Dr Ravi Patil 
ಸುದ್ದಿಗಳು

ಮುಸ್ಲಿಂ ಮತದಾರರ ಹೆಸರು ಅಳಿಸಲು ನಕಲಿ ಫಾರಂ–7 ಸಲ್ಲಿಕೆ ಆರೋಪ: ಬಿಜೆಪಿ ನಾಯಕ ರವಿ ಪಾಟೀಲ್‌ಗೆ ನಿರೀಕ್ಷಣಾ ಜಾಮೀನು

“ಫಾರ್ಮ್‌ 7 ನೀಡಿದ ಮಾತ್ರಕ್ಕೆ ಚುನಾವಣಾ ಪ್ರಾಧಿಕಾರವು ತಂತಾನೇ ಸಕ್ರಿಯವಾಗುವುದಿಲ್ಲ. ಮತದಾರರನ್ನು ಪಟ್ಟಿಯಿಂದ ತೆಗೆಯುವ ಮುನ್ನ ಆಯೋಗವು ತನಿಖೆ ಮತ್ತು ಪರಿಶೀಲನೆ ನಡೆಸಲಿದೆ” ಎಂದಿರುವ ಬೆಳಗಾವಿ ನ್ಯಾಯಾಲಯ.

Bar & Bench

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ನಡೆಯುತ್ತಿರುವ ಬೆನ್ನಲ್ಲೇ ನಕಲಿ ಫಾರ್ಮ್‌ 7 ಬಳಿಸಿ ಕೆಲವು ಮುಸ್ಲಿಮರ ಮತವನ್ನು ಪಟ್ಟಿಯಿಂದ ತೆಗೆಸುವ ಕೃತ್ಯ ಎಸಗಿದ ಆರೋಪದ ಮೇಲೆ ದಾಖಲಾಗಿರುವ ಪ್ರಕರಣದಲ್ಲಿ ಬಿಜೆಪಿ ಮುಖಂಡ ಡಾ. ರವಿ ಬಸಲಿಂಗಪ್ಪಗೌಡ ಪಾಟೀಲ್‌ ಅವರಿಗೆ ಬೆಳಗಾವಿ ನ್ಯಾಯಾಲಯವು ಈಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಬೆಳಗಾವಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಗಂಗಾಧರ ಕೆ ಎನ್‌ ಅವರು ಅಕ್ಟೋಬರ್‌ 3ರಂದು ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ರವಿ ಪಾಟೀಲ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

“ಫಾರ್ಮ್‌ 7 ನೀಡಿದ ಮಾತ್ರಕ್ಕೆ ಚುನಾವಣಾ ಪ್ರಾಧಿಕಾರವು ತಂತಾನೇ ಸಕ್ರಿಯವಾಗುವುದಿಲ್ಲ. ಮತದಾರರನ್ನು ಪಟ್ಟಿಯಿಂದ ತೆಗೆಯುವ ಮುನ್ನ ಆಯೋಗವು ತನಿಖೆ ಮತ್ತು ಪರಿಶೀಲನೆ ನಡೆಸಲಿದೆ” ಎಂದು ನ್ಯಾಯಾಲಯ ಹೇಳಿದೆ.

ರಾಜಕೀಯ ಪಕ್ಷದ ಪ್ರತಿನಿಧಿಯಾದ ದೂರುದಾರ ಮೀರ್‌ಸಾಬ್‌ ಸನದಿ ಅವರು ಬೆಳಗಾವಿಯ ಮಾರ್ಕೆಟ್‌ ಠಾಣೆಗೆ ತೆರಳಿ 198 ಮಂದಿಯನ್ನು ತೆಗೆಯುವ ಸಂಬಂಧ ಫಾರ್ಮ್‌ 7 ಅರ್ಜಿಯನ್ನು ಸಲ್ಲಿಸಿದ್ದಾರೆ. ಇವು ನಕಲಿ ಅರ್ಜಿಗಳಾಗಿದ್ದು, ನಿರ್ದಿಷ್ಟ ಸ್ಥಳದಲ್ಲಿ ಮುಸ್ಲಿಮ್‌ ಮತದಾರರು ನೆಲೆಸಿದ್ದರೂ ಸಹ ಅವರ ಮತಗಳನ್ನು ತೆಗೆಯುವ ಕುತಂತ್ರವಾಗಿದೆ ಎಂದು ದೂರು ನೀಡಿದ್ದರು.

“ತಾನು ಈ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಡಾ. ರವಿ ಪಾಟೀಲ್‌ ನಿರಾಕರಿಸಿದ್ದು, ಅನಗತ್ಯವಾಗಿ ಈ ಪ್ರಕರಣದಲ್ಲಿ ತಮ್ಮ ಹೆಸರು ಎಳೆದು ತರಲಾಗಿದೆ. ಬಂಧನವು ತನ್ನ ಘನತೆಗೆ ಗಂಭೀರ ಹಾನಿ ಮಾಡಲಿದೆ. ಹೀಗಾಗಿ, ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು“ ಎಂದು ಕೋರಿದ್ದರು.

“ಆರೋಪಿಗಳು ತಿರುಚಿದ ಫಾರ್ಮ್‌ 7 ಅರ್ಜಿಗಳನ್ನು ಸಲ್ಲಿಸಿದ್ದರೂ ಈ ದಾಖಲೆಗಳು, ಬೆಳಗಾವಿ ಮಹಾನಗರ ಪಾಲಿಕೆಯ ಆಯೋಗಕ್ಕೆ ಸೇರಿದ ಬೂತ್‌ ಮಟ್ಟದ ಅಧಿಕಾರಿಗಳ ಬಳಿ ಇದ್ದೇ ಇದೆ. ಪ್ರಕರಣವು ದಾಖಲೆಯ ಸಾಕ್ಷಿಯ ಮೇಲೆ ನಿಂತಿದ್ದು, ಚುನಾವಣಾ ಆಯೋಗವು ಸ್ವತಂತ್ರವಾಗಿ ತನಿಖೆ ಮತ್ತು ಪರಿಶೀಲನೆ ನಡೆಸಿ, ಅರ್ಜಿಯ ಸಂಬಂಧ ನಿರ್ಧಾರ ಕೈಗೊಳ್ಳಲಿದೆ” ಎಂದು ನ್ಯಾಯಾಲಯ ಹೇಳಿದೆ.  

“ನಿರ್ದಿಷ್ಟ ದಾಖಲೆಯ ಬಗ್ಗೆ ತಕರಾರು ತೆಗೆಯಬೇಕಿರುವುದು ಚುನಾವಣಾ ಆಯೋಗವೇ ವಿನಾ ನಿರ್ದಿಷ್ಟ ಪಕ್ಷಕ್ಕೆ ಸೇರಿದ ಯಾವುದೋ ವ್ಯಕ್ತಿಯಲ್ಲ” ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೇ, ಸೆಪ್ಟೆಂಬರ್‌ 26ರಂದು ಕೃತ್ಯ ನಡೆದಿದೆ ಎನ್ನಲಾಗಿದ್ದು, ಅಕ್ಟೋಬರ್‌ 1ರಂದು ದೂರು ದಾಖಲಿಸಲಾಗಿದೆ. ಈ ನೆಲೆಯಲ್ಲಿ ರವಿ ಪಾಟೀಲ್‌ ನಿರೀಕ್ಷಣಾ ಜಾಮೀನು ಪಡೆಯಲು ಮೇಲ್ನೋಟಕ್ಕೆ ಅರ್ಹರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

“ಪಾಟೀಲ್‌ ವಿರುದ್ಧದ ಆರೋಪಗಳು ಜಾಮೀನುರಹಿತವಾಗಿದ್ದರೂ ಅವು ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸುವ ಪ್ರಕರಣಗಳಲ್ಲ ಎಂದಿರುವ ನ್ಯಾಯಾಲಯವು ಒಂದೊಮ್ಮೆ ರವಿ ಪಾಟೀಲ್‌ರನ್ನು ಬಂಧಿಸಿದರೆ ₹50,000 ವೈಯಕ್ತಿಕ ಬಾಂಡ್‌ ಮತ್ತು ಒಬ್ಬರ ಭದ್ರತೆ ಪಡೆದು ಅವರನ್ನು ಬಿಡುಗಡೆ ಮಾಡಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಬೆಳಗಾವಿಯ ಶಂಕರ್‌ ಬೀರಪ್ಪ ನಾಯಕ್‌, ಪ್ರಶಾಂತ್‌ ದೀಪಕ್‌. ಡಾ. ರವಿ ಪಾಟೀಲ್‌ ಮತ್ತು ಇತರರ ವಿರುದ್ಧ ಮಾರ್ಕೆಟ್‌ ಠಾಣೆಯಲ್ಲಿ ಬಿಎನ್‌ಎಸ್‌ ಸೆಕ್ಷನ್‌ಗಳಾದ 318(4), 336(3), 336(4), 353, 61(2), 3(5), 3(7) ಮತ್ತು 192 ಜೊತೆಗೆ 190ರ ಅಡಿ ಪ್ರಕರಣ ದಾಖಲಿಸಲಾಗಿದೆ.

Ravi Basalingappagowda Patil Vs State of Karnataka.pdf
Preview