BCI and Karnataka High Court
BCI and Karnataka High Court 
ಸುದ್ದಿಗಳು

ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯಕಾರಿ ಸದಸ್ಯರ ಚುನಾವಣೆ ಮುಂದೂಡಿದ ಬಿಸಿಐ; ನಿಯಮಾವಳಿ ಮರುಪರಿಶೀಲನೆಗೆ ನಿರ್ಧಾರ

Bar & Bench

ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಕಾರ್ಯಕಾರಿ ಸದಸ್ಯರ ಚುನಾವಣೆ ಪ್ರಸ್ತಾವವನ್ನು ಮುಂದೂಡಿರುವುದಾಗಿ ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಶುಕ್ರವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಬಿಸಿಐ ಚುನಾವಣೆಯನ್ನು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಮನವಿಯನ್ನು ಪೀಠವು ವಿಲೇವಾರಿ ಮಾಡಿದೆ.

ಬಿಸಿಐ ಡಿಸೆಂಬರ್‌ 4ರಂದು ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಕಾರ್ಯಕಾರಿ ಸದಸ್ಯರ ಆಯ್ಕೆಗೆ ಚುನಾವಣೆ ನಡೆಸಲು ನವೆಂಬರ್ 19 ರಂದು ನಿರ್ಣಯ ಕೈಗೊಂಡಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ (ಕೆಎಸ್‌ಬಿಸಿ) ಬಿಸಿಐ ಸದಸ್ಯರಾದ ವಕೀಲ ವೈ ಆರ್ ಸದಾಶಿವರೆಡ್ಡಿ ಸಲ್ಲಿಸಿದ್ದ ಮನವಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌ ದೀಕ್ಷಿತ್‌ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

“ಅರ್ಜಿದಾರರನ್ನು ಒಳಗೊಂಡಂತೆ ಬಿಸಿಐ ಆಂತರಿಕ ಸಭೆಯಲ್ಲಿ ಎಲ್ಲಾ ಅಹವಾಲುಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹೀಗಾಗಿ, ಹೇಳಿಕೆಗೆ ನ್ಯಾಯಾಲಯವು ಆಕ್ಷೇಪ ವ್ಯಕ್ತಪಡಿಸುತ್ತದೆ” ಎಂದು ಪೀಠ ಹೇಳಿತು.

ಚುನಾವಣಾ ಪ್ರಕ್ರಿಯೆಯ ಸುಧಾರಣೆ, ವಿಶೇಷವಾಗಿ ಮುಂದಿನ ಆಡಳಿತ ಮಂಡಳಿ ಆಯ್ಕೆಗೆ ಯಾವಾಗ ಚುನಾವಣೆ ನಡೆಸಬೇಕು ಎಂಬುದು ಸೇರಿದಂತೆ ಬಿಸಿಐ ನಿಯಮಾವಳಿಗೆ ತಿದ್ದುಪಡಿಗೆ ಸಂಬಂಧಿಸಿದ ವಿಚಾರಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಮನವಿಯನ್ನು ಬಾಕಿ ಉಳಿಸಬೇಕು ಎಂದು ಅರ್ಜಿದಾರರು ಕೋರಿದರು.

ಇದಕ್ಕೆ ಪೀಠವು “ಮೇಲಿನ ವಿಚಾರಗಳ ಹಿನ್ನೆಲೆಯಲ್ಲಿ ಅರ್ಜಿ ವಿಲೇವಾರಿ ಮಾಡುವುದರಿಂದ ಹಿಂದೆ ಸರಿಯಲಾಗದು. ಮೆಮೊದಲ್ಲಿ ಹೇಳಿರುವುದನ್ನು ಆಧರಿಸಿ ಹಾಲಿ ಮನವಿಯನ್ನು ವಿಲೇವಾರಿ ಮಾಡಲಾಗುವುದು. ಬಿಸಿಐ ತನ್ನ ಮೆಮೊದಲ್ಲಿ ತಿಳಿಸಿರುವ ಪ್ರಕ್ರಿಯೆಯ ನಂತರವೂ ಸಮಸ್ಯೆ ಕಂಡುಬಂದರೆ ಅದನ್ನು ತೊಂದರೆಗೊಳಗಾದವರು ಕಾನೂನಿನ ಪ್ರಕಾರ ಪ್ರಶ್ನಿಸಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ಆಕ್ಷೇಪಣೆಗಳು ಮತ್ತು ಸ್ವಾತಂತ್ರವನ್ನು ಮುಕ್ತವಾಗಿ ಇರಿಸಲಾಗುವುದು” ಎಂದು ನ್ಯಾಯಾಲಯ ಹೇಳಿದೆ.

ಬಿಸಿಐ ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ನ್ಯಾಯಾಲಯದ ಮುಂದೆ ಪ್ರಶ್ನೆ ಮಾಡಲಾಗಿರುವ ಎಲ್ಲಾ ನಿರ್ಣಯಗಳನ್ನು ಮರುಪರಿಶೀಲಿಸುವ ಉದ್ದೇಶವನ್ನು ಬಿಸಿಐ ಹೊಂದಿದೆ. ಎಲ್ಲಾ ಚುನಾವಣೆಗಳನ್ನು ಮುಂದೂಡಲಾಗಿದ್ದು, ಘೋಷಿತ ಚುನಾವಣೆಗಳನ್ನು ನಡೆಸುವುದಿಲ್ಲ” ಎಂದರು.

“ಸಂಸ್ಥೆಯ ಹಿತದೃಷ್ಟಿಯಿಂದ ಬಿಸಿಐ ನಿಯಮಾವಳಿಗಳ ಪ್ರಕಾರ ಸಾಮಾನ್ಯ ಸಭೆಯನ್ನು ಕರೆಯಲಿದ್ದು, 28/10/2017 ಮತ್ತು 10/11/2019ರ ನಿರ್ಣಯದ ಸಿಂಧುತ್ವ ಮತ್ತು ಪರಿಣಾಮವನ್ನು ಬಿಸಿಐ ನಿಯಮಗಳ ಪ್ರಕಾರ ಮರು ಪರಿಗಣಿಸಲಾಗುವುದು. ಈ ಹಿನ್ನೆಲೆಯಲ್ಲಿ ಸಾಮಾನ್ಯ ಸಭೆ ಕರೆಯುವ ಸಂಬಂಧ ಬಿಸಿಐ ಸೂಕ್ತ ಆದೇಶವನ್ನು ಹೊರಡಿಸಲಿದೆ” ಎಂದು ಬಿಸಿಐ ನ್ಯಾಯಾಲಯಕ್ಕೆ ಸಲ್ಲಿಸಿರುವ ಮೆಮೊದಲ್ಲಿ ವಿವರಿಸಲಾಗಿದೆ.

ಅರ್ಜಿದಾರ ವಕೀಲ ವೈ ಆರ್‌ ಸದಾಶಿವ ರೆಡ್ಡಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಜಯಕುಮಾರ್‌ ಪಾಟೀಲ್‌ ಅವರು “ಬಿಸಿಐ ಕಾರ್ಯನಿರ್ವಹಿಸುವ ಮಾನದಂಡಗಳ ಅಡಿ ಮೆಮೊದಲ್ಲಿ ಸೂಚಿಸಲಾಗಿರುವ ಪ್ರಕ್ರಿಯೆಯನ್ನು ಕೈಗೊಳ್ಳಲು ಅದರದೇ ಮಿತಿಗಳಿವೆ. ಆದ್ದರಿಂದ, ದೋಷಪೂರಿತ ನಿರ್ಣಯಗಳ ಸಿಂಧುತ್ವಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಕೆಲವು ಅಹವಾಲುಗಳನ್ನು ಪರಿಗಣಿಸುವ ಅಗತ್ಯವಿದೆ” ಎಂದರು. ಇದನ್ನು ಪೀಠವು ಒಪ್ಪಲಿಲ್ಲ.