ಸುದ್ದಿಗಳು

ಅನಧಿಕೃತ ಆನ್‌ಲೈನ್‌ ಸ್ನಾತಕೋತ್ತರ ಕಾನೂನು ಪದವಿ: ಕಾನೂನು ವಿವಿಗಳ ವಿರುದ್ಧ ಕ್ರಮಕ್ಕೆ ಮುಂದಾದ ಬಿಸಿಐ

ಆನ್‌ಲೈನ್‌, ದೂರಶಿಕ್ಷಣ ಅಥವಾ ಹೈಬ್ರಿಡ್ ವಿಧಾನಗಳ ಮೂಲಕ ಗಳಿಸಿದ ಎಲ್ಎಲ್ಎಂ ಪದವಿಗಳಿಗೆ ಬಿಸಿಐ ಅನುಮೋದನೆ ನೀಡದೆ ಹೋದರೆ ಅವು ಉದ್ಯೋಗ, ನ್ಯಾಯಾಂಗ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅಮಾನ್ಯಗೊಳ್ಳಲಿವೆ.

Bar & Bench

ಭಾರತದ ಕೆಲವು ಉನ್ನತ ಕಾನೂನು ವಿಶ್ವವಿದ್ಯಾಲಯಗಳು ಆನ್‌ಲೈನ್, ಹೈಬ್ರಿಡ್ ಅಥವಾ ದೂರಶಿಕ್ಷಣ ವಿಧಾನದ ಮೂಲಕ ಮಾನ್ಯತೆ ಇಲ್ಲದೆ ಎಲ್‌ಎಲ್‌ಎಂ ಅಥವಾ ತತ್ಸಮಾನ ಸ್ನಾತಕೋತ್ತರ ಪದವಿ ನೀಡುತ್ತಿದ್ದು ಈ ಸಂಬಂಧ ಕಾರಣ ಕೇಳಿ ಅವುಗಳಿಗೆ ಶೋಕಾಸ್ ನೋಟಿಸ್‌ ನೀಡಲಾಗುವುದು ಎಂದು ಭಾರತೀಯ ವಕೀಲರ ಪರಿಷತ್‌ (ಬಿಸಿಐ) ತಿಳಿಸಿದೆ.

ರಾಷ್ಟ್ರೀಯ ಕಾನೂನು ಸಂಸ್ಥೆ ವಿಶ್ವವಿದ್ಯಾಲಯ, ಭೋಪಾಲ್; ಭಾರತೀಯ ತಂತ್ರಜ್ಞಾನ ಸಂಸ್ಥೆ, ಖರಗ್‌ಪುರ್ (ಐಐಟಿ-ಕೆ); ಒಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯ (ಜೆಜಿಯು)  ಸೋನಿಪತ್; ಮತ್ತು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ, ದೆಹಲಿ ರೀತಿಯ ಸಂಸ್ಥೆಗಳು ಅನುಮತಿ ಪಡೆಯದೆ ಆನ್‌ಲೈನ್‌ ಮತ್ತಿತರ ವಿಧಾನಗಳ ಮೂಲಕ ಕಾನೂನು ಪದವಿ ನೀಡುತ್ತಿರುವುದು ಬಿಸಿಐ ಗಮನಕ್ಕೆ ಬಂದಿದೆ.   

ಸಂಸ್ಥೆಗಳು ಇಂತಹ ಕಾನೂನು ಪದವಿ ನೀಡಿದರೂ ಇವು ಎಲ್‌ಎಲ್‌ಎಂಗೆ ಸಮನಲ್ಲ ಎಂಬ ಅಸ್ಪಷ್ಟ ಹೇಳಿಕೆಗಳನ್ನು ಆಗಾಗ್ಗೆ ನೀಡುತ್ತಿರುತ್ತವೆ ಎಂದು ಬಿಸಿಐ ಪ್ರಕಟಣೆ ತಿಳಿಸಿದೆ.

ಬಿಸಿಐನಿಂದ ಪೂರ್ವಾನುಮತಿ ಪಡೆಯದ ಅಂತಹ ಎಲ್ಎಲ್ಎಂ ಕೋರ್ಸ್‌ಗಳನ್ನು ನಿಷೇಧಿಸಲು ಬಿಸಿಐನ ಕಾನೂನು ಶಿಕ್ಷಣ ಸಮಿತಿಗೆ ಸಂಬಂಧಿಸಿದ ಸ್ಥಾಯಿ ಸಮಿತಿಯ ಉಪಾಧ್ಯಕ್ಷ ನ್ಯಾಯಮೂರ್ತಿ (ನಿವೃತ್ತ) ರಾಜೇಂದ್ರ ಮೆನನ್, ನಿರ್ದೇಶನ ನೀಡಿದ್ದಾರೆ.

ಆನ್‌ಲೈನ್‌, ದೂರಶಿಕ್ಷಣ ಅಥವಾ ಹೈಬ್ರಿಡ್ ವಿಧಾನಗಳ ಮೂಲಕ ಗಳಿಸಿದ ಎಲ್ಎಲ್ಎಂ ಪದವಿಗಳಿಗೆ ಬಿಸಿಐ ಅನುಮೋದನೆ ನೀಡದೆ ಹೋದರೆ  ಅವು ಉದ್ಯೋಗ, ನ್ಯಾಯಾಂಗ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅಮಾನ್ಯಗೊಳ್ಳಲಿವೆ.