ಬೆಂಗಳೂರಿನ ಪಟ್ಟಂದೂರು ಅಗ್ರಹಾರ ಕೆರೆಯ ಬಫರ್ ವಲಯದಲ್ಲಿ ಬಿಬಿಎಂಪಿ ಅಕ್ರಮವಾಗಿ ರಸ್ತೆ ನಿರ್ಮಿಸುತ್ತಿರುವುದಾಗಿ ತಿಳಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಪ್ರಕರಣ ಸಂಬಂಧ ಸಾಮಾಜಿಕ ಕಾರ್ಯಕರ್ತ ಅನಿರುದ್ಧನ್ ಸಂದೀಪ್ ವಿರುದ್ಧ ದಾಖಲಿಸಿದ್ದ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ಬುಧವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಅನಿರುದ್ಧನ್ ಸಂದೀಪ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
ಪ್ರತಿವಾದಿಗಳಾದ ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ಬಿಬಿಎಪಿ ಮಹದೇವಪುರ ವಲಯದ ಕಾರ್ಯಕಾರಿ ಎಂಜಿನಿಯರ್‌ಗೆ (ರಸ್ತೆ ಮತ್ತು ಮೂಲ ಸೌಕರ್ಯ) ಪೀಠವು ನೋಟಿಸ್ ಜಾರಿಗೊಳಿಸಿತು.
ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್ 153 ಅಡಿಯಲ್ಲಿ ಗಲಭೆಗೆ ಪ್ರಚೋದನೆ ನೀಡಿದ ಮತ್ತು ಸೆಕ್ಷನ್ 186ರ ಅಡಿಯಲ್ಲಿ ಸಾರ್ವಜನಿಕ ಅಧಿಕಾರಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ ಆರೋಪ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ, ಅರ್ಜಿದಾರರ ವಿರುದ್ಧದ ಆರೋಪಗಳಿಗೆ ಈ ಎರಡೂ ಸೆಕ್ಷನ್ ಅನ್ವಯವಾಗುವುದಿಲ್ಲ. ಆದ್ದರಿಂದ ಎಫ್‌ಐಆರ್‌ಗೆ ಹಾಗೂ ಪ್ರಕರಣ ಕುರಿತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ವಿಚಾರಣೆಗೆ ಮಧ್ಯಂತರ ತಡೆ ನೀಡಲಾಗುತ್ತಿದೆ ಎಂದು ತಿಳಿಸಿದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿತು.
ಪಟ್ಟಂದೂರು ಅಗ್ರಹಾರ ಕೆರೆಯ ಬಫರ್ ವಲಯದಲ್ಲಿ ಬಿಬಿಎಂಪಿ ಅಕ್ರಮವಾಗಿ ರಸ್ತೆ ನಿರ್ಮಿಸುತ್ತಿರುವುದಾಗಿ ಅರ್ಜಿದಾರ ಅನಿರುದ್ಧನ್ ಸಂದೀಪ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಇದನ್ನು ಆಕ್ಷೇಪಿಸಿದ್ದ ಬಿಬಿಎಂಪಿ ಮದೇವಪುರ ವಲಯದ ಕಾರ್ಯಕಾರಿ ಎಂಜಿನಿಯರ್ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದನ್ನು ಆಧರಿಸಿ ಎಫ್‌ಐಆರ್ ದಾಖಲಿಸಲಾಗಿತ್ತು.
ರಸ್ತೆ ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ಯಾವುದೇ ಕೆರೆಯಿಲ್ಲ. ಆದರೂ ಅಲ್ಲಿ ಕೆರೆಯಿದೆ ಹಾಗೂ ಆ ಜಾಗದಲ್ಲಿ ಬಿಬಿಎಂಪಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡುತ್ತಿದೆ ಎಂದು ಅರ್ಜಿದಾರರು ಸುಳ್ಳು ಸಂದೇಶ ಹರಡಿದ್ದಾರೆ. ಆ ಮೂಲಕ ಗಲಭೆ ಸೃಷ್ಟಿಗೆ ಪ್ರಚೋದಿಸಿದ್ದಾರೆ ಹಾಗೂ ಸರ್ಕಾರಿ ಅಧಿಕಾರಿಯ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.