BCI and Supreme Court
BCI and Supreme Court 
ಸುದ್ದಿಗಳು

ವಕೀಲರ ವಿರುದ್ಧದ ದೂರಿನ ತ್ವರಿತ ವಿಲೇವಾರಿ: ಕ್ರಮವಹಿಸುವಂತೆ ಭಾರತೀಯ ವಕೀಲರ ಪರಿಷತ್‌ಗೆ ತಿಳಿಸಿದ ಸುಪ್ರೀಂ ಕೋರ್ಟ್

Bar & Bench

ರಾಜ್ಯ ವಕೀಲರ ಪರಿಷತ್ತುಗಳಿಂದ ವರ್ಗಾಯಿಸಲಾದ ಪ್ರಕರಣಗಳು ಮತ್ತು ನ್ಯಾಯವಾದಿಗಳ ವಿರುದ್ಧ  ದಾವೆದಾರರು ನೀಡಿರುವ ದೂರುಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಭಾರತೀಯ ವಕೀಲರ ಪರಿಷತ್‌ಗೆ (ಬಿಸಿಐ) ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತಿಳಿಸಿದೆ. [ಚರಣ್‌ಜಿತ್‌ ಸಿಂಗ್ ಚಂದ್ರಪಾಲ್ ಮತ್ತು ವಸಂತ್ ಡಿ ಸಾಲುಂಖೆ ಇನ್ನಿತರರ ನಡುವಣ ಪ್ರಕರಣ].

ವಕೀಲ ವೃತ್ತಿಯ ಶಿಸ್ತು ಮತ್ತು ಪಾವಿತ್ರ್ಯ ಕಾಪಾಡಿಕೊಳ್ಳಲು ಹಾಗೂ ದಾವೆದಾರರು ವಕೀಲ ವೃತ್ತಿ ಮತ್ತು ನ್ಯಾಯಾಂಗದಲ್ಲಿ ಇರಿಸಿರುವ ವಿಶ್ವಾಸ ಮುಂದುವರೆಯುವಂತಾಗಲು ಇಂತಹ ಪ್ರಕರಣಗಳ ತ್ವರಿತ ವಿಲೇವಾರಿ ಅತ್ಯಗತ್ಯ ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠ ತಿಳಿಸಿತು.

ರಾಜ್ಯ ವಕೀಲರ ಪರಿಷತ್ತುಗಳ ಶಿಸ್ತು ಸಮಿತಿ ಒಂದು ವರ್ಷದ ಅವಧಿಯಲ್ಲಿ ತಾನು ಸ್ವೀಕರಿಸುವ ದೂರುಗಳನ್ನು ವಿಲೇವಾರಿ ಮಾಡಬೇಕು. ಹಾಗೆ ಮಾಡಲು ವಿಫಲವಾದರೆ ಅವುಗಳನ್ನು ಬಿಸಿಐಗೆ ವರ್ಗಾಯಿಸಬೇಕು ಎಂದು ವಕೀಲರ ಕಾಯಿದೆಯ ಸೆಕ್ಷನ್ 36(ಬಿ) ಹೇಳುತ್ತದೆ.

ಹೀಗಾಗಿ ಬಿಸಿಐಗೆ ಮೂರು ತಿಂಗಳ ಗಡುವು ನೀಡಿದ ಪೀಠ ರಾಜ್ಯ ವಕೀಲರ ಪರಿಷತ್ತುಗಳು ತನಗೆ ವರ್ಗಾಯಿಸಿದ ಪ್ರಕರಣಗಳನ್ನು ಈ ಸಾಲಿನ ಅಂತ್ಯದೊಳಗೆ ವಿಲೇವಾರಿ ಮಾಡುವಂತೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಜನವರಿ 9, 2023ಕ್ಕೆ ನಿಗದಿಯಾಗಿದೆ.

ಕೆ ಆಂಜಿನಪ್ಪ ಮತ್ತು ಕೆಸಿ ಕೃಷ್ಣಾ ರೆಡ್ಡಿ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಪಾಲಿಸಿಲ್ಲ ಎಂದು ಬಿಸಿಐ ವಿರುದ್ಧ ವಕೀಲ ಚರಣ್‌ಜಿತ್ ಸಿಂಗ್ ಚಂದ್ರಪಾಲ್ ಅವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ವೇಳೆ ಪೀಠ ಬಿಸಿಐಗೆ ಈ ಸೂಚನೆಗಳನ್ನು ನೀಡಿದೆ.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Charanjeet_Singh_Chnderpal_vs_Vasant_D_Salunkhe_and_ors.pdf
Preview