BBMP
BBMP 
ಸುದ್ದಿಗಳು

[ಬಿಬಿಎಂಪಿ ಚುನಾವಣೆ] ನಿಯಮದ ಪ್ರಕಾರ ಮೀಸಲಾತಿ ಹಂಚಿಕೆ: ರಾಜ್ಯ ಸರ್ಕಾರದ ಸಮರ್ಥನೆ

Bar & Bench

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗಾಗಿ ಸಿದ್ಧಪಡಿಸಲಾಗಿರುವ 243 ವಾರ್ಡ್‌ಗಳ ಮೀಸಲಾತಿಯಲ್ಲಿ ನಿಯಮ ಪಾಲನೆಯಾಗಿಲ್ಲ ಎಂಬ ಆರೋಪಗಳನ್ನು ತಳ್ಳಿಹಾಕಿರುವ ರಾಜ್ಯ ಸರ್ಕಾರವು ವಾರ್ಡ್‌ವಾರು ಮೀಸಲಾತಿ ಅಧಿಸೂಚನೆ ರದ್ದುಕೋರಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಜಾ ಮಾಡುವಂತೆ ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ಮನವಿ ಮಾಡಿದೆ.

ಮೀಸಲಾತಿ ಅಧಿಸೂಚನೆ ಪ್ರಶ್ನಿಸಿ ಈಜಿಪುರ ನಿವಾಸಿ ಕೆ ಮಹದೇವ, ಕಮ್ಮನಹಳ್ಳಿಯ ಪಳನಿ ದಯಾಳನ್ ಮತ್ತಿತರರು ಸಲ್ಲಿಸಿರುವ 10 ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಪೀಠ ಬುಧವಾರ ವಿಚಾರಣೆ ನಡೆಸಿತು. ರಾಜ್ಯ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರು ತಕರಾರು ಅರ್ಜಿಗಳಿಗೆ ಸಂಬಂಧಿಸಿದಂತೆ ಲಿಖಿತ ಆಕ್ಷೇಪಣೆ ಸಲ್ಲಿಸಿದರು.

ಸರ್ಕಾರದ ವಾದವೇನು?

2011ರ ಜನಗಣತಿ ಆಧರಿಸಿಯೇ ಎಲ್ಲ ವರ್ಗಗಳಿಗೆ ಮೀಸಲಾತಿ ಕಲ್ಪಿಸಲಾಗಿದೆ. ಅದರ ಪ್ರಕಾರ ಬಿಬಿಎಂಪಿ ವ್ಯಾಪ್ತಿಯ ಜನಸಂಖ್ಯೆ 84,49,004 ಇದೆ. ಪರಿಶಿಷ್ಟ ಜಾತಿ (ಎಸ್‌ಸಿ) ಜನಸಂಖ್ಯೆ 9,61,549 ಇದ್ದರೆ, ಪರಿಶಿಷ್ಟ ವರ್ಗದವರು (ಎಸ್‌ಟಿ) 1,55,080 ಜನರಿದ್ದಾರೆ. ಈ ಜನಸಂಖ್ಯೆಗೆ ಅನುಗುಣವಾಗಿ 28 ವಾರ್ಡ್‌ಗಳನ್ನು ಪರಿಶಿಷ್ಟ ಜಾತಿ ಹಾಗೂ 4 ವಾರ್ಡ್‌ಗಳನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಲಾಗಿದೆ. ಎಸ್‌ಸಿ ಮೀಸಲಿರುವ 28 ವಾರ್ಡ್‌ಗಳಲ್ಲಿ ಶೇ.50 (14) ಎಸ್‌ಸಿ ಮಹಿಳೆ ಹಾಗೂ ಎಸ್‌ಟಿ ಮೀಸಲಿರುವ 4 ರಲ್ಲಿ 2 ವಾರ್ಡ್ ಎಸ್‌ಟಿ ಮಹಿಳೆಗೆ ಮೀಸಲಿರಿಸಲಾಗಿದೆ ಎಂದು ರಾಜ್ಯ ಸರ್ಕಾರದ ಆಕ್ಷೇಪಣೆಯಲ್ಲಿ ವಿವರಿಸಲಾಗಿದೆ.

ಬಿಬಿಎಂಪಿ ಕಾಯಿದೆಯ ಸೆಕ್ಷನ್ 7 ಮತ್ತು 8ರ ಪ್ರಕಾರ ಒಟ್ಟು ಸ್ಥಾನಗಳ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಮೀಸಲಾತಿಯನ್ನು ಹಿಂದುಳಿದ ವರ್ಗಗಳಿಗೆ ನೀಡಬಾರದು. ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳಿಗೆ ಕಲ್ಪಿಸುವ ಮೀಸಲಾತಿ ಒಟ್ಟು ಸ್ಥಾನಗಳ ಶೇ.50 ಮೀರಿರಬಾರದು. ಈ ಸೂತ್ರವನ್ನೇ ಅನುಸರಿಸಲಾಗಿದೆ. ಹಿಂದುಳಿದ ವರ್ಗಗಳಿಗೆ ಕಲ್ಪಿಸಿರುವ ಮೂರನೇ ಒಂದು ಭಾಗದ ಮೀಸಲಾತಿಯಲ್ಲಿ ಶೇ.80 ಹಿಂದುಳಿದ ವರ್ಗಗಳು-ಎ ಹಾಗೂ ಶೇ.20 ಹಿಂದುಳಿದ ವರ್ಗಗಳು-ಬಿಗೆ ಮೀಸಲಾತಿ ನೀಡಲಾಗಿದ್ದು, ನಿಯಮಗಳ ಪ್ರಕಾರವೇ ಮೀಸಲಾತಿ ಕಲ್ಪಿಸಲಾಗಿದೆ. ಆದ್ದರಿಂದ, ಅರ್ಜಿ ವಜಾಗೊಳಿಸಬೇಕೆಂದು ಆಕ್ಷೇಪಣೆಯಲ್ಲಿ ಸರ್ಕಾರ ಮನವಿ ಮಾಡಿದೆ.

ಮತದಾರರ ಪಟ್ಟಿ ಸೆ.29ಕ್ಕೆ:

ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು ಬಿಬಿಎಂಪಿಯ 243 ವಾರ್ಡ್‌ವಾರು ಮತದಾರರ ಅಂತಿಮ ಪಟ್ಟಿ ಸಿದ್ಧವಾಗಿದ್ದು, ಇದೇ 29ರಂದು ಸಾರ್ವಜನಿಕವಾಗಿ ಪ್ರಕಟಿಸಲಾಗುವುದು ಎಂದು ಪೀಠಕ್ಕೆ ತಿಳಿಸಿದರು. ಅದನ್ನು ಪರಿಗಣಿಸಿದ ನ್ಯಾಯಾಲಯವು ವಿಚಾರಣೆಯನ್ನು ಸೆಪ್ಟೆಂಬರ್‌ 27ಕ್ಕೆ ಮುಂದೂಡಿತು.

ಮಹಿಳಾ ಮೀಸಲಾತಿ ಹಿಂದಿನ ತರ್ಕವೇನು?

ವಿಚಾರಣೆ ವೇಳೆ ಪೀಠವು ಒಂದೇ ಕ್ಷೇತ್ರದ ಎಲ್ಲ ವಾರ್ಡ್‌ಗಳನ್ನು ಮಹಿಳೆಯರಿಗೆ ಮೀಸಲಿರಿಸಬಹುದೇ, ಇಂತಹ ಮೀಸಲಾತಿ ನಿಗದಿಯ ಹಿಂದಿನ ತರ್ಕವೇನು ಎಂದು ಸರ್ಕಾರವನ್ನು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರು ಮೀಸಲು ನಿಗದಿಯಲ್ಲಿ ಕಾನೂನುಬದ್ಧವಾದ ಎಲ್ಲ ಪ್ರಕ್ರಿಯೆ ಮತ್ತು ನಿಗದಿಪಡಿಸಲಾದ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಲಾಗಿದೆ. ಮಹಿಳಾ ಮೀಸಲಾತಿಯಲ್ಲೂ ಕಾನೂನು ಬದ್ಧತೆಯನ್ನು ಕಾಪಾಡಿಕೊಳ್ಳಲಾಗಿದ್ದು, ಯಾದೃಚ್ಛಿಕ (ರ‍್ಯಾಂಡಮ್) ಆಧಾರದಲ್ಲಿ ಮೀಸಲು ನಿಗದಿಪಡಿಸಲಾಗಿದೆ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರಾದ ಸಂದೀಪ್ ಪಾಟೀಲ್ ಮತ್ತು ಎಂ ಜಯಮೊವಿಲ್ ಅವರು “ಈ ರೀತಿ ಮಹಿಳಾ ಮೀಸಲಾತಿ ಕಲ್ಪಿಸಲು ಅವಕಾಶವಿಲ್ಲ. ಯಾದೃಚ್ಛಿಕವಾಗಿ ಮೀಸಲು ಕಲ್ಪಿಸಿರುವ ಸರ್ಕಾರದ ಕ್ರಮವೇ ದುರುದ್ದೇಶದಿಂದ ಕೂಡಿದೆ. ಮಹಿಳೆಯರಿಗೆ ಮೀಸಲು ಕಲ್ಪಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಒಂದೇ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡ್‌ಗಳಲ್ಲೂ ಮೀಸಲಾತಿ ಕಲ್ಪಿಸಿರುವುದು ಸರಿಯಲ್ಲ. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಸಮನಾಗಿ ಮೀಸಲಾತಿ ಕಲ್ಪಿಸಬೇಕಿತ್ತು. ಎಲ್ಲಿ ಮಹಿಳೆಯರ ಜನಸಂಖ್ಯೆ ಹೆಚ್ಚಿರುತ್ತದೆಯೋ ಅಲ್ಲಿ ಮಹಿಳೆಯರಿಗೆ ಮೀಸಲು ಕಲ್ಪಿಸಬಹುದಾಗಿದೆ” ಎಂದರು. ಆಗ ಪೀಠವು ಈ ಕುರಿತು ಮುಂದಿನ ವಿಚಾರಣೆ ವೇಳೆ ವಾದ ಮಂಡಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿತು.