Karnataka HC and BDA
Karnataka HC and BDA 
ಸುದ್ದಿಗಳು

ಮೂಲೆ ನಿವೇಶನ ಹರಾಜು ಹಾಕಿ ಲಾಭ ಮಾಡಿಕೊಳ್ಳಲು ಬಿಡಿಎ ಖಾಸಗಿ ರಿಯಲ್‌ ಎಸ್ಟೇಟ್‌ ಕಂಪೆನಿ ಅಲ್ಲ: ಹೈಕೋರ್ಟ್‌

Bar & Bench

“ಮೂಲೆ ನಿವೇಶನಗಳನ್ನು ಹರಾಜು ಹಾಕುವ ಮೂಲಕ ಲಾಭ ಹೆಚ್ಚಿಸಿಕೊಳ್ಳಲು ಬಿಡಿಎಯು ಖಾಸಗಿ ರಿಯಲ್‌ ಎಸ್ಟೇಟ್‌ ಕಂಪೆನಿಯ ರೀತಿ ಕಾರ್ಯನಿರ್ವಹಿಸಲಾಗದು. ಬದಲಿಗೆ ಅದು ಈಗಾಗಲೇ ನಿವೇಶನ ಪಡೆದಿರುವವರ ವಿವಾದವನ್ನು ಪರಿಹರಿಸಲು ಸಹಾನುಭೂತಿ ತೋರಬೇಕು” ಎಂದು ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಿವಿ ಹಿಂಡಿದೆ. ಆ ಮೂಲಕ ನಿವೇಶನಗಳ ಮರು ಹರಾಜಿಗೆ ಮುಂದಾಗಿದ್ದ ಬಿಡಿಎಯ ಪ್ರಕ್ರಿಯೆಯನ್ನು ನಿರ್ಬಂಧಿಸಿದೆ.

ಅರ್ಕಾವತಿ ಲೇಔಟ್‌ನಲ್ಲಿ ಈಗಾಗಲೇ ನಿವೇಶನ ಹಂಚಿಕೆಯಾಗಿ ಅದರ ಹಕ್ಕುದಾರರಾಗಿರುವವರು ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ಏಕಸದಸ್ಯ ಪೀಠವು ಆದೇಶ ಮಾಡಿದೆ.

ಈಗಾಗಲೇ ಹಂಚಿಕೆ ಮಾಡಿದ್ದ ನಿವೇಶಗಳನ್ನು ರದ್ದುಪಡಿಸಿ ಪುನರ್‌ ಹಂಚಿಕೆ ಮಾಡುವುದನ್ನು ನಿರ್ಬಂಧಿಸಿ ನ್ಯಾಯಾಲಯ ಆದೇಶ ಮಾಡಿದೆ. ಅಲ್ಲದೇ, ಮೂರನೇ ವ್ಯಕ್ತಿಗೆ ನಿವೇಶನ ಹರಾಜು ಹಾಕುವುದರ ಬದಲಿಗೆ ಈಗಾಗಲೇ ನಿವೇಶನ ಹಂಚಿಕೆ ಮಾಡಲಾಗಿರುವ ವ್ಯಕ್ತಿಗಳಿಗೆ ಸಂಬಂಧಿಸಿದ ವಿವಾದವನ್ನು ಪರಿಹರಿಸಲು ಬಿಡಿಎ ಸಹಾನುಭೂತಿ ತೋರಬೇಕು ಎಂದು ನ್ಯಾಯಾಲಯ ಹೇಳಿದೆ.

"ಹಂಚಿಕೆದಾರರಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಇತ್ಯರ್ಥಕ್ಕೆ ಬಾಕಿಯಿರುವಾಗ ಮತ್ತು ಆ ಹಂಚಿಕೆದಾರರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿದ್ದು, ವಿವಿಧ ಪರಿಹಾರ ಬಯಸಿ ಅವರು ನ್ಯಾಯಾಲಯವನ್ನು ಎಡತಾಕಿರುವಾಗ ನಿವೇಶನಗಳನ್ನು ಮರು ಹರಾಜು ಹಾಕುವ ಬಿಡಿಎ ಕ್ರಮದಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ಹಾಲಿ ಹಂಚಿಕೆದಾರರ ಸಮಸ್ಯೆ ಇತ್ಯರ್ಥವಾಗದೇ ಹಾಗೆ ಉಳಿದಿರುವಾಗ ಮೂಲೆ ನಿವೇಶನಗಳನ್ನು ಹರಾಜು ಹಾಕಲು ಬಿಡಿಎಗೆ ಅನುಮತಿಸುವುದರಿಂದ ಯಾವುದೇ ಲಾಭವಾಗುವುದಿಲ್ಲ” ಎಂದು ಪೀಠ ಆದೇಶದಲ್ಲಿ ಹೇಳಿದೆ.

ಮುಂದುವರೆದು ನ್ಯಾಯಮೂರ್ತಿಗಳು, "ತಮ್ಮ ಅಭಿಪ್ರಾಯದಲ್ಲಿ ಬಿಡಿಎಯು ನಿವೇಶನ ಹಂಚಿಕೆ ವೇಳೆ ಇದಾಗಲೇ ನಿವೇಶನ ಹಂಚಿಕೆ ಮಾಡಿದ್ದ ( ಹಂಚಿ ಮರಳಿ ಪಡೆಯಲಾಗಿದ್ದ) ಅರ್ಜಿದಾರರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕೇ ಹೊರತು ಹರಾಜಿನ ಮುಖೇನ ಹೊಸ ವ್ಯಕ್ತಿಗಳನ್ನು ಕರೆತರಬಾರದು. ಹಾಗೆ ಮಾಡುವುದು ಆರ್ಕಾವತಿ ಲೇಔಟ್‌ಗೆ ಸಂಬಂಧಿಸಿದ ದಾವೆಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ" ಎಂದು ಹೇಳಿದರು.

ಹಿನ್ನೆಲೆ: ನಿವೇಶನ ಹಂಚಿಕೆ ಮಾಡಿದ ಮೇಲೆ ಆ ಪ್ರದೇಶವು ದ್ವಿತೀಯ ವಿಧದ ರಾಜಕಾಲುವೆಯ ಬಫರ್‌ ವಲಯಕ್ಕೆ ಸೇರಿದೆ ಎಂಬುದು ಬಿಡಿಎಗೆ ಮನವರಿಕೆಯಾಯಿತು. ಹೀಗಾಗಿ, ಲೇಔಟ್‌ ಯೋಜನೆಯನ್ನು ಸುಧಾರಿಸಿ, ರಸ್ತೆ ನಿರ್ಮಾಣ ಮಾಡಿತ್ತು. ಆ ಬಳಿಕ ಅಲ್ಲಿ ನಿವೇಶನ ಹಂಚಿಕೆ ಮಾಡಿದ್ದ ಅರ್ಜಿದಾರರಿಗೆ ಅರ್ಕಾವತಿ ಲೇಔಟ್‌ಗೆ ಬದಲಾಗಿ 35 ಕಿ ಮೀ ದೂರದಲ್ಲಿರುವ ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿ ಪ್ರತ್ಯೇಕವಾಗಿ ನಿವೇಶನ ಹಂಚಿಕೆ ಮಾಡಿತ್ತು. ಇದನ್ನು ಅರ್ಜಿದಾರರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.