Basavalinga Swamiji
Basavalinga Swamiji 
ಸುದ್ದಿಗಳು

ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಮಾಗಡಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ ಪೊಲೀಸರು

Bar & Bench

ರಾಮನಗರ ಜಿಲ್ಲೆಯ ಮಾಗಡಿ ಕಂಚುಗಲ್ ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಗಡಿಯ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಪೊಲೀಸರು ಈಚೆಗೆ 216 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದಾರೆ‌.

ಒಟ್ಟು 72 ಸಾಕ್ಷ್ಯಗಳನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣದ ಆರೋಪಿಗಳಾದ ಮೃತ್ಯುಂಜಯ ಸ್ವಾಮೀಜಿ, ನಾಗಲಾಂಬಿಕೆ ಹಾಗೂ ವಕೀಲ ಮಹದೇವಯ್ಯ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮತ್ತೊಬ್ಬ ಆರೋಪಿ ಸುರೇಶ್ ತಲೆಮರೆಸಿಕೊಂಡಿದ್ದಾರೆ. ವೈಯಕ್ತಿಕ ದ್ವೇಷದಿಂದ ಬಸವಲಿಂಗ ಸ್ವಾಮೀಜಿ ವಿರುದ್ಧ ಸಂಚು ರೂಪಿಸಿ, ಅವರ ಆತ್ಮಹತ್ಯೆಗೆ ಕಾರಣರಾದ ಆರೋಪವನ್ನು ಹೊರಿಸಲಾಗಿದೆ.

ಬಸವಲಿಂಗ ಸ್ವಾಮೀಜಿ ಹಾಗೂ ಆರೋಪಿ ನೀಲಾಂಬಿಕೆ ಅವರಿಗೆ ವರ್ಷದ ಹಿಂದೆ ಪರಿಚಯ ಆಗಿದ್ದು, ಕ್ರಮೇಣ ಸಲುಗೆ ಬೆಳೆದಿತ್ತು. ಕಳೆದ ಫೆಬ್ರುವರಿಯಿಂದ ಈ ಇಬ್ಬರು ನಿರಂತರ ಸಂಪರ್ಕದಲ್ಲಿದ್ದರು. ವಿಡಿಯೊ ಚಾಟ್‌ಗಳ ಮೂಲಕ ಖಾಸಗಿ ಕ್ಷಣಗಳನ್ನೂ ಹಂಚಿಕೊಂಡಿದ್ದರು. ಏಪ್ರಿಲ್‌ನಲ್ಲಿ ಈ ಎಲ್ಲವನ್ನೂ ವಿಡಿಯೊ ಮಾಡಿಕೊಂಡ ನೀಲಾಂಬಿಕೆ ಅದನ್ನು ಮೃತ್ಯುಂಜಯ ಸ್ವಾಮೀಜಿಗೆ ತಲುಪಿಸಿದ್ದಳು. ಸ್ವಾಮೀಜಿ ಅದನ್ನು ವಕೀಲ ಮಹದೇವಯ್ಯರಿಗೆ ತಲುಪಿಸಿ, ಎಡಿಟ್ ಮಾಡಿಸಿ ಸಿ ಡಿ ಮಾಡಿಸಿಕೊಂಡಿದ್ದರು. ಅಲ್ಲಿಂದ ಬಸವಲಿಂಗ ಸ್ವಾಮೀಜಿಗೆ ಬ್ಲಾಕ್‌ಮೇಲ್ ಮಾಡಲಾಗಿತ್ತು. ನಂತರದಲ್ಲಿ ಆ ಸಿ ಡಿಯನ್ನು ಹಲವು ಮುಖಂಡರಿಗೂ ಹಂಚಲಾಗಿತ್ತು. ಇದಕ್ಕೆ ಹೆದರಿ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದರು ಎನ್ನಲಾಗಿದೆ.