್ಲಿಂ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದ ರಾಫತ್ ಆಲಂ ಮತ್ತು ರಫೀಕ್ ಅಹ್ಮದ್ ಅವರ ಅವಧಿಯಲ್ಲಿಯೂ ಸಹ ದೇವಾಲಯದ ಕುರಿತಾಗಿ ಯಾವುದೇ ಆಕ್ಷೇಪಣೆಗಳು ವ್ಯಕ್ತವಾಗಿರಲಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.

ಹೀಗಿರುವಾಗ, ಸರ್ಕಾರದ ಅನುಮತಿಯಿಲ್ಲದೆ ಅಥವಾ ಯಾವುದೇ ಶಾಸನಬದ್ಧ ಆದೇಶವಿಲ್ಲದೆ ದೇವಾಲಯವನ್ನು ತೆರವುಗೊಳಿಸಬಾರದಿತ್ತು. ಆದರೆ, ಇದಾವುದೂ ಇಲ್ಲದೆ ದೇವಲಾಯವನ್ನು ತೆರವುಗೊಳಿಸಿರುವ ಕೃತ್ಯವು ಸನಾತನ ಧರ್ಮದ ಆರಾಧಕರಿಗೆ ಮಾಡಿದ ಅವಮಾನ ಎಂದು ಪತ್ರದಲ್ಲಿ ಹೇಳಲಾಗಿದೆ.

ಇದೇ ವಿಚಾರವಾಗಿ ಮುಖ್ಯ ನ್ಯಾಯಮೂರ್ತಿ ಕೈಟ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ವಕೀಲರೊಬ್ಬರು ರಾಷ್ಟ್ರಪತಿ, ಪ್ರಧಾನಿ, ಸಿಜೆಐ ಮತ್ತು ಕೇಂದ್ರ ಕಾನೂನು ಸಚಿವರಿಗ ಪತ್ರ ಬರೆದಿದ್ದರು. ಇದರ ಬೆನ್ನಿಗೇ ಸಂಘವು ಈ ಪತ್ರ ಬರೆದಿದೆ.

ಘಟನೆಯ ಬಗ್ಗೆ ಬಾರ್‌ ಅಂಡ್‌ ಬೆಂಚ್‌ಗೆ ಪ್ರತಿಕ್ರಿಯಿಸಿಸ ಮಧ್ಯಪ್ರದೇಶ ಹೈಕೋರ್ಟ್‌ ವಕೀಲರ ಸಂಘದ ಅಧ್ಯಕ್ಷ ಧನ್ಯ ಕುಮಾರ್ ಜೈನ್‌ ಅವರು, ಕೈಟ್‌ ಅವರು ಬೌದ್ಧ ಧರ್ಮ ಪಾಲಕರಾಗಿರುವುದು ಸಹ ಅವರು ತನ್ನ ಅಧಿಕೃತ ನಿವಾಸದಲ್ಲಿದ್ದ ದೇವಾಲಯವನ್ನು ತೆರವುಗೊಳಿಸಲು ಕಾರಣವಾಗಿರಬಹುದು ಎಂದು ಅಭಿಪ್ರಾಯಪಟ್ಟರು.