ಸುದ್ದಿಗಳು

ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಮಾಧ್ಯಮಗಳ ವಿರುದ್ದ ಮಧ್ಯಂತರ ಪ್ರತಿಬಂಧಕಾದೇಶ ಮಾಡಿದ ನ್ಯಾಯಾಲಯ

Siddesh M S

ರಾಮನಗರ ಜಿಲ್ಲೆಯ ಮಾಗಡಿಯ ಕಂಚುಗಲ್ ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ಮತ್ತು ಇದಕ್ಕೆ ಸಂಬಂಧಿಸಿದ ಯಾವುದೇ ವಿಚಾರದ ಕುರಿತು ಮಾನಹಾನಿಕರ ಮತ್ತು ಅಸತ್ಯದ ವಿಚಾರಗಳನ್ನು ಪ್ರಕಟಿಸದಂತೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ಈಚೆಗೆ ಮಧ್ಯಂತರ ಪ್ರತಿಬಂಧಕಾದೇಶ ಮಾಡಿದೆ.

ಮಠದ ಭಕ್ತರು ಎನ್ನಲಾದ ಬಿ ಸತೀಶ್‌ ಕುಮಾರ್, ಕೆ ಎಸ್‌ ಕಾಂತರಾಜು ಮತ್ತು ಸಿ ಎಂ ರಾಜಶೇಖರ ಮೂರ್ತಿ ಅವರು ಸಲ್ಲಿಸಿದ್ದ ಅಸಲು ದಾವೆಯ ವಿಚಾರಣೆ ನಡೆಸಿದ 59ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ್‌ ಅವರು ಮೇಲಿನ ಆದೇಶ ಮಾಡಿದ್ದಾರೆ.

ಬಸವಲಿಂಗ ಸ್ವಾಮೀಜಿಯವರ ಆತ್ಮಹತ್ಯೆ ಕುರಿತು ಹಾಗೂ ಸ್ವಾಮೀಜಿಗೆ ಸಂಬಂಧಿಸಿದಂತೆ ಯಾವುದೇ ತೆರನಾದ ಮಾನಹಾನಿಕರ, ವಿವಾದಾತ್ಮಕ ಸುದ್ದಿ, ವಿಡಿಯೊ, ಹೇಳಿಕೆ, ಜಾಹೀರಾತುಗಳನ್ನು ಪ್ರಸಾರ, ಪ್ರಕಟ ಮಾಡದಂತೆ 1-46 ಮತ್ತು 48-49ನೇ ಪ್ರತಿವಾದಿಗಳ ವಿರುದ್ಧ ವಿರುದ್ಧ ಪ್ರತಿಬಂಧಕಾದೇಶ ಮಾಡಲಾಗಿದೆ. ಫಿರ್ಯಾದಿಗಳು ನೀಡುವ ಲಿಂಕ್‌ಗಳನ್ನು 47, 50-54ನೇ ಪ್ರತಿವಾದಿಗಳನ್ನು ಮುಂದಿನ ವಿಚಾರಣೆಯ ಒಳಗೆ ತೆಗೆದು ಹಾಕಲು ನಿರ್ದೇಶಿಸಿಲಾಗಿದೆ. ಎಲ್ಲಾ ಪ್ರತಿವಾದಿಗಳಿಗೂ ಸಮನ್ಸ್‌ ಜಾರಿ ಮಾಡಲಾಗಿದ್ದು, ನವೆಂಬರ್‌ 25ಕ್ಕೆ ವಿಚಾರಣೆ ಮುಂದೂಡಲಾಗಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು “ಫಿರ್ಯಾದಿಗಳು ಕಂಚುಗಲ್‌ ಬಂಡೆ ಮಠದ ಭಕ್ತರಾಗಿದ್ದು, ಎರಡನೇ ಅರ್ಜಿದಾರರಾದ ಕಾಂತರಾಜು ಅವರು ಮಠದ ಆಡಳಿತಕ್ಕೆ ಒಳಪಟ್ಟಿರುವ ಶ್ರೀ ಮಹಾಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿದ್ದಾರೆ. ಮೂರನೇ ಫಿರ್ಯಾದಿಯು ಮಠದ ದಾಸೋಹ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದಾರೆ. ಹಲವು ದಶಕಗಳಿಂದ ಸಾಮಾಜಿಕ ಚಟುವಟಿಕೆಯಲ್ಲಿ ಮಠ ತೊಡಗಿಸಿಕೊಂಡಿದ್ದು, ಪ್ರತಿವಾದಿಗಳು ಸ್ವಾಮೀಜಿ ಹಾಗೂ ಮಠದ ವಿರುದ್ಧ ಅಸತ್ಯದ ಸಂಗತಿಗಳನ್ನು ಪ್ರಸಾರ-ಪ್ರಕಟ ಮಾಡುತ್ತಿದ್ದಾರೆ. ಪ್ರತಿವಾದಿಗಳು ಈ ರೀತಿಯ ಸುದ್ದಿಗಳನ್ನು ಪ್ರಕಟಿಸುವುದನ್ನು ಮುಂದುವರಿಸಿದರೆ ಮಠ, ದಾಸೋಹ ಹಾಗೂ ಮಠದ ಆಡಳಿತಕ್ಕೆ ಒಳಪಡುವ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಮತ್ತು ಅಲ್ಲಿ ಉದ್ಯೋಗಿಗಳಾಗಿರುವವರಿಗೆ ಸಮಸ್ಯೆಯಾಗಲಿದೆ. ಹೀಗಾಗಿ, ಮಧ್ಯಂತರ ಪ್ರತಿಬಂಧಕಾದೇಶ ಮಾಡಬೇಕು” ಎಂದು ಕೋರಿದ್ದರು.

ಪ್ರಕರಣದಲ್ಲಿ ಯಾರೆಲ್ಲಾ ಪ್ರತಿವಾದಿಗಳು: ಬಿಟಿವಿ, ಟಿವಿ9, ಪಬ್ಲಿಕ್‌ ನ್ಯೂಸ್‌, ಸುವರ್ಣ ನ್ಯೂಸ್‌, ಕಸ್ತೂರಿ ನ್ಯೂಸ್‌, ಪವರ್‌ ಟಿವಿ, ಟಿವಿ 5, ದಿಗ್ವಿಜಯ ನ್ಯೂಸ್‌, ನ್ಯೂಸ್‌ 18, ನ್ಯೂಸ್‌ ಫಸ್ಟ್‌ ಕನ್ನಡ, ಪ್ರಜಾ ಟಿವಿ, ರಾಜ್‌ ನ್ಯೂಸ್‌, ಬೆಂಗಳೂರು ಮಿರರ್‌, ಸಂಭ್ರಮ ಟಿವಿ, ಸಮಾಚಾರ.ಕಾಂ, ವಿಜಯ ಕರ್ನಾಟಕ, ವಿಜಯವಾಣಿ, ಪ್ರಜಾವಾಣಿ, ಉದಯವಾಣಿ, ಹೊಸ ದಿಗಂತ, ವಿಶ್ವವಾಣಿ, ಡೆಕ್ಕನ್‌ ಹೆರಾಲ್ಡ್‌, ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌, ದಿ ಟೈಮ್ಸ್‌ ಆಫ್‌ ಇಂಡಿಯಾ, ಡೆಕ್ಕನ್‌ ಕ್ರಾನಿಕಲ್‌, ದಿ ಹಿಂದೂ, ವಾರ್ತಾ ಭಾರತಿ, ಸಂಜೆ ವಾಣಿ, ಇ-ಸಂಜೆ, ಎನ್‌ಡಿ ಟಿವಿ, ಟೈಮ್ಸ್‌ ನೌ, ಇಂಡಿಯಾ ಟುಡೇ, ಇಂಡಿಯಾ ಟಿವಿ, ನ್ಯೂಸ್‌ 9, ನ್ಯೂಸ್‌ 18, ಸಿಎನ್‌ಎನ್‌ ಐಬಿಎನ್‌, ರಿಪಬ್ಲಿಕ್‌ ಟಿವಿ, ಒನ್‌ ಇಂಡಿಯಾ, ಹೆಡ್‌ಲೈನ್ಸ್‌ ಟುಡೇ, ಆಜ್‌ ತಕ್‌, ಎನ್‌ಡಿ ಟಿವಿ 24/7, ನ್ಯೂಸ್‌ ಎಕ್ಸ್‌, ನ್ಯೂಸ್‌ 24, ಜೀ ನ್ಯೂಸ್‌, ಎಬಿಪಿ ನ್ಯೂಸ್‌, ಯೂಟ್ಯೂಬ್‌, ಅಗ್ನಿ ಕನ್ನಡ, ಲಂಕೇಶ್‌ ಪತ್ರಿಕೆ, ಗೂಗಲ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌, ಫೇಸ್‌ಬುಕ್‌ ಇಂಡಿಯಾ, ಯಾಹೂ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌, ವಾಟ್ಸಾಪ್‌ ಮೆಸೆಂಜರ್‌, ಟ್ವಿಟರ್‌ ಕಮ್ಯುನಿಕೇಷನ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ಗಳನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.