ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ಅಧ್ಯಕ್ಷರನ್ನಾಗಿ ಸಿದ್ದಲಿಂಗಪ್ಪ ಶೇಖರಪ್ಪ ಮಿತ್ತಲಕೋಡ್ ಅವರನ್ನು ತಕ್ಷಣಕ್ಕೆ ಅನ್ವಯಿಸುವಂತೆ ಭಾರತೀಯ ವಕೀಲರ ಪರಿಷತ್ (ಬಿಸಿಐ) ನಾಮ ನಿರ್ದೇಶನ ಮಾಡಿದೆ. ನಿರ್ಗಮಿತ ಅಧ್ಯಕ್ಷ ಎಚ್ ಎಲ್ ವಿಶಾಲ್ ರಘು ಅವರಿಂದ ತೆರವಾದ ಹುದ್ದೆಗೆ ಎಸ್ ಎಸ್ ಮಿತ್ತಲಕೋಡ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
ಕಾಲಾವಧಿ ವಿಸ್ತರಿಸಿದ ಹೊರತಾಗಿಯೂ ಕೆಎಸ್‌ಬಿಸಿಯು ಇಲ್ಲಿಯವರೆಗೆ ಪ್ರಾಕ್ಟೀಸ್ ಮಾಡದ ವಕೀಲರು ಅಥವಾ ಅವರ ಸರ್ಟಿಫಿಕೇಟ್‌ಗಳನ್ನು ಪರಿಶೀಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಎಸ್ ಎಸ್ ಮಿತ್ತಲಕೋಡ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ. ಕೆಎಸ್‌ಬಿಸಿಯ ಈ ವಿಫಲತೆಯು ವಕೀಲರ ಸಂಘದ ನಿಬಂಧನೆ ಮತ್ತು ಅದರಡಿ ರೂಪಿಸಿರುವ ನಿಯಮಗಳ ಅಡಿ ನಿಯಂತ್ರಣ ಶೂನ್ಯತೆ ಸೃಷ್ಟಿಸಿದ್ದು, ಆದೇಶ ಅನುಪಾಲನೆ ಮಾಡಲು ವಿಫಲವಾಗಿರುವುದು ಆತಂಕ ಹೆಚ್ಚಿಸಿದೆ ಎಂದು ಬಿಸಿಐ ಫೆಬ್ರವರಿ 20ರಂದು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ವಕೀಲರ ಕಾಯಿದೆ ಸೆಕ್ಷನ್ 48ಬಿ, ಸೆಕ್ಷನ್ 7(1)(ಜಿ) ಮತ್ತು ಸೆಕ್ಷನ್ 7(1) (ಎಂ), ಬಿಸಿಐ ಸರ್ಟಿಫಿಕೇಟ್ ನಿಯಮ 32 ಮತ್ತು ಪ್ರಾಕ್ಟೀಸ್ ಸ್ಥಳ (ಪರಿಶೀಲನಾ) ನಿಯಮ 2015 ಅಡಿ ನಿಕಟಪೂರ್ವ ಅಧ್ಯಕ್ಷ ಎಚ್ ಎಲ್ ವಿಶಾಲ್ ರಘು ಸ್ಥಾನಕ್ಕೆ ಎಸ್ ಎಸ್ ಮಿತ್ತಲಕೋಡ ಅವರನ್ನು ನೇಮಕ ಮಾಡಲಾಗಿದೆ.
ಒಳ್ಳೆಯ ಕೆಲಸ ಮಾಡಿದರೆ ಸಾಯುವವರೆಗೂ ನನ್ನ ಅವಧಿ ಇರುತ್ತದೆ. ಕೆಟ್ಟ ಕೆಲಸ ಮಾಡಿದರೆ ನಾಳೆಯೇ ನನ್ನ ಅಧಿಕಾರವಧಿ ಮುಗಿಯಲಿದೆ. ನನ್ನ ರಾಜೀನಾಮೆ ಪತ್ರವನ್ನೂ ಸಂಬಂಧಿತರ ಬಳಿ ಕೊಟ್ಟು ಬಂದಿದ್ದೇನೆ.ಎಸ್ ಎಸ್ ಮಿತ್ತಲಕೋಡ್, ಅಧ್ಯಕ್ಷರು, ಕೆಎಸ್‌ಬಿಸಿ
ವಿಶಾಲ್ ರಘು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದು, ತಮ್ಮ ಸ್ಥಾನಕ್ಕೆ ಮತ್ತೊಬ್ಬ ಸದಸ್ಯರನ್ನು ನೇಮಕ ಮಾಡುವಂತೆ ಕೋರಿದ್ದಾರೆ. ಅಲ್ಲದೇ, 2023ರ ನವೆಂಬರ್ 5ಕ್ಕೆ ಕೆಎಸ್‌ಬಿಸಿ ಚುನಾಯಿತ ಸದಸ್ಯರ ಅವಧಿ ಮುಕ್ತಾಯವಾಗಿದ್ದು, ವಕೀಲರ ಕಾಯಿದೆ ಸೆಕ್ಷನ್ 8ರ ಅಡಿ ವಿಸ್ತರಣೆಗೊಂಡಿದ್ದ ಕಾಲಾವಧಿಯೂ 2024ರ ಮೇ 4ರಂದು ಮುಕ್ತಾಯವಾಗಿರುವುದರಿಂದ ಹೊಸ ಅಧ್ಯಕ್ಷರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ವಿವರಿಸಲಾಗಿದೆ.
ನಿಯಮ 32ರ ಪ್ರಕಾರ ರಾಜ್ಯ ವಕೀಲರ ಪರಿಷತ್‌ನ ಚುನಾಯಿತ ಸದಸ್ಯರ ಅವಧಿ ಮುಗಿದಿದ್ದರೂ ಪ್ರಾಕ್ಟೀಸ್ ಮಾಡದ ವಕೀಲರು ಅಥವಾ ಅವರ ದಾಖಲೆಗಳ ಪರಿಶೀಲನೆ ವಿಳಂಬವಾಗಿದ್ದರ ಕಾರಣ ಆಧರಿಸಿ ಅದನ್ನು ಪೂರ್ಣಗೊಳಿಸಲು ಬಿಸಿಐ ಅವಧಿ ವಿಸ್ತರಿಸಬಹುದಾಗಿದೆ ಎಂದು ಬಿಸಿಐ ಹೇಳಿದೆ.
ಪರಿಶೀಲನಾ ಪ್ರಕ್ರಿಯೆ ಮುಗಿಯುವವರೆಗೆ ಚುನಾವಣೆ ನಡೆಸಲು ಮುಂದಾಗದಂತೆ ನಿರ್ದೇಶಿಸಿದ್ದರೂ ಕೆಎಸ್‌ಬಿಸಿಯು 2024ರ ಜೂನ್ 23ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ಚುನಾವಣೆ ನಿಗದಿಗೊಳಿಸಿ ಮೇ 31ರಂದು ನೋಟಿಸ್ ಜಾರಿ ಮಾಡಿತ್ತು. ಇದು ನಿಯಮ 32ಕ್ಕೆ ವಿರುದ್ಧವಾಗಿದ್ದು, ಪರಿಶೀಲನಾ ಪ್ರಕ್ರಿಯೆಗಾಗಿ ಅಧಿಕಾರವಧಿ ವಿಸ್ತರಿಸಿ 2023ರ ಅಕ್ಟೋಬರ್ 17ರಂದು ಬಿಸಿಐ ಮಾಡಿದ್ದ ನಿರ್ಣಯಕ್ಕೆ ವಿರುದ್ಧವಾಗಿದೆ. ಈ ಸೂಚನೆಗಳಿಗೆ ಉದ್ದೇಶಪೂರ್ವಕವಾಗಿ ಅಗೌರವ ತೋರಿರುವುದು ಕಾನೂನು ವೃತ್ತಿಯ ನಿಯಂತ್ರಣ ಚೌಕಟ್ಟಿನ ಅನುಪಾಲನೆಗೆ ವಿರುದ್ಧವಾಗಿದೆ ಎಂದು 2024ರ ಜೂನ್ 11ರಂದು ಕೆಎಸ್‌ಬಿಸಿ ಚುನಾವಣೆಗೆ ನಿರ್ಬಂಧ ವಿಧಿಸಿ ಬಿಸಿಐ ಆದೇಶಿಸಿತ್ತು.
ಕಾನೂನು ವೃತ್ತಿಯ ಘನತೆ ಎತ್ತಿಹಿಡಿಯುವ ನಿಟ್ಟಿನಲ್ಲಿ ವಕೀಲರ ಪರಿಚಯ ಅಗತ್ಯತೆಯನ್ನು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ. ವಿಶಾಲ್‌ರಘು ಕೆಎಸ್‌ಬಿಸಿ ನೇತೃತ್ವ ವಹಿಸಿದ್ದಾಗ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳಿಸಲು ವಿಫಲರಾಗಿದ್ದು, ಇದರಿಂದ ಭಾರಿ ವಿಳಂಬ ಮತ್ತು ಅಸಾಮರ್ಥ್ಯ ಬಿಂಬಿತವಾಗಿದೆ. ವಿಸ್ತರಣಾ ಅವಧಿ ಮುಗಿದಿರುವುದು ಮತ್ತು ನಿಯಮ 32 ಅನುಪಾಲನೆ ಮಾಡುವಲ್ಲಿ ವಿಫಲವಾಗಿದ್ದು, ಬಿಸಿಐ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಪಾಲಿಸುವ ನಿಟ್ಟಿನಲ್ಲಿ ನಾಯಕತ್ವ ಬದಲಾವಣೆ ಅಗತ್ಯವಾಗಿದೆ ಎಂದು ಬಿಸಿಐ ಸಮರ್ಥನೆ ನೀಡಿದೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಿಯಮ 32 ಅನುಪಾಲನೆ ಹಾಗೂ ಬಿಸಿಐ ತನ್ನ ಮೇಲ್ವಿಚಾರಣಾ ಅಧಿಕಾರ ಬಳಿಸಿ, ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳಿಸಲು ಹೊಸ ಅಧ್ಯಕ್ಷರನ್ನು ತಕ್ಷಣಕ್ಕೆ ಅನ್ವಯಿಸುವಂತೆ ಮಿತ್ತಲಕೋಡ್ ಅವರನ್ನು ನಾಮನಿರ್ದೇಶನ ಮಾಡಿದೆ.
ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳಿಸಲು ಕೆಎಸ್‌ಬಿಸಿ ಸಂಪೂರ್ಣವಾಗಿ ಸಹಕರಿಸಬೇಕು. ಬಿಸಿಐ ಅನುಮತಿಸುವವರೆಗೆ ಚುನಾವಣೆ ನಡೆಸುವ ಪ್ರಕ್ರಿಯೆಯಿಂದ ದೂರ ಉಳಿಯಬೇಕು. ಪರಿಶೀಲನಾ ಪ್ರಕ್ರಿಯೆ ಕುರಿತು ವಿಸ್ತೃತವಾದ ವರದಿ, ವಿಳಂಬವಾಗಿರುವುದಕ್ಕೆ ವಿವರಣೆಯನ್ನು ತಕ್ಷಣ ಸಲ್ಲಿಸಬೇಕು. ಇದನ್ನು ಪಾಲಿಸಲು ವಿಫಲವಾದರೆ ಕೆಎಸ್‌ಬಿಸಿ ವಿಸರ್ಜನೆ ಮತ್ತು ವಕೀಲರ ಕಾಯಿದೆ ಸೆಕ್ಷನ್ 8ಎ ಅಡಿ ವಿಶೇಷ ಸಮಿತಿ ರಚನೆ ಸೇರಿ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಬಿಸಿಐ ಪ್ರಧಾನ ಕಾರ್ಯದರ್ಶಿ ಶ್ರೀಮಂತೋ ಸೇನ್ ಪತ್ರದಲ್ಲಿ ತಿಳಿಸಿದ್ದಾರೆ.
ಮಿತ್ತಲಕೋಡ್ ಪರಿಚಯ: 1975ರ ಸೆಪ್ಟೆಂಬರ್ 8ರಂದು ಬಾಗಲಕೋಟೆಯ ಬಾದಾಮಿ ತಾಲ್ಲೂಕಿನ ಬೇಲೂರಿನಲ್ಲಿ ಜನಿಸಿರುವ ಮಿತ್ತಲಕೋಡ್ ಅವರು ಬಾಗಲಕೋಟೆಯ ನಂದೀಶ್ವರ ಕಾನೂನು ಮಹಾವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ. ಬಾದಾಮಿಯಲ್ಲಿ ಕಾನೂನು ವೃತ್ತಿ ಪ್ರಾರಂಭಿಸಿ, 2011ರಲ್ಲಿ ಮೊದಲ ಬಾರಿಗೆ ಬಾದಾಮಿ ವಕೀಲರ ಸಂಘದಿಂದ ಕೆಎಸ್‌ಬಿಸಿ ಸದಸ್ಯರಾಗಿ ಆಯ್ಕೆಯಾಗಿದ್ದರು. 2015-16ರಲ್ಲಿ ಕೆಎಸ್‌ಬಿಸಿ ಉಪಾಧ್ಯಕ್ಷರಾಗಿದ್ದ ಅವರು 2018ರಲ್ಲಿ ಎರಡನೇ ಬಾರಿಗೆ ಕೆಎಸ್‌ಬಿಸಿ ಸದಸ್ಯರಾಗಿ ಚುನಾಯಿತರಾಗಿದ್ದರು.
ನ್ಯಾಯಮಿತ್ರ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್ ಆರಂಭಿಸಿದ್ದು, ಬಾಗಲಕೋಟೆ, ಬಾದಾಮಿ ಮತ್ತು ಹುನಗುಂದ ತಾಲ್ಲೂಕಿನಲ್ಲಿ ಇದರ ಶಾಖೆಗಳನ್ನು ವಕೀಲ ಮಿತ್ರರೊಂದಿಗೆ ಸೇರಿ ತೆರೆದಿದ್ದಾರೆ. ಬಾದಾಮಿ ತಾಲ್ಲೂಕಿನ ಶಿವಯೋಗ ಮಂದಿರದಲ್ಲಿ ಸಿವಿಲ್ ನ್ಯಾಯಮೂರ್ತಿಗಳು ಮತ್ತು ಹೆಚ್ಚುವರಿ ಸರ್ಕಾರಿ ಅಭಿಯೋಜಕರನ್ನು ರೂಪಿಸಲು ಎಂಟು ತರಬೇತಿ ಶಿಬಿರಗಳನ್ನೂ ಮಿತ್ತಲಕೋಡ್ ಸಂಘಟಿಸಿದ್ದಾರೆ. ಇದರಲ್ಲಿ ತರಬೇತಿ ಪಡೆದ ಹಲವರು ಸಿವಿಲ್ ನ್ಯಾಯಾಧೀಶರು ಮತ್ತು ಹೆಚ್ಚುವರಿ ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡಿದ್ದಾರೆ.