Gang Rape, Violence 
ಸುದ್ದಿಗಳು

ಬೆಳಗಾವಿ ವಿವಸ್ತ್ರ ಪ್ರಕರಣ: 11 ಮಂದಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ದೊಣ್ಣೆಗಳಿಂದ ಸಂತ್ರಸ್ತ ಮಹಿಳೆಯ ಮೇಲೆ ಆರೋಪಿಗಳು ದಾಳಿ ನಡೆಸಿದ್ದಾರೆ ಎಂಬುದು ಆರೋಪವಾಗಿದೆ. ಆದರೆ, ವೈದ್ಯಕೀಯ ದಾಖಲೆಯಲ್ಲಿ ಸಂತ್ರಸ್ತ ಮಹಿಳೆಗೆ ಯಾವುದೇ ಗಂಭೀರ ಹಾನಿಯಾಗಿಲ್ಲ ಎಂದು ವಿವರಿಸಲಾಗಿದೆ.

Bar & Bench

ಬೆಳಗಾವಿಯಲ್ಲಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದಿದ್ದ ಮಹಿಳೆಯ ವಿವಸ್ತ್ರ ಪ್ರಕರಣದ 11 ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ ಪ್ರಕರಣದ ಎಲ್ಲಾ 12 ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾದಂತಾಗಿದೆ.

ಬೆಳಗಾವಿ ಜಿಲ್ಲೆಯ ಹೊಸ ವಂಟಮುರಿಯ ಪಾಟೀಲ್‌ ಗಲ್ಲಿಯ ನಿವಾಸಿಯಾದ ರಾಜು ನಾಯ್ಕ್‌ ಸೇರಿ 11 ಮಂದಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

Justice S Vishwajith Shetty and Karnataka HC - Dharwad Bench

ಆರೋಪಿ/ಅರ್ಜಿದಾರರು ತಲಾ ಒಂದು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತದ ಇಬ್ಬರ ಭದ್ರತೆ ಒದಗಿಸಬೇಕು. ಸೂಕ್ತ ಕಾರಣಗಳಿಗಾಗಿ ವಿಚಾರಣಾಧೀನ ನ್ಯಾಯಾಲಯ ಆರೋಪಿಗಳಿಗೆ ವಿನಾಯಿತಿ ನೀಡದ ಹೊರತು ವಿಚಾರಣೆಯ ದಿನದಂದು ಎಲ್ಲಾ ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಾಗಬೇಕು. ಪ್ರಾಸಿಕ್ಯೂಷನ್‌ ಸಾಕ್ಷಿಯ ಮೇಲೆ ನೇರ ಅಥವಾ ಪರೋಕ್ಷವಾಗಿ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ಇಂಥದ್ದೇ ಅಪರಾಧ ಪ್ರಕರಣಗಳಲ್ಲಿ ಭಾಗವಹಿಸಬಾರದು ಎಂಬ ಷರತ್ತುಗಳನ್ನು ನ್ಯಾಯಾಲಯವು ವಿಧಿಸಿದೆ.

“ಪ್ರಥಮ ಮಾಹಿತಿ ವರದಿ ಮತ್ತು ಆರೋಪ ಪಟ್ಟಿಯನ್ನು ಪರಿಶೀಲಿಸಿದರೆ ಸಂತ್ರಸ್ತೆಯ ಬಗ್ಗೆ ಆರೋಪಿಗಳಿಗೆ ಯಾವುದೇ ದುರುದ್ದೇಶ ಅಥವಾ ದ್ವೇಷ ಇರಲಿಲ್ಲ. ಮೊದಲನೇ ಆರೋಪಿ ರಾಜು ನಾಯ್ಕ್‌ ಅವರ ಪುತ್ರಿ ಸಂತ್ರಸ್ತೆಯ ಪುತ್ರನ ಜೊತೆ ಪರಾರಿಯಾದ ಹಿನ್ನೆಲೆಯಲ್ಲಿ ಘಟನೆ ನಡೆದಿದೆ. ತನಿಖೆ ಪೂರ್ಣಗೊಂಡಿದ್ದು, ಆರೋಪ ಪಟ್ಟಿಯನ್ನೂ ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ. ಅರ್ಜಿದಾರ/ಆರೋಪಿಗಳು ರೈತರಾಗಿದ್ದು, ಕೆಂಪಣ್ಣ ನಾಯ್ಕ್‌, ಪಾರ್ವತಿ ನಾಯ್ಕ್‌, ಲಕ್ಕಪ್ಪ ನಾಯ್ಕ್‌, ಸಂಗೀತಾ ಹೆಗ್ಗನಾಯ್ಕ್‌ ಅವರು ಮಹಿಳಾ ಆರೋಪಿಗಳಾಗಿದ್ದಾರೆ. 7ನೇ ಆರೋಪಿ ಗಂಗವ್ವ ಬಸಪ್ಪ ವಾಲೀಕರ್‌ಗೆ 19 ವರ್ಷವಾಗಿದ್ದು, ಆಕೆ ವಿದ್ಯಾರ್ಥಿಯಾಗಿದ್ದಾರೆ. ಅರ್ಜಿದಾರರಿಗೆ ಯಾವುದೇ ಕ್ರಿಮಿನಲ್‌ ಹಿನ್ನೆಲೆ ಇಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ದೊಣ್ಣೆಗಳಿಂದ ಸಂತ್ರಸ್ತ ಮಹಿಳೆಯ ಮೇಲೆ ಆರೋಪಿಗಳು ದಾಳಿ ನಡೆಸಿದ್ದಾರೆ ಎಂಬುದು ಆರೋಪವಾಗಿದೆ. ಆದರೆ, ವೈದ್ಯಕೀಯ ದಾಖಲೆಯಲ್ಲಿ ಸಂತ್ರಸ್ತ ಮಹಿಳೆಗೆ ಯಾವುದೇ ಗಂಭೀರ ಹಾನಿಯಾಗಿಲ್ಲ ಎಂದು ವಿವರಿಸಲಾಗಿದೆ. ಸಂತ್ರಸ್ತೆಯನ್ನು ಮನೆಯಿಂದ ಎಳೆದು ತಂದು ವಿದ್ಯುತ್‌ ಕಂಬಕ್ಕೆ ಕಟ್ಟಿ ಹಾಕಿ, ಆಕೆಯನ್ನು ವಿವಸ್ತ್ರಗೊಳಿಸಿ ಆರೋಪಿಗಳು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಮಹಿಳೆಯನ್ನು ಕಟ್ಟಿಹಾಕಿದ ನಂತರ ಆಕೆಯನ್ನು ವಿವಸ್ತ್ರಗೊಳಿಸಿದ ಆರೋಪವು ಮಹಿಳೆಯರಾದ ಸಂಗೀತಾ ಹೆಗ್ಗನಾಯ್ಕ್‌, ಶೋಭಾ ನಾಯ್ಕ್‌ ಮತ್ತು ಲಕ್ಕವ್ವ ನಾಯ್ಕ್‌ ಮೇಲಿದೆ. ಇನ್ನಾರ ಮೇಲೂ ಮಹಿಳೆಯರ ವಿವಸ್ತ್ರಗೊಳಿಸಿದ ಆರೋಪವಿಲ್ಲ. ಸಂಗೀತಾಗೆ ಈಗಾಗಲೇ ಜಾಮೀನು ಮಂಜೂರಾಗಿದೆ. ಉಳಿದ ಆರೋಪಿಗಳು ನಾಲ್ಕು ತಿಂಗಳಿಗೂ ಹೆಚ್ಚು ಸಮಯದಿಂದ ಜೈಲಿನಲ್ಲಿದ್ದು, ತನಿಖೆ ಪೂರ್ಣಗೊಂಡು ಆರೋಪ ಪಟ್ಟಿ ಸಲ್ಲಿಕೆಯಾಗಿದೆ” ಎಂದು ಆದೇಶದಲ್ಲಿ ವಿವರಿಸಲಾಗಿದೆ. ‌

ಅರ್ಜಿದಾರರ ಪರವಾಗಿ ವಕೀಲ ರವಿರಾಜ್‌ ಸಿ. ಪಾಟೀಲ್‌ ವಾದಿಸಿದ್ದರು.

ಪ್ರಕರಣದ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಮುಖ್ಯ ನ್ಯಾಯಮೂರ್ತಿ ಅವರ ನೇತೃತ್ವದ ಪೀಠವು ಈಚೆಗೆ ಒಂದು ವರ್ಷದ ಒಳಗೆ ವಿಚಾರಣೆ ಪೂರ್ಣಗೊಳಿಸುವಂತೆ ಬೆಳಗಾವಿಯಲ್ಲಿನ ವಿಚಾರಣಾಧೀನ ನ್ಯಾಯಾಲಯಕ್ಕೆ ನಿರ್ದೇಶಿಸಿತ್ತು.

ಪ್ರಕರಣದ ಹಿನ್ನೆಲೆ: ಪ್ರಕರಣದ ಮೊದಲನೇ ಆರೋಪಿ ರಾಜು ನಾಯ್ಕ್‌ ಪುತ್ರಿಯೊಂದಿಗೆ ಸಂತ್ರಸ್ತೆಯ ಪುತ್ರ ಪರಾರಿಯಾಗಿದ್ದ ಹಿನ್ನೆಲೆಯಲ್ಲಿ 2023ರ ಡಿಸೆಂಬರ್‌ 11ರಂದು ಸಂತ್ರಸ್ತೆಯ ಮೇಲೆ ರಾಜು ನಾಯ್ಕ್‌ ಮತ್ತಿತರ 11 ಮಂದಿ ದಾಳಿ ನಡೆಸಿದ್ದರು. ಆಕೆಯನ್ನು ಮಧ್ಯರಾತ್ರಿ ಮನೆಯಿಂದ ಹೊರ ಎಳೆದು ವಿದ್ಯುತ್‌ ಕಂಬಕ್ಕೆ ಕಟ್ಟಿ, ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದ ಪ್ರಕರಣ ದೇಶಾದ್ಯಂತ ಭಾರಿ ಸುದ್ದಿಯಾಗಿತ್ತು.

ಈ ಸಂಬಂಧ ಬೆಳಗಾವಿಯ ಕಾಕತಿ ಠಾಣೆಯಲ್ಲಿ 12 ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಆರೋಪಿಗಳ ವಿರುದ್ಧ 109, 114, 117, 143, 147, 148, 307, 323, 324, 326, 341, 342, 353, 354, 354(ಬಿ), 355, 392, 427, 452, 504, 506, 149, 34 ಮತ್ತು 37 ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯಿದೆ ಸೆಕ್ಷನ್‌ 2(ಎ) ಅಡಿ ಪ್ರಕರಣ ದಾಖಲಿಸಲಾಗಿದೆ.