ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ) ನೂತನ ಅಧ್ಯಕ್ಷರನ್ನಾಗಿ ಧಾರವಾಡ ಹೈಕೋರ್ಟ್‌ನ ಹಿರಿಯ ವಕೀಲರಾದ ಕಾಮರಡ್ಡಿ ವೆಂಕರಡ್ಡಿ ದೇವರಡ್ಡಿ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಕೆಎಸ್‌ಬಿಸಿಗೆ ಮಾರ್ಚ್ 15ರೊಳಗೆ ಚುನಾವಣೆ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ಗಡುವು ವಿಧಿಸಿರುವ ಹಿನ್ನೆಲೆಯಲ್ಲಿ ಕಾಮರಡ್ಡಿ ಅವರು ಮೂರೂವರೆ ತಿಂಗಳು ಕೆಎಸ್‌ಬಿಸಿ ಮುನ್ನಡೆಸಲಿದ್ದಾರೆ.
ಕಾಮರಡ್ಡಿ ಅವರ ನಾಮನಿರ್ದೇಶನ ವಿಚಾರವನ್ನು ಭಾರತೀಯ ವಕೀಲರ ಪರಿಷತ್ ಪ್ರಧಾನ ಕಾರ್ಯದರ್ಶಿ ಶ್ರೀಮಂತೊ ಸೆನ್ ಸೋಮವಾರ ಕೆಎಸ್‌ಬಿಸಿ ಕಾರ್ಯದರ್ಶಿಗೆ ಪತ್ರ ಬರೆದು ತಿಳಿಸಿದ್ದಾರೆ.
ಎಸ್ ಎಸ್ ಮಿಟ್ಟಲಕೋಡ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಕಾಮರಡ್ಡಿ ಅವರನ್ನು ನೇಮಕ ಮಾಡಲಾಗಿದೆ. ನೋಂದಣಿ, ಪರಿಶೀಲನೆ, ಶಿಸ್ತುಪಾಲನಾ ಸಮಿತಿ, ಸರ್ಟಿಫಿಕೇಟ್ ಆಫ್ ಪ್ರಾಕ್ಟೀಸ್ ನೀಡಿಕೆ, ಕಲ್ಯಾಣ ಮತ್ತು ಆಡಳಿತ ಸಮಿತಿಗಳನ್ನು ಅಧ್ಯಕ್ಷರು ಹೊಸದಾಗಿ ರಚಿಸಿ, ಯಾವುದೇ ಅಡ್ಡಿಯಿಲ್ಲದೇ ಕೆಲಸ ಪುನಾರಂಭಿಸಲು ಕ್ರಮಕೈಗೊಳ್ಳಬೇಕು ಎಂದು ನಿರ್ದೇಶಿಸಲಾಗಿದೆ.
ಈಚೆಗೆ ಸುಪ್ರೀಂ ಕೋರ್ಟ್ 2026ರ ಮಾರ್ಚ್ 15ರೊಳಗೆ ರಾಜ್ಯ ವಕೀಲರ ಪರಿಷತ್‌ಗೆ ಚುನಾವಣೆ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿದೆ. ಇದನ್ನು ಕೆಎಸ್‌ಬಿಸಿಯು ಖಾತರಿಪಡಿಸಬೇಕು. ಪರಿಶೀಲನೆಯು ನಿರಂತರ ಪ್ರಕ್ರಿಯೆಯಾಗಿದ್ದು, ಇದು ಚುನಾವಣೆಗೆ ಅಡ್ಡಿಯಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.