Justice Muhamed Mustaque and BCI
Justice Muhamed Mustaque and BCI 
ಸುದ್ದಿಗಳು

ಕಾನೂನು ಶಿಕ್ಷಣದ ಬಗ್ಗೆ ಕೇರಳ ಹೈಕೋರ್ಟ್‌ ನ್ಯಾಯಮೂರ್ತಿ ಮುಹಮ್ಮದ್‌ ಮುಷ್ತಾಕ್‌ ಅವರು ನೀಡಿದ ಹೇಳಿಕೆಗೆ ಬಿಸಿಐ ಖಂಡನೆ

Bar & Bench

ಕಾನೂನು ಶಾಲೆಗಳ ಪಠ್ಯಕ್ರಮವನ್ನು ವಕೀಲರ ಪರಿಷತ್‌ ಸದಸ್ಯರು ರೂಪಿಸುವುದು ದುರಂತ ಎಂದು ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಮುಹಮ್ಮದ್ ಮುಷ್ತಾಕ್ ಅವರು ನೀಡಿರುವ ಹೇಳಿಕೆಯನ್ನು ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಖಂಡಿಸಿದೆ.

ಈ ಸಂಬಂಧ ಭಾನುವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅದು ಅದೇ ದಿನ  'ಜ್ಯೂರಿಸ್ ಟ್ರೈಲ್‌ಬ್ಲೇಜರ್ಸ್' ಎಂಬ ಕಾನೂನು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮಾರ್ಗದರ್ಶನ ನೀಡುವ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿಗಳು ಆಡಿದ್ದ ಮಾತುಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.

ವಕೀಲರ ಪರಿಷತ್ತು ಸಾಮಾನ್ಯವಾಗಿ ವ್ಯಾಜ್ಯ ಪ್ರಕರಣಗಳನ್ನು ನಿರ್ವಹಿಸುವ ವಕೀಲರನ್ನು ಒಳಗೊಂಡಿದ್ದು ಅವರ ಜ್ಞಾನ ಹೆಚ್ಚಾಗಿ ಮೊಕದ್ದಮೆಗಳಿಗೆ ಸೀಮಿತವಾಗಿರುತ್ತದೆ. ಇದು ವಕೀಲರ ಪರಿಷತ್‌ ನಿಗದಿಪಡಿಸುವ ಪಠ್ಯಕ್ರಮದಲ್ಲಿಯೂ ಪ್ರತಿಫಲಿಸುತ್ತದೆ ಎಂದು ನ್ಯಾಯಮೂರ್ತಿ ಮುಷ್ತಾಕ್‌ ಅವರು ಟೀಕಿಸಿದ್ದರು.

ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಸಿಐ ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ವ್ಯಕ್ತಿಗಳು ನ್ಯಾಯಮೂರ್ತಿಗಳನ್ನು ದಾರಿ ತಪ್ಪಿಸಿದ್ದು ವಿವಾದಾಸ್ಪದ ವಿಚಾರದ ಬಗ್ಗೆ ಸೂಕ್ತ ಜ್ಞಾನವಿಲ್ಲದೆ ಯಾವುದೇ ಸಂಸ್ಥೆಯ ವಿರುದ್ಧ ಹೇಳಿಕೆ ನೀಡುವ ಸ್ವಾತಂತ್ರ್ಯ ಅವರಿಗೆ ಇಲ್ಲ ಎಂದು ಬಿಸಿಸಿಐ ಹೇಳಿದೆ.

ಬಿಸಿಐ ಪ್ರಕಟಣೆಯ ಪ್ರಮುಖಾಂಶಗಳು

  • ವಕೀಲರ ಪರಿಷತ್ತು ಕಾನೂನು ಶಿಕ್ಷಣ ನಿಯಂತ್ರಿಸುತ್ತಿರುವ ಬಗ್ಗೆ ನ್ಯಾಯಮೂರ್ತಿಗಳ ವಿಲಕ್ಷಣ ಹೇಳಿಕೆ ಓದಿ ನಾವು ಆಘಾತಕ್ಕೊಳಗಾಗಿದ್ದೇವೆ.

  • ನ್ಯಾಯಮೂರ್ತಿಗಳಾದ ಕಾರಣಕ್ಕೆ ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳ ವಿರುದ್ಧ ಸೂಕ್ತ ಜ್ಞಾನವಿಲ್ಲದೆ ಹೇಳಿಕೆ ನೀಡುವ ಸ್ವಾತಂತ್ರ್ಯ ಅವರಿಗೆ ಇಲ್ಲ.

  • ನ್ಯಾ. ಮುಷ್ತಾಕ್‌ ಅವರು ನೀಡಿರುವ ಬೇಜವಾಬ್ದಾರಿಯುತ ಹೇಳಿಕೆಗಳನ್ನು ಭಾರತೀಯ ವಕೀಲರ ಪರಿಷತ್ತು ಖಂಡಿಸುತ್ತದೆ.

  • ಪಟ್ಟಭದ್ರ ಹಿತಾಸಕ್ತಿ ಹೊಂದಿರುವವರು ಇಲ್ಲವೇ ವಕೀಲರ ಪರಿಷತ್ತುಗಳ ವಿರುದ್ಧ ದ್ವೇಷ ಸಾಧಿಸುತ್ತಿರುವ ಕೆಲ ವ್ಯಕ್ತಿಗಳು ನ್ಯಾ. ಮುಷ್ತಾಕ್‌ ಅವರನ್ನು ದಿಕ್ಕು ತಪ್ಪಿಸಿದ್ದಾರೆ.

  • ಕಾನೂನು ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ವ್ಯವಹರಿಸಲು ಬಾರ್ ಕೌನ್ಸಿಲ್‌ಗಳ ಚುನಾಯಿತ ಪ್ರತಿನಿಧಿಗಳು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದು ಸಮಿತಿಯ ಐದು ಸದಸ್ಯರು ಮಾತ್ರ ಚುನಾಯಿತ ಸದಸ್ಯರಾಗಿದ್ದಾರೆ

  • ಪಟ್ಟಭದ್ರ ಹಿತಾಸಕ್ತಿಗಳನ್ನು ವಿಮರ್ಶಿಸುತ್ತಾ ಇಲ್ಲವೇ ಅವರ ಮಾತುಗಳಿಗೆ ಕಿವಿಗೊಡುತ್ತಾ ಇರುವ ಬದಲು ನ್ಯಾ. ಮುಷ್ತಾಕ್‌ ಅವರು ವಕೀಲರ ಪರಿಷತ್ತುಗಳಿಗೆ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಬೇಕು.