ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಅವರು ತಮ್ಮ ಅಧಿಕೃತ ನಿವಾಸದ ಆವರಣದಲ್ಲಿದ್ದ ಹನುಮಾನ್ ದೇವರ ದೇಗುಲವನ್ನು ತೆರವುಗೊಳಿಸಿದ್ದಾರೆ ಎಂದು ಸುಳ್ಳು ಆಪಾದನೆ ಮಾಡಿದ್ದಕ್ಕಾಗಿ ಮಧ್ಯಪ್ರದೇಶ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಧನ್ಯಕುಮಾರ್ ಜೈನ್ ಅವರು ಕ್ಷಮೆಯಾಚಿಸಿದ್ದಾರೆ.
ಇತ್ತೀಚೆಗಷ್ಟೇ, ಹೈಕೋರ್ಟ್ ಆಡಳಿತವು ಜೈನ್ ಅವರ ಆರೋಪವನ್ನು ಆಧಾರರಹಿತ ಹಾಗೂ ಸುಳ್ಳು ಮಾಹಿತಿಯಿಂದ ಕೂಡಿದೆ ಎಂದು ತಳ್ಳಿಹಾಕಿತ್ತು.
ಜನವರಿ 25 ರಂದು ಬರೆದ ಪತ್ರದಲ್ಲಿ, ಎಚ್‌ಸಿಬಿಎ ಅಧ್ಯಕ್ಷ ಧನ್ಯಕುಮಾರ್ ಜೈನ್ ಅವರು ಮುಖ್ಯ ನ್ಯಾಯಮೂರ್ತಿ ಕೈಟ್‌ಗೆ ಕ್ಷಮೆಯಾಚಿಸಿದ್ದು ಭವಿಷ್ಯದಲ್ಲಿ ಹೀಗೆ ನಡೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಧನ್ಯ ಕುಮಾರ್ ಅವರು ತಮ್ಮ ಪತ್ರದಲ್ಲಿ, "ನನ್ನ ಪತ್ರ (ಮುಖ್ಯ ನ್ಯಾಯಮೂರ್ತಿ ಕೈಟ್ ವಿರುದ್ಧದ ಆರೋಪ ಮಾಡಿ ಬರೆದದ್ದು) ಗೊಂದಲ ಸೃಷ್ಟಿಸಿದೆ ಎಂದು ನಾನು ಭಾವಿಸಿರುವೆ. ಇದಕ್ಕಾಗಿ ನಾನು ಅತೀವ ದುಃಖಿತನಾಗಿದ್ದು, ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಲ್ಲಿ ನನ್ನ ವಿಷಾದ ವ್ಯಕ್ತಪಡಿಸುತ್ತೇನೆ. ಅವರಿಗೆ ನನ್ನ ಸಂಪೂರ್ಣ ಗೌರವವನ್ನು ತೋರಿಸುತ್ತೇನೆ. ಭವಿಷ್ಯದಲ್ಲಿ, ಈ ರೀತಿ ನಾನು ನಡೆದುಕೊಳ್ಳುವುದಿಲ್ಲ" ಎಂದು ವಿವರಿಸಿದ್ದಾರೆ.
ಸಿಜೆ ಅಧಿಕೃತ ಬಂಗಲೆಯ ಆವರಣದಲ್ಲಿರುವ ದೇವಾಲಯ ತೆರವುಗೊಳಿಸಿದ ಬಗ್ಗೆ ತನಿಖೆ ಕೈಗೊಳ್ಳುವಂತೆ ಈ ಹಿಂದೆ ಸಂಘದ ಅಧ್ಯಕ್ಷರು ಕೋರಿದ್ದರು.
ದೇವಾಲಯ ತೆರವುಗೊಳಿಸಿದ ಮುಖ್ಯ ನ್ಯಾಯಮೂರ್ತಿ ಕೈಟ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರವೀಂದ್ರ ನಾಥ್ ತ್ರಿಪಾಠಿ ಎಂಬ ವಕೀಲರು ರಾಷ್ಟ್ರಪತಿ, ಪ್ರಧಾನಿ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಕೇಂದ್ರ ಕಾನೂನು ಸಚಿವರಿಗೆ ಪತ್ರ ಕೂಡ ಬರೆದಿದ್ದರು.
ವಕೀಲರ ದೂರು ನೀಡಿರುವ ಬೆನ್ನಿಗೇ ಮಧ್ಯಪ್ರದೇಶ ಹೈಕೋರ್ಟ್ ವಕೀಲರ ಸಂಘ ಕೂಡ ಹೋರಾಟಕ್ಕಿಳಿದಿದ್ದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಸಮಸ್ಯೆ ಬಗೆಹರಿಸಬೇಕು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿತ್ತು. ಈ ಎಲ್ಲಾ ಆರೋಪಗಳನ್ನು ಆಗ ಹೈಕೋರ್ಟ್ ಆಡಳಿತ ನಿರಾಕರಿಸಿತ್ತು.