Karnataka HC and BDA Commissioner Rajesh Gowda M B 
ಸುದ್ದಿಗಳು

ಬಿಡಿಎ ಆಯುಕ್ತರ ನೇಮಕಾತಿ ವಿವಾದ: ರಾಜ್ಯ ಸರ್ಕಾರ ಹಾಗೂ ಐಎಎಸ್‌ ಅಧಿಕಾರಿ ರಾಜೇಶ್‌ ಗೌಡಗೆ ಹೈಕೋರ್ಟ್‌ ನೋಟಿಸ್‌

ಬೆಂಗಳೂರು ಅಭಿವೃದ್ಧಿ ಕಾಯಿದೆ-1976ರ ಸೆಕ್ಷನ್ 12ರ ಪ್ರಕಾರ ವಿಭಾಗೀಯ ಆಯುಕ್ತರಿಗಿಂತ ಕಡಿಮೆ ಇರದ ಶ್ರೇಣಿಯ ಅಧಿಕಾರಿಯನ್ನು ಬಿಡಿಎ ಆಯುಕ್ತರ ಹುದ್ದೆಗೆ ನೇಮಕ ಮಾಡಬೇಕು ಎಂದು ಮನವಿಯಲ್ಲಿ ವಿವರಿಸಲಾಗಿದೆ.

Bar & Bench

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತರ ಹುದ್ದೆಗೆ ಐಎಎಸ್ ಅಧಿಕಾರಿ ಎಂ ಬಿ ರಾಜೇಶ್ ಗೌಡ ಅವರನ್ನು ನೇಮಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ.

ಬಿಡಿಎ ಆಯುಕ್ತರಾಗಿ ರಾಜೇಶ್ ಗೌಡ ಅವರನ್ನು ನೇಮಕ ಮಾಡಿ ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ವಕೀಲ ಜಿ ಮೋಹನ್ ಕುಮಾರ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ್‌ ಹೆಗಡೆ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠವು ನಡೆಸಿತು.

ಅಲ್ಪಕಾಲ ವಾದ ಆಲಿಸಿದ ನ್ಯಾಯಾಲಯವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿತು. ಇದೇ ವೇಳೆ ಬಿಡಿಎ ಆಯುಕ್ತ ಎಂ ಬಿ ರಾಜೇಶ್ ಗೌಡ ಅವರಿಗೂ ತುರ್ತು ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಬೆಂಗಳೂರು ಅಭಿವೃದ್ಧಿ ಕಾಯಿದೆ-1976ರ ಸೆಕ್ಷನ್ 12ರ ಪ್ರಕಾರ ವಿಭಾಗೀಯ ಆಯುಕ್ತರಿಗಿಂತ ಕಡಿಮೆ ಇರದ ಶ್ರೇಣಿಯ ಅಧಿಕಾರಿಯನ್ನು ಬಿಡಿಎ ಆಯುಕ್ತರ ಹುದ್ದೆಗೆ ನೇಮಕ ಮಾಡಬೇಕಿದೆ. ಆದರೆ, ವಿಭಾಗೀಯ ಆಯುಕ್ತರಿಗಿಂತ ಕಡಿಮೆ ಶ್ರೇಣಿಯ ಅಧಿಕಾರಿಯಾಗಿರುವ ಎಂ ಬಿ ರಾಜೇಶ್ ಗೌಡ ಅವರನ್ನು ಬಿಡಿಎ ಆಯುಕ್ತ ಹುದ್ದೆಗೆ ನೇಮಿಸಿ ಸರ್ಕಾರ 2021ರ ಏಪ್ರಿಲ್‌ 30ರಂದು ಆದೇಶಿಸಿದೆ. ಹಾಗಾಗಿ, ಬಿಡಿಎ ಆಯುಕ್ತರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ರಾಜೇಶ್ ಗೌಡ ಅವರಿಗೆ ಅಗತ್ಯ ಅರ್ಹತೆ ಇಲ್ಲವಾಗಿದೆ. ಅರ್ಹತೆ ಇಲ್ಲದವರನ್ನು ನೇಮಿಸುವುದರಿಂದ ಆಯುಕ್ತರ ಹುದ್ದೆಯ ಕರ್ತವ್ಯಗಳನ್ನು ಪರಿಣಾಮಕಾರಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.

ರಾಜೇಶ್ ಗೌಡ ಅವರನ್ನು ಬಿಡಿಎ ಆಯುಕ್ತ ಹುದ್ದೆಗೆ ನೇಮಕ ಮಾಡಿದ ಆದೇಶ ಹಿಂಪಡೆಯಬೇಕು ಹಾಗೂ ಸೂಕ್ತ ಅರ್ಹತೆಯಿರುವ ಅಧಿಕಾರಿಯನ್ನು ನೇಮಿಸಬೇಕು ಎಂದು ಕೋರಿ ಅರ್ಜಿದಾರರು 2021ರ ನವೆಂಬರ್‌ 30ರಂದು ಸರ್ಕಾರಕ್ಕೆ ಮನವಿ ಪತ್ರ ನೀಡಿದ್ದಾರೆ. ಅದನ್ನು ಈವರೆಗೂ ಪರಿಗಣಿಸಿಲ್ಲ ಎಂದು ಆಕ್ಷೇಪಿಸಿರುವ ಅರ್ಜಿದಾರರು, ಸೂಕ್ತ ಅರ್ಹತೆ ಹೊಂದಿರದ ಕಾರಣಕ್ಕೆ ಬಿಡಿಎ ಆಯುಕ್ತರ ಹುದ್ದೆಗೆ ರಾಜೇಶ್ ಗೌಡ ಅವರನ್ನು ನೇಮಿಸಿ ಸರ್ಕಾರ ಹೊರಡಿಸಿದ ಆದೇಶ ರದ್ದುಪಡಿಸಬೇಕು ಎಂದು ನ್ಯಾಯಾಲಯವನ್ನು ಕೋರಿದ್ದಾರೆ.

ಅಲ್ಲದೆ, ಈ ಅರ್ಜಿ ಇತ್ಯರ್ಥವಾಗುವರೆಗೂ ಬಿಡಿಎ ಆಯುಕ್ತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ರಾಜೇಶ್ ಗೌಡ ಅವರಿಗೆ ನಿರ್ಬಂಧ ಹೇರಬೇಕು ಎಂದು ಅರ್ಜಿದಾರರು ಇದೇ ವೇಳೆ ಮಧ್ಯಂತರ ಮನವಿ ಮಾಡಿದ್ದಾರೆ.