BCI and Karnataka High Court 
ಸುದ್ದಿಗಳು

ಬಿಸಿಐ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ: ಏಕಸದಸ್ಯ ಪೀಠದ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ವಿಭಾಗೀಯ ಪೀಠ

ಬಿಸಿಐ ಪರ ವಕೀಲರು “ವಾಸ್ತವಿಕ ಅಂಶಗಳನ್ನು ಮರೆಮಾಚಿ ಅರ್ಜಿದಾರರು ಮಧ್ಯಂತರ ತಡೆ ಪಡೆದಿದ್ದಾರೆ” ಎಂದರು. ಇದಕ್ಕೆ ಪೀಠವು “ನಿಮ್ಮ ಬಳಿಕ ದಾಖಲೆಗಳಿದ್ದರೆ ಅದನ್ನು ಏಕಸದಸ್ಯ ಪೀಠದ ಮುಂದೆ ಮಂಡಿಸಿ ಮಧ್ಯಂತರ ಆದೇಶ ತೆರವು ಮಾಡಲು ಕೋರಿ” ಎಂದಿತು.

Bar & Bench

ಇಂದು (ಡಿಸೆಂಬರ್ 4ರಂದು) ನಡೆಯಬೇಕಿದ್ದ ಭಾರತೀಯ ವಕೀಲರ ಪರಿಷತ್‌ನ (ಬಿಸಿಐ) ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಕಾರ್ಯಕಾರಿ ಸದಸ್ಯರ ಆಯ್ಕೆಯ ಚುನಾವಣೆಗೆ ತಡೆ ನೀಡಿದ್ದ ಏಕಸದಸ್ಯ ಪೀಠದ ಆದೇಶದಲ್ಲಿ ಮಧ್ಯಪ್ರವೇಶಿಸಲು ಶನಿವಾರ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ನಿರಾಕರಿಸಿತು.

ಬಿಸಿಐ ಡಿಸೆಂಬರ್‌ 4ರಂದು ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಹುದ್ದೆಗಳಿಗೆ ಚುನಾವಣೆ ನಡೆಸಲು ನವೆಂಬರ್ 19 ರಂದು ನಿರ್ಣಯ ಕೈಗೊಂಡಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ (ಕೆಎಸ್‌ಬಿಸಿ) ಬಿಸಿಐ ಸದಸ್ಯರಾದ ವಕೀಲ ವೈ ಆರ್ ಸದಾಶಿವರೆಡ್ಡಿ ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠವು ಚುನಾವಣೆಗೆ ತಡೆ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಬಿಸಿಐ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

“ಮೇಲ್ಮನವಿಯು ನಿರ್ವಹಣೆಗೆ ಅರ್ಹವಾಗಿಲ್ಲ. ಮಧ್ಯಂತರ ಆದೇಶ ತೆರವುಗೊಳಿಸುವಂತೆ ಕೋರಿ ಏಕಸದಸ್ಯ ಪೀಠದ ಮುಂದೆ ಮನವಿ ಸಲ್ಲಿಸಲು ಬಿಸಿಐ ಮುಕ್ತವಾಗಿದೆ. ಒಂದು ವಾರದೊಳಗೆ ಅಂಥ ಮನವಿಯನ್ನು ಏಕಸದಸ್ಯ ಪೀಠದ ಮುಂದೆ ಸಲ್ಲಿಸಿದಲ್ಲಿ ಕಾನೂನಿನ ಪ್ರಕಾರ ತುರ್ತಾಗಿ ಅದನ್ನು ನ್ಯಾಯಾಲಯವು ನಿರ್ಧರಿಸಬೇಕು” ಎಂದು ಆದೇಶಿಸಿರುವ ವಿಭಾಗೀಯ ಪೀಠವು ಮೇಲ್ಮನವಿಯನ್ನು ವಿಲೇವಾರಿ ಮಾಡಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಜಯಕುಮಾರ್‌ ಎಸ್‌ ಪಾಟೀಲ್‌ ಅವರು “ಮುಂದಿನ ವರ್ಷದ ಏಪ್ರಿಲ್‌ಗೆ 17ವರೆಗೆ ಬಿಸಿಐ ಹಾಲಿ ಪದಾಧಿಕಾರಿಗಳ ಅವಧಿ ಇದೆ. ಈ ಅವಧಿ ಮುಗಿಯಲು ಇನ್ನೂ ನಾಲ್ಕು ತಿಂಗಳು ಇರುವಾಗ ಚುನಾವಣೆ ನಡೆಸುವ ಅಗತ್ಯವಿಲ್ಲ. ಯಾವಾಗ ಚುನಾವಣೆ ನಡೆಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ನಿಯಮಗಳು ಸ್ಪಷ್ಟವಾಗಿ ಏನನ್ನೂ ಹೇಳುವುದಿಲ್ಲ. ಅವಧಿ ಮುಗಿಯುವುದಕ್ಕೂ ಮುನ್ನ ಚುನಾವಣೆ ನಡೆಸದಿರುವ ನಿಯಮ ಪಾಲನೆಗೆ ವಿರುದ್ಧವಾಗಿ ಸ್ವೇಚ್ಛೆ ಮತ್ತು ಅಸಮರ್ಥನೀಯವಾಗಿ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಶಾಸನಬದ್ಧವಾಗಿ ನೋಟಿಸ್‌ ನೀಡದೇ ಚುನಾವಣಾ ಸಭೆ ನಡೆಸಲಾಗಿದೆ” ಎಂದು ಆಕ್ಷೇಪಿಸಿದರು.

ಬಿಸಿಐ ಪರ ವಕೀಲರು “ವಾಸ್ತವಿಕ ಅಂಶಗಳನ್ನು ಮರೆಮಾಚಿ ಅರ್ಜಿದಾರರು ಮಧ್ಯಂತರ ತಡೆಯಾಜ್ಞೆ ಪಡೆದಿದ್ದಾರೆ” ಎಂದು ವಾದಿಸಿದರು. ಇದಕ್ಕೆ ಪೀಠವು “ನಿಮ್ಮ ಬಳಿಕ ದಾಖಲೆಗಳಿದ್ದರೆ ಅದನ್ನು ಏಕಸದಸ್ಯ ಪೀಠದ ಮುಂದೆ ಮಂಡಿಸಿ ಮಧ್ಯಂತರ ಆದೇಶ ತೆರವು ಮಾಡಲು ಕೋರಿ” ಎಂದು ಸಲಹೆ ನೀಡಿತು.