ಬೈಜುಸ್ 
ಸುದ್ದಿಗಳು

ಸಂದಾಯವಾಗದ 158 ಕೋಟಿ ರೂ: ಬೈಜೂಸ್‌ ವಿರುದ್ಧ ಬೆಂಗಳೂರು ಎನ್‌ಸಿಎಲ್‌ಟಿಯಲ್ಲಿ ದಿವಾಳಿ ಅರ್ಜಿ ಸಲ್ಲಿಸಿದ ಬಿಸಿಸಿಐ

ಭಾರತೀಯ ಕ್ರಿಕೆಟ್ ತಂಡದ ಜರ್ಸಿ ಪ್ರಾಯೋಜಕತ್ವ ನೀಡುವ ಒಪ್ಪಂದದಂತೆ ಬಿಸಿಸಿಐಗೆ ನೀಡಬೇಕಿದ್ದ ಮೊತ್ತ ಪಾವತಿಸಲು ಬೈಜೂಸ್‌ ವಿಫಲವಾದ ಹಿನ್ನೆಲೆಯಲ್ಲಿ ಬಿಸಿಸಿಐ ಬೆಂಗಳೂರಿನ ಎನ್‌ಸಿಎಲ್‌ಟಿಗೆ ಅರ್ಜಿ ಸಲ್ಲಿಸಿದೆ.

Bar & Bench

ಪ್ರಾಯೋಜಕತ್ವ ಒಪ್ಪಂದದಂತೆ ತನಗೆ 158 ಕೋಟಿ ರೂ.ಗಳನ್ನು ಪಾವತಿಸಲು ವಿಫಲವಾದ ಬೈಜೂಸ್‌ ಶೈಕ್ಷಣಿಕ ತಂತ್ರಜ್ಞಾನ ಕಂಪನಿ ವಿರುದ್ಧ ಕಾರ್ಪೊರೇಟ್ ದಿವಾಳಿತನ ಪ್ರಕ್ರಿಯೆ ಆರಂಭಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬೆಂಗಳೂರಿನ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ (ಎನ್‌ಸಿಎಲ್‌ಟಿ) ಮನವಿ ಸಲ್ಲಿಸಿದೆ.

ನವೆಂಬರ್ 28 ರಂದು ನ್ಯಾಯಾಂಗ ಸದಸ್ಯ ಕೆ ಬಿಶ್ವಾಲ್ ಮತ್ತು ತಾಂತ್ರಿಕ ಸದಸ್ಯ ಮನೋಜ್ ಕುಮಾರ್ ದುಬೆ ಅವರಿದ್ದ ಪೀಠ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಜೂಸ್‌ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

ಟಿಡಿಎಸ್ (ಮೂಲದಲ್ಲಿ ತೆರಿಗೆ ಕಡಿತ) ಮೊತ್ತ ಹೊರತುಪಡಿಸಿ 158 ಕೋಟಿ ರೂ.ಗಳನ್ನು ಪಾವತಿಸುವ ಬಗ್ಗೆ ಬೈಜೂಸ್‌ಗೆ ಈ ವರ್ಷದ ಜನವರಿ 6 ರಂದು ನೋಟಿಸ್ ಕಳುಹಿಸಲಾಗಿದೆ ಎಂದು ನ್ಯಾಯಮಂಡಳಿಗೆ ಬಿಸಿಸಿಐ ತಿಳಿಸಿತು. ಈ ಹಿನ್ನೆಲೆಯಲ್ಲಿ ಬೈಜುಸ್‌ಗೆ ನೋಟಿಸ್‌ ನೀಡಿದ ನ್ಯಾಯಮಂಡಳಿ ಇನ್ನೆರಡು ವಾರದಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಕಂಪೆನಿಗೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್‌ 22ರಂದು ನಡೆಯಲಿದೆ.

ವರದಿಗಳ ಪ್ರಕಾರ, ಭಾರತೀಯ ಕ್ರಿಕೆಟ್ ತಂಡದ ಜರ್ಸಿಗಳನ್ನು ಪ್ರಾಯೋಜಿಸುವ ಒಪ್ಪಂದಕ್ಕೆ ಸಂಬಂಧಿಸಿದಂತೆ ಬೈಜೂಸ್‌ ಬಿಸಿಸಿಐಗೆ ಬಾಕಿ ಮೊತ್ತ ಪಾವತಿಸಿರಲಿಲ್ಲ.

ಮೊಬೈಲ್ ಫೋನ್ ತಯಾರಕ ಕಂಪೆನಿ ಒಪ್ಪೋದಿಂದ ಕ್ರಿಕೆಟ್ ತಂಡದ ಜರ್ಸಿಗಳನ್ನು ಪ್ರಾಯೋಜಿಸುವ ಜವಾಬ್ದಾರಿಯನ್ನು ಹಿಂಪಡೆದಿದ್ದ ಬಿಸಿಸಿಐ ಬೈಜೂಸ್‌ ಜೊತೆ 2019ರಲ್ಲಿ ಪ್ರಾಯೋಜಕತ್ವ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದ 2022ರಲ್ಲೇ ಕೊನೆಗೊಂಡರೂ ಅದನ್ನು 2023 ಕ್ಕೆ ವಿಸ್ತರಿಸಲಾಯಿತು.

ಬಿಸಿಸಿಐ ಮಾತ್ರವಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ವಿಶ್ವ ಫುಟ್‌ಬಾಲ್‌ ಸಂಸ್ಥೆ (ಫಿಫಾ) ಜೊತೆಗೂ ತಾನು ಪ್ರಾಯೋಜಕತ್ವ ಒಪ್ಪಂದ ನವೀಕರಿಸುವುದಿಲ್ಲ ಎಂದು ಹಲವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದ ಬೈಜೂಸ್‌ ಕಳೆದ ಜನವರಿಯಲ್ಲಿ ಘೋಷಿಸಿತ್ತು.

ತೀರಾ ಈಚೆಗೆ ಎನ್‌ಸಿಎಲ್‌ಟಿಯಲ್ಲಿರುವ ದಿವಾಳಿತನ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಬೈಜೂಸ್ ಬಿಸಿಸಿಐನೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿತ್ತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

BCCI v. Think & Learn Pvt. Ltd.pdf
Preview