BBMP and Karnataka HC 
ಸುದ್ದಿಗಳು

ಬಿಬಿಎಂಪಿ ಚುನಾವಣೆ: ಮೀಸಲಾತಿ ರದ್ದು ಕೋರಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ, ಆಯೋಗಕ್ಕೆ ಹೈಕೋರ್ಟ್‌ ಆದೇಶ

ಬಿಟಿಎಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಾರ್ಡ್‌ಗಳಲ್ಲಿ ಪರಿಶಿಷ್ಟ ಜಾತಿಗೆ ಸೂಕ್ತ ಮೀಸಲು ಒದಗಿಸಿಲ್ಲ. ಒಂದು ಕ್ಷೇತ್ರದಲ್ಲಿ ಸಾಮಾನ್ಯ ವರ್ಗಕ್ಕೆ, ಉಳಿದ ವಾರ್ಡ್‌ಗಳಲ್ಲಿ ಮಹಿಳೆಗೆಯರಿಗೆ ಮೀಸಲು ಕಲ್ಪಿಸಲಾಗಿದೆ ಎಂದು ಆಕ್ಷೇಪ.

Bar & Bench

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಅಧಿಸೂಚನೆ ರದ್ದು ಕೋರಿ ಸಲ್ಲಿಕೆಯಾಗಿರುವ ತಕರಾರು ಅರ್ಜಿಗೆ ಸೆಪ್ಟೆಂಬರ್‌ 12ರೊಳಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಸೂಚಿಸಿದೆ.

ಈಜಿಪುರ ನಿವಾಸಿ ಕೆ ಮಹದೇವ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಮತ್ತು ವಕೀಲ ಎಂ ಜಯ ಮೊವಿಲ್ ಅವರು “ಬಿಬಿಎಂಪಿ ವಾರ್ಡ್‌ವಾರು ಮೀಸಲಾತಿ ನಿಗದಿಯಲ್ಲಿ ನಿಯಮ ಪಾಲನೆಯಾಗಿಲ್ಲ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ಭಕ್ತವತ್ಸಲ ಸಮಿತಿ ನೀಡಿರುವ ವರದಿ ಆಧರಿಸಿ ಮೀಸಲಾತಿ ಕಲ್ಪಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ, ಕೃಷ್ಣಮೂರ್ತಿ ಹಾಗೂ ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿರುವ ಮೂರು ಹಂತದ ಪರಿಶೀಲನೆ (ಟ್ರಿಪಲ್ ಟೆಸ್ಟ್) ಅನ್ನು ಭಕ್ತವತ್ಸಲ ಸಮಿತಿಯೇ ಅನ್ವಯಿಸಿಕೊಂಡಿಲ್ಲ. ಸರ್ಕಾರ ಸಹ ಮೀಸಲಾತಿ ಕಲ್ಪಿಸುವಾಗ ತ್ರಿವಳಿ ಪರೀಕ್ಷೆ ಅನ್ನು ಪರಿಗಣಿಸಿಲ್ಲ” ಎಂದು ಪೀಠಕ್ಕೆ ವಿವರಿಸಿದರು.

“ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ರಾಜಕೀಯ ಮೀಸಲಾತಿಗೆ ಮಾನದಂಡವೇ ಬೇರೆ ಇದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ನೀಡುವಂತೆ ರಾಜಕೀಯ ಮೀಸಲಾತಿ ನೀಡಲು ಸಾಧ್ಯವಿಲ್ಲ. ಯಾವ ಜಾತಿಗಳಿಗೆ ರಾಜಕೀಯ ಪ್ರಾತಿನಿಧ್ಯವಿಲ್ಲವೋ ಅಂತಹ ಜಾತಿಗಳಿಗೆ ಮೀಸಲಾತಿ ಕಲ್ಪಿಸಬೇಕಾಗುತ್ತದೆ. ಆದರೆ, ಬಿಬಿಎಂಪಿ ವಾರ್ಡ್ ಮೀಸಲಾತಿ ನಿಗದಿಯಲ್ಲಿ ನಿಯಮ ಪಾಲನೆಯಾಗಿಲ್ಲ. ಭಕ್ತವತ್ಸಲ ಸಮಿತಿ ಸಹ ಸೂಕ್ತ ವಿಧಾನ ಅನುಸರಿಸಿಲ್ಲ. ಇದುವರೆಗೆ ಯಾವ ಯಾವ ಜಾತಿಗಳಿಗೆ ಪ್ರಾತಿನಿಧ್ಯ ಕಲ್ಪಿಸಲಾಗಿದೆ ಎಂಬ ಪಟ್ಟಿ ಒದಗಿಸಿಲ್ಲ. ಆದ್ದರಿಂದ, ಬಿಬಿಎಂಪಿ ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು” ಎಂದು ಕೋರಿದರು.

ಕೆಲವೊತ್ತು ವಾದ ಆಲಿಸಿದ ಪೀಠವು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್‌ 12ಕ್ಕೆ ಮುಂದೂಡಿತಲ್ಲದೆ, ಅಷ್ಟರೊಳಗೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಸೂಚಿಸಿತು.

ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಈಜಿಪುರ ವಾರ್ಡ್‌ನಲ್ಲಿ ಸಾಮಾನ್ಯ ಮಹಿಳೆಗೆ ಮೀಸಲು ಕಲ್ಪಿಸಲಾಗಿದೆ. ಆ ಮೂಲಕ ಸರ್ಕಾರ ಗಂಭೀರ ಲೋಪ ಎಸಗಿದೆ. ವಾಸ್ತವದಲ್ಲಿ ಈಜಿಪುರ ವಾರ್ಡ್ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಾರ್ಡ್ ಆಗಿದೆ. ಈ ವಾರ್ಡ್‌ನಲ್ಲಿ 6,717 ಜನರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಹೀಗಿದ್ದರೂ ಸಾಮಾನ್ಯ ಮಹಿಳೆಗೆ ಮೀಸಲು ಕೊಡಲಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಬಿಟಿಎಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಾರ್ಡ್‌ಗಳಲ್ಲಿ ಪರಿಶಿಷ್ಟ ಜಾತಿಗೆ ಸೂಕ್ತ ಮೀಸಲು ಒದಗಿಸಿಲ್ಲ. ಒಂದು ಕ್ಷೇತ್ರದಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲು ನೀಡಲಾಗಿದ್ದು, ಉಳಿದ ವಾರ್ಡ್‌ಗಳಲ್ಲಿ ಮಹಿಳೆಗೆಯರಿಗೆ ಮೀಸಲು ಕಲ್ಪಿಸಲಾಗಿದೆ. ಆ ಮೂಲಕ ಮಹಿಳೆ-ಪುರುಷ ವರ್ಗದಲ್ಲಿ ಸಮತೋಲನ ಕಾಯ್ದುಕೊಂಡಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಈಜಿಪುರದಲ್ಲಿ ಮಾತ್ರವಲ್ಲದೆ ಬಿಬಿಎಂಪಿಯ ಹಲವು ವಾರ್ಡ್‌ಗಳಲ್ಲಿ ಸಹ ಪುರುಷ ಹಾಗೂ ಮಹಿಳಾ ವರ್ಗದ ಮೀಸಲಾತಿಯಲ್ಲಿ ಸಮತೋಲನ ಸಾಧಿಸಿಲ್ಲ. ಆದ್ದರಿಂದ ಬಿಬಿಎಂಪಿ ವಾರ್ಡ್‌ವಾರು ಮೀಸಲಾತಿ ಅಂತಿಮಗೊಳಿಸಿ ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸಬೇಕು. ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ ಪರಿಗಣಿಸಿ ಮೀಸಲಾತಿ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು. ಅರ್ಜಿ ಇತ್ಯರ್ಥವಾಗುವವರೆಗೂ ಮೀಸಲು ಅಧಿಸೂಚನೆಗೆ ತಡೆಯಾಜ್ಜೆ ನೀಡಿ ಮಧ್ಯಂತರ ಆದೇಶ ಹೊರಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.