BBMP and Karnataka HC 
ಸುದ್ದಿಗಳು

ಹೆಚ್ಚುವರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ₹70 ಲಕ್ಷ ಅಭಿವೃದ್ಧಿ ಶುಲ್ಕ ಬೇಡಿಕೆ: ಹೈಕೋರ್ಟ್‌ನಿಂದ ಬಿಬಿಎಂಪಿ ಆದೇಶ ವಜಾ

ಕೆಎಂಸಿ ಕಾಯಿದೆ ಸೆಕ್ಷನ್‌ 505, ಕೆಟಿಸಿಪಿ ಕಾಯಿದೆಯ ಸೆಕ್ಷನ್‌ಗಳಾದ 18, 18ಎ ಮತ್ತು ನಿಯಮಗಳನ್ನು ಒಟ್ಟಾಗಿ ಸೇರಿಸಿ ಓದುವುದರಿಂದ ಬಿಬಿಎಂಪಿ ಅಭಿವೃದ್ಧಿ ಶುಲ್ಕಕ್ಕೆ ಬೇಡಿಕೆ ಇಟ್ಟಿರುವುದು ಕಾನೂನಿಗೆ ವಿರುದ್ಧ ಎಂದ ಪೀಠ.

Siddesh M S

ಶಾಲಾ ಕಟ್ಟಡ ನಿರ್ಮಾಣಕ್ಕೆ ಸುಮಾರು ₹70 ಲಕ್ಷ ಅಭಿವೃದ್ಧಿ ಶುಲ್ಕಕ್ಕೆ ಬೇಡಿಕೆ ಇಟ್ಟಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ವಜಾ ಮಾಡಿದೆ

“ಶುಲ್ಕ ವಿಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದಾದರೆ ಬೇಡಿಕೆ ಇರಿಸುವಂತಿಲ್ಲ. ತೆರಿಗೆ ವಿಧಿಸಲು ಕಾನೂನಿನ ನಿಬಂಧನೆಯಿಲ್ಲ ಎಂದಾದರೆ ತೆರಿಗೆ ವಿಧಿಸುವಂತಿಲ್ಲ. ಇದು ಕಾನೂನು” ಎಂದು ಸುಪ್ರೀಂ ಕೋರ್ಟ್‌ ಹಲವು ತೀರ್ಪುಗಳಲ್ಲಿ ಸ್ಪಷ್ಟಪಡಿಸಿದೆ ಎಂದಿರುವ ಹೈಕೋರ್ಟ್‌ ಬಿಬಿಎಂಪಿ ಕಿವಿ ಹಿಂಡಿದೆ.

ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿರುವ ಗುಡ್‌ ಶೆಫರ್ಡ್‌ ಕಾನ್ವೆಂಟ್‌ ಹಾಲಿ ಇರುವ ಶಾಲೆಯ ಕ್ಯಾಂಪಸ್‌ನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲು ಅನುಮತಿ ಕೋರಿ ಮತ್ತು ಅಭಿವೃದ್ಧಿ ಶುಲ್ಕಕ್ಕೆ ಬೇಡಿಕೆ ಇಟ್ಟಿದ್ದ ಬಿಬಿಎಂಪಿ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ರಜಾಕಾಲೀನ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

“ಅಭಿವೃದ್ಧಿ ಶುಲ್ಕಕ್ಕೆ ಬೇಡಿಕೆ ಇಟ್ಟು 2014ರ ಜುಲೈ 7ರಂದು ಬಿಬಿಎಂಪಿ ಹೊರಡಿಸಿರುವ ಆಕ್ಷೇಪಾರ್ಹವಾದ ಆದೇಶವನ್ನು ವಜಾ ಮಾಡಲಾಗಿದೆ. ಆದೇಶದಲ್ಲಿ ನ್ಯಾಯಾಲಯ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ಬಿಬಿಎಂಪಿಯು ಗುಡ್‌ ಶೆಫರ್ಡ್‌ ಕಾನ್ವೆಂಟ್‌ ಮನವಿಯನ್ನು ಪರಿಗಣಿಸಬೇಕು” ಎಂದು ಪೀಠವು ಹೇಳಿದೆ.

“ಹಾಲಿ ಇರುವ ಕ್ಯಾಂಪಸ್‌ನಲ್ಲಿ ಕಟ್ಟಡ ನಿರ್ಮಿಸಲು ಮತ್ತು ನವೀಕರಣ ಮಾಡಲು ಶಾಲೆಯು ಬಿಬಿಎಂಪಿಗೆ ಅನುಮತಿ ಕೋರಿದೆ. ಕರ್ನಾಟಕ ನಗರ ಮತ್ತು ಗ್ರಾಮೀಣ ಯೋಜನೆ (ಕೆಟಿಪಿಸಿ) ಕಾಯಿದೆ ಸೆಕ್ಷನ್‌ 18ಎ ಅಡಿ ಶಾಲೆಯು ಮನವಿ ಸಲ್ಲಿಸಿಲ್ಲ. ಹೀಗಾಗಿ, ಕೆಎಂಸಿ ಕಾಯಿದೆ ಸೆಕ್ಷನ್‌ 505, ಕೆಟಿಸಿಪಿ ಕಾಯಿದೆಯ ಸೆಕ್ಷನ್‌ಗಳಾದ 18, 18ಎ ಮತ್ತು ನಿಯಮಗಳನ್ನು ಒಟ್ಟಾಗಿ ಸೇರಿಸಿ ಓದುವುದರಿಂದ ಬಿಬಿಎಂಪಿ ಅಭಿವೃದ್ಧಿ ಶುಲ್ಕಕ್ಕೆ ಬೇಡಿಕೆ ಇಟ್ಟಿರುವುದು ಕಾನೂನಿಗೆ ವಿರುದ್ಧವಾಗಿದೆ” ಎಂದು ಪೀಠವು ಹೇಳಿದೆ.

ಪ್ರಕರಣದ ಹಿನ್ನೆಲೆ: 1854ರಲ್ಲಿ ನಿರ್ಮಾಣವಾಗಿರುವ ಗುಡ್‌ ಶೆಫರ್ಡ್‌ ಕಾನ್ವೆಂಟ್‌ ಅನ್ನು ಗುಡ್‌ ಶೆಫರ್ಡ್‌ ಸೊಸೈಟಿ ಮುನ್ನಡೆಸುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುತ್ತಿರುವ ಕಾನ್ವೆಂಟ್‌, ನಗರದ ಹೃದಯ ಭಾಗದಲ್ಲಿ 23 ಎಕರೆ ಜಮೀನು ಹೊಂದಿದೆ. ಇಲ್ಲಿ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್‌ ಮತ್ತು ವಸತಿ ಸೇವೆಯನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ತರಗತಿಗಳ ಕೊರತೆ ಉಂಟಾಗಿದ್ದು, ಇದಕ್ಕಾಗಿ ಹಾಲಿ ಕ್ಯಾಂಪಸ್‌ನಲ್ಲಿ ಹೆಚ್ಚುವರಿಯಾಗಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸಲು ಅನುಮತಿ ಕೋರಿ 2014ರ ಜೂನ್‌ 11ರಲ್ಲಿ ಬಿಬಿಎಂಪಿ ಬೈಲಾದ ಅನ್ವಯ ಅಗತ್ಯ ದಾಖಲೆಗಳು ಮತ್ತು ಪರಿಶೀಲನಾ ಶುಲ್ಕ (ಸ್ಕ್ರೂಟಿನಿ ಫೀ) ಸುಮಾರು ರೂ. 1.64 ಲಕ್ಷ ಒಳಗೊಂಡು ಬಿಬಿಎಂಪಿಗೆ ಕಾನ್ವೆಂಟ್‌ ಮನವಿ ಸಲ್ಲಿಸಿತ್ತು.

ಇದಕ್ಕೆ ಬಿಬಿಎಂಪಿಯು ಹಾಲಿ ಕಟ್ಟಡದಲ್ಲಿ ನಾಲ್ಕು ಅಂತಸ್ತು ನಿರ್ಮಿಸಲು 69,70,520 ರೂಪಾಯಿಗಳನ್ನು ಅಭಿವೃದ್ಧಿ ಶುಲ್ಕವನ್ನಾಗಿ ಪಾವತಿಸಲು ಪೂರ್ವ ಷರತ್ತು ವಿಧಿಸಿತ್ತು. ಇದಕ್ಕೆ ಒಪ್ಪದ ಶಾಲೆಯು ಕಾನೂನಿನ ಯಾವ ನಿಬಂಧನೆಯಡಿ ಬಿಬಿಎಂಪಿಯು ಅಭಿವೃದ್ಧಿ ಶುಲ್ಕ ಪಾವತಿಸಲು ಆದೇಶಿಸಿದೆ ಎಂದು ಪ್ರಶ್ನಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿಯು ಕೆಟಿಸಿಪಿ ಕಾಯಿದೆ ಸೆಕ್ಷನ್‌ 18ಎ ಜೊತೆಗೆ 1993ರ ನವೆಂಬರ್‌ 19ರಂದು ಸರ್ಕಾರ ಮಾಡಿದ್ದ ಆದೇಶವನ್ನು ಆಧರಿಸಿತ್ತು. ಇದನ್ನು ಒಪ್ಪದ ಕಾನ್ವೆಂಟ್‌ ಆಡಳಿತವು ಕೆಟಿಸಿಪಿ ಕಾಯಿದೆ ಸೆಕ್ಷನ್‌ 18ಎ ಅಡಿ ಅಭಿವೃದ್ಧಿ ಶುಲ್ಕಕ್ಕೆ ಬೇಡಿಕೆ ಇಡಲು ಬಿಬಿಎಂಪಿಗೆ ಅಧಿಕಾರವಿಲ್ಲ ಎಂದಿತ್ತು. ಬಳಿಕ, ಬಿಬಿಎಂಪಿಗೆ ಹಲವು ಮನವಿ ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ, ಗುಡ್‌ ಶೆಫರ್ಡ್‌ ಕಾನ್ವೆಂಟ್‌ ನ್ಯಾಯಾಲಯದ ಕದ ತಟ್ಟಿತ್ತು.

ಕಾನ್ವೆಂಟ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಡಿ ಎಲ್‌ ಎನ್‌ ರಾವ್‌ ಅವರು “ಭೂಮಿಯ ಬಳಕೆಯನ್ನು ಬದಲಾಯಿಸಲು ಕೋರಿದಾಗ ಅಥವಾ ಭೂಮಿಯನ್ನು ಮೊದಲ ಬಾರಿಗೆ ಅಭಿವೃದ್ಧಿಪಡಿಸುವಾಗ ಕೆಟಿಸಿಪಿ ಕಾಯಿದೆ ಸೆಕ್ಷನ್‌ಗಳಾದ 18 ಮತ್ತು 18ಎ ಅಡಿ ಅಭಿವೃದ್ಧಿ ಶುಲ್ಕಕ್ಕೆ ಬೇಡಿಕೆ ಇಡಬಹುದು. 100 ವರ್ಷಗಳ ಹಿಂದೆ ಶಾಲೆಯ ಕಟ್ಟಡ ನಿರ್ಮಿಸಲಾಗಿದ್ದು, ಆಗಲೇ ಅಗತ್ಯವಾದ ಶುಲ್ಕಗಳನ್ನು ಪಾವತಿಸಲಾಗಿದೆ. ಈಗ ಹೆಚ್ಚುವರಿಯಾಗಿ ಮತ್ತು ನವೀಕರಣಕ್ಕೆ ಮನವಿ ಮಾಡಲಾಗಿದೆ. ಹೊಸ ಕಟ್ಟಡ ನಿರ್ಮಾಣ ಮಾಡುತ್ತಿಲ್ಲ. ಈಗ ಶಾಲೆಯ 23 ಎಕರೆ ಭೂಮಿಗೂ ಅಭಿವೃದ್ಧಿ ಶುಲ್ಕ ಪಾವತಿಸಲು ಬಿಬಿಎಂಪಿ ಆದೇಶಿಸಿದೆ” ಎಂದು ಆಕ್ಷೇಪಿಸಿದರು.

ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲ ಕೆ ಎನ್‌ ಪುಟ್ಟೇಗೌಡ ಅವರು “ಕೆಟಿಸಿಪಿ ಕಾಯಿದೆ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಅರ್ಜಿದಾರರು ಯಾವುದೇ ತೆರನಾದ ಪರವಾನಗಿ ಅಥವಾ ಅಭಿವೃದ್ಧಿ ಶುಲ್ಕ ಪಾವತಿಸಿಲ್ಲ. ಹಳೆಯ ಕಟ್ಟಡ ಎಂದು ಹೇಳಿಕೊಂಡು ಯಾವುದೇ ತೆರನಾದ ಶಾಸನಬದ್ಧ ಶುಲ್ಕಗಳನ್ನೂ ಪಾವತಿ ಮಾಡಿಲ್ಲ. ಕೆಟಿಸಿಪಿ ಕಾಯಿದೆ ಸೆಕ್ಷನ್‌ 18ಎ ಅಡಿ ಅಭಿವೃದ್ಧಿ ಶುಲ್ಕಕ್ಕೆ ಬೇಡಿಕೆ ಇಡಲು ಬಿಬಿಎಂಪಿಗೆ ಅಧಿಕಾರವಿದೆ” ಎಂದು ಆದೇಶ ಸಮರ್ಥಿಸಿದ್ದರು.

Good Shepherd Convent V. State of Karnataka.pdf
Preview