BBMP and Karnataka HC 
ಸುದ್ದಿಗಳು

ಬಿಬಿಎಂಪಿ ಚುನಾವಣೆ ನಡೆಸಲು ಕಾಲಾವಕಾಶ ವಿಸ್ತರಣೆ ಕೋರಿಕೆ: ಜನವರಿ 9ಕ್ಕೆ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

ರಾಜ್ಯ ಚುನಾವಣಾ ಆಯೋಗದ ಮೆಮೊ ಮತ್ತು ರಾಜ್ಯ ಸರ್ಕಾರದ ಅಫಿಡವಿಟ್‌ ಕುರಿತು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಎಸ್‌ ಅಬ್ದುಲ್‌ ನಜೀರ್‌ ಮತ್ತು ಜೆ ಬಿ ಪರ್ದಿವಾಲಾ ಅವರ ನೇತೃತ್ವದ ವಿಭಾಗೀಯ ಪೀಠವು ಗುರುವಾರ ವಿಚಾರಣೆ ನಡೆಸಲಿದೆ.

Bar & Bench

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಸಂಬಂಧಿಸಿದ ಅರ್ಜಿ ವಿಚಾರಣೆಯು ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿರುವುದರಿಂದ ಚುನಾವಣೆ ನಡೆಸಲು ಮೂರು ತಿಂಗಳ ಕಾಲಾವಕಾಶ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಜನವರಿ 9ಕ್ಕೆ ಮುಂದೂಡಿದೆ.

ಬಿಬಿಎಂಪಿಯ 243 ವಾರ್ಡ್‌ಗಳಿಗೆ ನವೆಂಬರ್ 30ರೊಳಗೆ ಮೀಸಲಾತಿ ನಿಗದಿಪಡಿಸಬೇಕು ಹಾಗೂ ಡಿಸೆಂಬರ್ 31ರೊಳಗೆ ಚುನಾವಣೆ ನಡೆಸಬೇಕು ಎಂದು 2022ರ ಸೆಪ್ಟೆಂಬರ್‌ 30ರಂದು ಹೈಕೋರ್ಟ್ ಆದೇಶ ನೀಡಿತ್ತು. ಆದರೆ, ಈ ಆದೇಶ ಪಾಲನೆಗೆ ಮೂರು ತಿಂಗಳ ಕಾಲಾವಧಿ ವಿಸ್ತರಿಸಲು ಕೋರಿ ನಗರಾಭಿವೃದ್ಧಿ ಇಲಾಖೆ ಇತ್ತೀಚೆಗೆ ಮನವಿ ಸಲ್ಲಿಸಿದ್ದು, ಅದರ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠವು ಬುಧವಾರ ನಡೆಸಿತು.

ರಾಜ್ಯ ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು “ಬಿಬಿಎಂಪಿಗೆ ಚುನಾವಣೆ ನಡೆಸುವುದರ ಕುರಿತು ಈ ಹಿಂದೆ ಸರ್ವೋಚ್ಚ ನ್ಯಾಯಾಲಯವು ಆದೇಶ ಮಾಡಿರುವುದಕ್ಕೆ ಸಂಬಂಧಿಸಿದಂತೆ ಆಯೋಗದ ಪರವಾಗಿ ಮೆಮೊ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ ಆದೇಶ ಪಾಲನೆಗೆ ಸಂಬಂಧಿಸಿದಂತೆ ಅಫಿಡವಿಟ್‌ ಸಲ್ಲಿಸಿದೆ. ಈ ಸಂಬಂಧದ ಅರ್ಜಿ ವಿಚಾರಣೆಯು ನಾಳೆ (ಡಿ.15) ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಹೀಗಾಗಿ, ಅರ್ಜಿ ವಿಚಾರಣೆ ಮುಂದೂಡಬೇಕು” ಎಂದು ಕೋರಿದರು.

ಇದನ್ನು ಪರಿಗಣಿಸಿ ನ್ಯಾಯಾಲಯವು ರಾಜ್ಯ ಸರ್ಕಾರದ ಅರ್ಜಿಯ ವಿಚಾರಣೆಯನ್ನು ಜನವರಿ 9ಕ್ಕೆ ಮುಂದೂಡಿತು.

ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ 2022ರ ನವೆಂಬರ್‌ 30ರೊಳಗೆ ಹೊಸದಾಗಿ ಮೀಸಲು ಪಟ್ಟಿ ಪ್ರಕಟಿಸಲು ರಾಜ್ಯ ಸರ್ಕಾರಕ್ಕೆ ಸೆಪ್ಟೆಂಬರ್‌ 30ರಂದು ಹೈಕೋರ್ಟ್ ಸೂಚಿಸಿತ್ತು. ಆದರೆ, ಸರ್ಕಾರ ಚುನಾವಣೆ ನಡೆಸಲು ಸಮಯ ವಿಸ್ತರಿಸಲು ಕೋರಿ ಸಕಾರಣವಿಲ್ಲದೆ ಅರ್ಜಿ ಸಲ್ಲಿಸಿರುವುದು ನ್ಯಾಯಸಮ್ಮತವಲ್ಲ. ವಿಧಾನಸಭೆ ಚುನಾವಣೆ ಬರುವುದರಿಂದ 2023ರ ಮೇ ನಂತರ ಚುನಾವಣೆ ನಡೆಸುವ ಉದ್ದೇಶ ಸರ್ಕಾರದ್ದಾಗಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ರಾಜ್ಯ ಚುನಾವಣಾ ಆಯೋಗ ಕೋರಿದೆ.