ದೆಹಲಿ ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಹತ್ಯೆಗೀಡಾದ 2008ರ ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣದ ಅಪರಾಧಿ ಆರಿಜ್ ಖಾನ್‌ಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಗಲ್ಲುಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ.
ಖಾನ್ ಅಪರಾಧ ಎತ್ತಿ ಹಿಡಿದ ನ್ಯಾಯಮೂರ್ತಿ ಸಿದ್ಧಾರ್ಥ್ ಮೃದುಲ್ ಮತ್ತು ಅಮಿತ್ ಶರ್ಮಾ ಅವರಿದ್ದ ವಿಭಾಗೀಯ ಪೀಠ ಶಿಕ್ಷೆಯನ್ನು ಜೀವಾವಧಿಗೆ ಇಳಿಸುವ ಮೂಲಕ ಆತನ ಮನವಿಯನ್ನು ಭಾಗಶಃ ಪುರಸ್ಕರಿಸಿತು. ಇದು ಅಪರೂಪದಲ್ಲೇ ಅಪರೂಪದ ಪ್ರಕರಣ ಎಂದಿದ್ದ ವಿಚಾರಣಾ ನ್ಯಾಯಾಲಯ ಮಾರ್ಚ್ 2021ರಲ್ಲಿ ಆತನಿಗೆ ಮರಣದಂಡನೆಯ ಗರಿಷ್ಠ ಶಿಕ್ಷೆ ವಿಧಿಸಿತ್ತು.
ಖಾನ್ ಹಾಗೂ ದೆಹಲಿ ಪೊಲೀಸರ ವಾದವನ್ನು ಆಲಿಸಿದ್ದ ಹೈಕೋರ್ಟ್ ಆಗಸ್ಟ್‌ನಲ್ಲಿ ತೀರ್ಪು ಕಾಯ್ದಿರಿಸಿತ್ತು.
ಸೆಪ್ಟೆಂಬರ್ 19, 2008ರಂದು, ಇಂಡಿಯನ್ ಮುಜಾಹಿದ್ದೀನ್‌ಗೆ ಸೇರಿದ ಭಯೋತ್ಪಾದಕನನ್ನು ಬಂಧಿಸಲು ದೆಹಲಿ ಪೊಲೀಸರ ತಂಡ ಬಾಟ್ಲಾ ಹೌಸ್ ಮೇಲೆ ದಾಳಿ ನಡೆಸಿತ್ತು. ಅದಕ್ಕೂ ಒಂದು ವಾರದ ಮೊದಲು ದೆಹಲಿಯ ಹಲವು ಸ್ಥಳಗಳಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರು ಅಲ್ಲಿ ಅಡಗಿದ್ದಾರೆ ಎಂದು ಆರೋಪಿಸಲಾಗಿತ್ತು. ಆ ಸ್ಫೋಟಗಳಲ್ಲಿ ಕನಿಷ್ಠ 30 ಜನ ಸಾವನ್ನಪ್ಪಿದ್ದರು.
ಪ್ರಾಸಿಕ್ಯೂಷನ್ ವಾದದ ಪ್ರಕಾರ , ದೆಹಲಿ ಪೊಲೀಸ್ ತಂಡ ಬಾಟ್ಲಾ ಹೌಸ್ ತಲುಪಿದಾಗ, ಗುಂಡಿನ ಚಕಮಕಿ ನಡೆಯಿತು. ಬಾಟ್ಲಾ ಹೌಸ್‌ನ ಡ್ರಾಯಿಂಗ್ ಕೊಠಡಿಯಲ್ಲಿ ಪೊಲೀಸ್ ಅಧಿಕಾರಿಗಳನ್ನು ಕೂಡಿಹಾಕಿದ ಕಾರಣ ಅವರು ಆತ್ಮರಕ್ಷಣೆಯ ಉದ್ದೇಶದಿಂದ ಗುಂಡು ಹಾರಿಸಬೇಕಾಯಿತು.
ಶೂಟೌಟ್ ಸಂದರ್ಭದಲ್ಲಿ ಮೋಹನ್ ಚಂದ್ ಶರ್ಮಾ ಮಹಾಗೂ ಪೊಲೀಸ್ ಸಿಬ್ಬಂದಿಗೆ ಗುಂಡು ತಗುಲಿದ್ದವು. ಡ್ರಾಯಿಂಗ್ ಕೋಣೆಯಲ್ಲಿದ್ದ ಉಗ್ರವಾದಿಯೊಬ್ಬನಿಗೂ ಇದೇ ವೇಳೆ ಗುಂಡೇಟು ತಗುಲಿತ್ತು. ಆರಿಜ್ ಸೇರಿದಂತೆ ಇಬ್ಬರು ಘಟನೆ ನಡೆದ ಫ್ಲ್ಯಾಟ್‌ನ ಮುಖ್ಯದ್ವಾರದಿಂದ ಪಲಾಯನಾಗೈದಿದ್ದರು. 2009ರಲ್ಲಿ ಘೋಷಿತ ಅಪರಾಧಿ ಎನಿಸಿಕೊಂಡಿದ್ದ ಆರಿಜ್ ಖಾನ್‌ನನ್ನು 2018ರಲ್ಲಿ ಬಂಧಿಸಲಾಗಿತ್ತು.